ADVERTISEMENT

ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ: ಯುವಕ ಸಾವು

ದಲಿತ ಮುಖಂಡ ಅನಿಲ ಬೆಲ್ದಾರ್ ಸೇರಿ 10 ಜನರ ಬಂಧನ, ನಗರದಾದ್ಯಂತ ಪೊಲೀಸ್ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:44 IST
Last Updated 25 ಮೇ 2017, 6:44 IST
ಬೀದರ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಬುಧವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಒಳಚಿತ್ರದಲ್ಲಿ ಮೃತಪಟ್ಟ ಯುವಕ
ಬೀದರ್‌ನ ಕೆಎಚ್‌ಬಿ ಕಾಲೊನಿಯಲ್ಲಿ ಬುಧವಾರ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಒಳಚಿತ್ರದಲ್ಲಿ ಮೃತಪಟ್ಟ ಯುವಕ   

ಬೀದರ್: ದಲಿತ ಮುಖಂಡ ಅನಿಲ ಬೆಲ್ದಾರ್‌ ಭಾವನ ಮದುವೆ ಮೆರವಣಿಗೆಯ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪು ಪ್ರಥಮ ದರ್ಜೆ ಗುತ್ತಿಗೆದಾರನ ಪುತ್ರನಿಗೆ ಮನಬಂದಂತೆ ಹೊಡೆದ ಕಾರಣ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಗರದ  ಕೆಎಚ್‌ಬಿ ಕಾಲೊನಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಿಲ ಬೆಲ್ದಾರ್‌ ಸೇರಿ 10 ಜನರನ್ನು ಬಂಧಿಸಲಾಗಿದೆ.

ಮೃತ ಯುವಕನನ್ನು ಪ್ರಥಮ ದರ್ಜೆ ಗುತ್ತಿಗೆದಾರ ಮಹಮ್ಮದ್‌ ಜಾವೇದ್‌ ಅಹಮ್ಮದ್ ಅವರ ಹಿರಿಯ ಪುತ್ರ ಮಹಮ್ಮದ್ ಜುನೈದ್‌ಅಹಮದ್  (31) ಎಂದು ಗುರುತಿಸಲಾಗಿದೆ.

ರಾತ್ರಿ 10 ಗಂಟೆಗೆ ಕೆಎಚ್‌ಬಿ ಕಾಲೊನಿಯ ಬಳಿ ಮದುವೆ ಮೆರವಣಿಗೆ ಹೊರಟಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಮನೆಗೆ ಬರುತ್ತಿದ್ದ ಜುನೈದ್‌ ಹಾರ್ನ್‌ ಬಾರಿಸಿ ದಾರಿ ಬಿಡುವಂತೆ ಮೆರವಣಿಗೆಯಲ್ಲಿದ್ದ ಯುವಕರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಯುವಕರು ಪಕ್ಕದಿಂದ ವಾಹನ ಚಲಾಯಿಸಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಈ ವಿಷಯವಾಗಿಯೇ ವಾಗ್ವಾದ ನಡೆದು ಯುವಕರು ಜುನೈದ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಜುನೈದ್‌ಗೆ ಕುಟುಂಬದವರು ಮನೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಒಯ್ದಿದ್ದಾರೆ. ಅಷ್ಟರಲ್ಲೇ ಜುನೈದ್‌ ಕೊನೆಯುಸಿರು ಎಳೆದಿದ್ದರು.

ಹಲ್ಲೆಯಿಂದಾಗಿ ಜುನೈದ್‌ ಮೃತಪಟ್ಟಿರುವ ಸುದ್ದಿ ನಗರದಾದ್ಯಂತ ಹರಡುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆ ಹಾಗೂ ಜುನೈದ್‌ ಮನೆಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿರುವುದನ್ನು ಅರಿತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್‌ ಮಾಡಿದರು.

ಬುಧವಾರ ಬೆಳಿಗ್ಗೆ ಜುನೈದ್‌ನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಧ್ಯಾಹ್ನ ಫತ್ಹೆ ದರ್ವಾಜಾ ಸಮೀಪದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂರು ಪಾಲ್ಗೊಂಡಿದ್ದರು.

10 ಜನರ ಬಂಧನ: ಅನಿಲ್‌ ಬೆಲ್ದಾರ್ ಒಳಗೊಂಡು 10 ಜನ ಸೇರಿ ನನ್ನ ಸಹೋದರನ ಪುತ್ರ ಜುನೈದ್‌ನ  ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಮ್ಮದ್ ಜಾವೇದ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದಲಿತ ಮುಖಂಡ ಅನಿಲ ಬೆಲ್ದಾರ್, ಅವರ ಪತ್ನಿ ಪ್ರಿಯಾಂಕಾ, ಅತ್ತೆ ಪ್ರಮೀಳಾ ಸೇರಿ 10 ಜನರನ್ನು ಬಂಧಿಸಲಾಗಿದೆ. ಆರು ಜನರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್‌ ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ 15ರಿಂದ 20 ಯುವಕರು ಬಲವಾಗಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡಾಲ್ಬಿ ಬಳಸಿ ಮದ್ಯ ಸೇವಿಸಿ ಮದುವೆ ಮೆರವಣಿಗೆ ನಡೆಸುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಇನ್ನು ಮೆರವಣಿಗೆಯಲ್ಲಿ ಡಾಲ್ಬಿ ಬಳಸುವುದನ್ನು ನಿಷೇಧಿಸಲಾಗುವುದು. ಜಿಲ್ಲೆಯಲ್ಲಿ ಡಾಲ್ಬಿ ಬಾಡಿಗೆ ಕೊಡುವ ವ್ಯಕ್ತಿಯ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅನಿಲ ಬೆಲ್ದಾರ್ ಹಾಗೂ ಜಾವೇದ್ ಅವರ ಮನೆ ಅಕ್ಕಪಕ್ಕದಲ್ಲಿಯೇ ಇವೆ. ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ದುಷ್ಕೃತ್ಯದಿಂದಾಗಿ ಕೆಎಚ್‌ಬಿ ಕಾಲೊನಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

*
ಮದುವೆ ಮೆರವಣಿಗೆಯಲ್ಲಿ ಮದ್ಯ ಸೇವಿಸಿ ಕುಣಿದು ಸಂಚಾರಕ್ಕೆ ತಡೆ ಉಂಟು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
-ಪ್ರಕಾಶ ನಿಕ್ಕಂ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.