ADVERTISEMENT

ಗುಣಾತ್ಮಕ ಶಿಕ್ಷಣಕ್ಕೆ ಗುರುಕುಲ ಶಾಲೆ ಮಾದರಿ: ಸಿದ್ದಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:36 IST
Last Updated 19 ಮೇ 2017, 5:36 IST

ಭಾಲ್ಕಿ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಗುರುಕುಲ ಶಾಲೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಾದರಿ ಶಾಲೆ ಆಗಿದೆ ಎಂದು ಗದಗ-ಡಂಬಳದ ಡಾ.ಸಿದ್ದಲಿಂಗ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ವಿಜ್ಞಾನ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಹಿರೇಮಠ ಸಂಸ್ಥೆಯ ಬೆಳ್ಳಿ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘25 ವರ್ಷಗಳ ಹಿಂದೆ ಕೇವಲ 20 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 4 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ಮಹತ್ ಸಾಧನೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆಯುತ್ತಿರುವುದು ಶಾಲೆಯಲ್ಲಿ ದೊರೆಯುತ್ತಿರುವ ಪರಿಣಾಮಕಾರಿ ಶಿಕ್ಷಣಕ್ಕೆ ಸಾಕ್ಷಿ’ ಎಂದು ಹೇಳಿದರು.

ADVERTISEMENT

‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಮಕ್ಕಳು ಪಠ್ಯದ ವಿಷಯದೊಂದಿಗೆ ವಿವಿಧ ಮೂಲಗಳಿಂದ ಜ್ಞಾನ ಸಂಗ್ರಹಿಸಿ, ಪ್ರಯೋಗಾತ್ಮಕವಾಗಿ ಅಭ್ಯಸಿಸಬೇಕು’ ಎಂದು ಕಿವಿಮಾತು ಹೇಳಿದರು.

\ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಗುರಿ ರಹಿತ ಜೀವನ ವ್ಯರ್ಥ. ಹಾಗಾಗಿ, ಎಲ್ಲರೂ ಜೀವನದಲ್ಲಿ ಉನ್ನತವಾದ ಗುರಿಗಳನ್ನು ಹೊಂದಬೇಕು. ಸಾಧಿಸಲೇಬೇಕು ಎನ್ನುವ ಛಲವಿದ್ದರೆ  ಎಲ್ಲವೂ ಸಾಧ್ಯ. ಮಾನವೀಯ, ನೈತಿಕ  ಶಿಕ್ಷಣ ಗುರುಕುಲ ಶಾಲೆಯ ಪ್ರಮುಖ ಧ್ಯೇಯವಾಗಿರುವುದು ಸಂತಸದ ಸಂಗತಿ’ ಎಂದರು.

‘ಯಾರಲ್ಲಿ ಪ್ರತಿಭೆಯ ಜತೆಗೆ ಶಿಸ್ತು, ಶ್ರದ್ಧೆ, ಸಮರ್ಪಣಾ ಮನೋಭಾವ ಇರುತ್ತದೊ ಅವರು ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಕೊನೆಯ ಸ್ಥಾನ ಪಡೆದಿರುವುದು ತುಂಬಾ ಬೇಸರವನ್ನುಂಟು ಮಾಡಿದೆ.  ಈ ಕುರಿತು ಪರಾಮರ್ಶಿಸಿ, ಮುಂದಿನ ದಿನಗಳಲ್ಲಿ ನಿರಂತರ ಪ್ರಯತ್ನದಿಂದ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಆತ್ಮವಿಶ್ವಾಸ ಪರ್ವತವನ್ನೂ ಅಲ್ಲಾಡಿಸುತ್ತದೆ. ದುರ್ಬಲರನ್ನು ದೇವರೂ ಇಷ್ಟ ಪಡುವುದಿಲ್ಲ. ಹಾಗಾಗಿ, ಎಲ್ಲರೂ ಧೈರ್ಯವಂತರಾಗಿ ಬಾಳಬೇಕು. ಬಸವಣ್ಣನವರ ಸಪ್ತ ಸೂತ್ರದ ಕಳಬೇಡ, ಕೊಲಬೇಡ ವಚನವನ್ನು ಸರ್ವರೂ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು  ಹೇಳಿದರು.

ಕೆಎಎಸ್ ಪಾಸಾಗಿರುವ ರಜನಿಕಾಂತ ಚವಾಣ, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಮಹಾಲಿಂಗ ಸ್ವಾಮೀಜಿ, ಎಎಸ್ಪಿ ಹರಿಬಾಬು, ಉದ್ಯಮಿ ಕಾಶಪ್ಪಾ ಧನ್ನೂರ, ಬಸವರಾಜ ಧನ್ನೂರ, ಹಿರಿಯ ಆಡಳಿತಾಧಿಕಾರಿ ಎಸ್.ಬಿ. ಬಿರಾದರ, ಜಿ.ಎಚ್.ಶಿವಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ, ಸಂಜುಕುಮಾರ ಜುಮ್ಮಾ ಇದ್ದರು.ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು.ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮದನ ಗಾಂವ್ಕರ್ ನಿರೂಪಿಸಿದರು.

*

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಬೇಸರ ತರಿಸಿದೆ. ಈ ಸಂಬಂಧ ಪರಾಮರ್ಶಿಸಿ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಲು ಅವಿರತವಾಗಿ ಪ್ರಯತ್ನಿಸಲಾಗುವುದು
ಈಶ್ವರ ಖಂಡ್ರೆ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.