ADVERTISEMENT

ಜ್ಞಾನ ಸಂಪಾದನೆಗೆ ವಸ್ತು ಪ್ರದರ್ಶನ ಸಹಕಾರಿ

ಬಸವರಾಜ ಎಸ್.ಪ್ರಭಾ
Published 23 ಡಿಸೆಂಬರ್ 2017, 9:05 IST
Last Updated 23 ಡಿಸೆಂಬರ್ 2017, 9:05 IST
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ನೋಡಲು ತೆರಳುತ್ತಿರುವ ಸಾರ್ವಜನಿಕರು
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ನೋಡಲು ತೆರಳುತ್ತಿರುವ ಸಾರ್ವಜನಿಕರು   

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಶುಕ್ರವಾರ ಲಿಂ.ಚನ್ನಬಸವ ಪಟ್ಟದ್ದೇವರ 128ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾರ್ವಜನಿಕರಿಗೆ, ಶಾಲಾ, ಕಾಲೇಜು ಮಕ್ಕಳಿಗೆ ವಿಜ್ಞಾನದ ನೈಜ ಜ್ಞಾನವನ್ನು ಸರಳ ರೀತಿಯಲ್ಲಿ ಅರ್ಥೈಸಿಕೊಳ್ಳಲು ಸಹಕಾರಿ ಆಯಿತು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠದ 23 ಪ್ರಾಥಮಿಕ, ಪ್ರೌಢಶಾಲೆಗಳು ಪಾಲ್ಗೊಂಡಿದ್ದವು. ಭೌತ ವಿಜ್ಞಾನದ 60, ರಸಾಯನ ವಿಜ್ಞಾನದ 30, ಜೀವ ವಿಜ್ಞಾನದ 40, ವ್ಯೋಮ, ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ 20 ಸೇರಿದಂತೆ ಒಟ್ಟು 150 ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸುವ ಮೂಲಕ ಜನರಿಂದ ಮೆಚ್ಚುಗೆ ಗಳಿಸಿದರು.

ಸಕಾಲಕ್ಕೆ ಮಳೆ ಆಗದೆ ನೀರಿನ ಅಭಾವ ಉಂಟಾಗುತ್ತಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲೆಡೆ ಚೆಕ್‌ ಡ್ಯಾಂ, ಕೆರೆ, ಕೊಳವೆ ಬಾವಿ ರಿಚಾರ್ಜ್‌ ಫಿಟ್‌ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಬಹುದು ಎನ್ನುವುದನ್ನು ಕರಡ್ಯಾಳ, ಗುರುಕುಲದ ವಿದ್ಯಾರ್ಥಿಗಳಾದ ಬಸವಕಿರಣ, ಗುರುಬಸವ ಮನಮುಟ್ಟುವಂತೆ ಪ್ರಾಯೋಗಿಕವಾಗಿ ವಿವರಿಸಿದರು. ಹನಿ ನೀರಾವರಿ ಕೈಗೊಳ್ಳುವ ಮೂಲಕ ಸ್ವಲ್ಪ ನೀರಿನಲ್ಲಿಯೇ ಹೆಚ್ಚಿನ ಬೆಳೆಗಳನ್ನು ಬೆಳೆಯುವ ಕುರಿತು ಕಮಲನಗರದ ಗುರುಪ್ಪಾ ಟೊಣ್ಣೆ ಶಾಲೆ ಮಕ್ಕಳು ತಿಳಿಸಿದರು.

ADVERTISEMENT

ನಮ್ಮ ದೇಶದ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವ 100 ವರ್ಷಗಳ ಹಳೆಯ ನಾಣ್ಯ, ನೋಟುಗಳನ್ನು ಸಂಗ್ರಹಿಸಿದ ಸಂತಪುರ ಸಿದ್ದರಾಮೇಶ್ವರ ಕಾಲೇಜಿನ ಪ್ರಾಚಾರ್ಯ ನವೀನಕುಮಾರ, ವಿದ್ಯಾರ್ಥಿನಿಯರಾದ ಅಶ್ವಿನಿ, ತೇಜಸ್ವಿನಿ ಅವುಗಳ ಮಹತ್ವ ಕುರಿತು ತಿಳಿಸಿದರು. 30 ವಿವಿಧ ದೇಶಗಳ ನಾಣ್ಯ, ಡಾಲರ್‌ ಕಂಡ ಜನರು ಸಂತಸ, ಅಚ್ಚರಿ ವ್ಯಕ್ತಪಡಿಸಿದರು.

ಅರಣ್ಯ ನಾಶ, ಭಾರಿ ಪ್ರಮಾಣದ ಮಳೆ ಕಾರಣದಿಂದ ಭೂಮಿಯಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಡೆಯಲು ಅರಣ್ಯೀಕರಣ, ಒಡ್ಡು ಹೇಗೆ ಸಹಕಾರಿ ಎಂಬುದರ ಬಗ್ಗೆ ಅನುಭವ ಮಂಟಪ ಸಂತಪುರ ವಿದ್ಯಾರ್ಥಿಗಳು ಹೇಳಿದರು.

ಮನೆಯಲ್ಲಿ ಬಳಕೆ ಮಾಡುವ ಸಿಂಟೆಕ್ಸ್‌ ಟ್ಯಾಂಕ್‌ನಲ್ಲಿ ಪೂರ್ಣ ಪ್ರಮಾಣದ ನೀರು ತುಂಬಿದ ತಕ್ಷಣ ತಾನಾಗಿಯೇ ಸೈರನ್‌ ಬರುವುದು. ನೀರಿನ ಒತ್ತಡದ ಮೂಲಕ ಕಾರ್ಯನಿರ್ವಹಿಸುವ ಹೈಡ್ರೋಲಿಕ್‌ ಕ್ರೇನ್‌, ಉಪಗ್ರಹದ ಮಾದರಿ ಕುರಿತು ಶಿಕ್ಷಕ ಮಲ್ಲಿನಾಥ ಶಿವಪೂರೆ ಮಾರ್ದರ್ಶನದಲ್ಲಿ ಕಮಲನಗರ ಪ್ರೌಢ ಶಾಲೆ ವಿದ್ಯಾರ್ಥಿಗಳು ವಿವರಿಸಿದರು.

ಕೊಳಚೆ ನೀರು ಸಂಸ್ಕರಣ ಘಟಕ, ಎಟಿಎಂ ಮಷಿನ್‌, ಬಯೋಗ್ಯಾಸ್‌ ಕಾರ್ಯ ವಿಧಾನ, ಓಝೋನ್‌ ಪದರದ ವಿನಾಶದ ಬಗ್ಗೆ ಕರಡ್ಯಾಳ ಗುರುಕುಲ ಪ್ರೌಢ ಶಾಲೆ ವಿದ್ಯಾರ್ಥಿಗಳು ವಿವರಣೆ ನೀಡಿದರು.

ಜನಸಾಮಾನ್ಯರಿಗೆ ವಿಜ್ಞಾನದ ಪರಿಪೂರ್ಣ ಮಾಹಿತಿಯನ್ನು ಸರಳ ಪ್ರಯೋಗಗಳ ಮೂಲಕ ತಿಳಿದುಕೊಳ್ಳಲು ಈ ವಸ್ತು ಪ್ರದರ್ಶನ ತುಂಬಾ ಸಹಕಾರಿ ಆಗಿದೆ.
ಸೂರ್ಯಕಾಂತ ಪಾಟೀಲ,
ಕ್ಷೇತ್ರ ಶಿಕ್ಷಣಾಧಿಕಾರಿ ಭಾಲ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.