ADVERTISEMENT

ಟಿಕೆಟ್‌ ಕೊಡಿ; ಇಲ್ಲ ಪರಿಣಾಮ ಎದುರಿಸಿ

ಮೂರೂ ಪಕ್ಷಗಳಿಗೆ ಬೀದರ್‌ ಮರಾಠಾ ಸಮಾಜ ಮುಖಂಡರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:40 IST
Last Updated 4 ಏಪ್ರಿಲ್ 2018, 10:40 IST

ಬೀದರ್: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿಲ್ಲೆಯ ಮರಾಠಾ ಸಮಾಜದ ಕನಿಷ್ಠ ಇಬ್ಬರು ಅಭ್ಯರ್ಥಿಗಳಿಗೆ ವಿಧಾನಸಭಾ ಚುನಾವಣೆಯ ಪಕ್ಷದ ಟಿಕೆಟ್‌ ಕೊಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಲು ಸಿದ್ಧರಿರಬೇಕು ಎಂದು ಜಿಲ್ಲೆಯ ಮರಾಠಾ ಸಮಾಜದ ಮುಖಂಡರು ಎಚ್ಚರಿಕೆ ನೀಡಿದರು.

‘ಮರಾಠಾ ಸಮಾಜ ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ. ಆದ್ದರಿಂದ ಬಸವಕಲ್ಯಾಣದಲ್ಲಿ ಮಾರುತಿರಾವ್‌ ಮುಳೆ ಹಾಗೂ ಭಾಲ್ಕಿಯಲ್ಲಿ ಶ್ಯಾಮ ಮೋರೆ ಅವರಿಗೆ ಬಿಜೆಪಿ ಟಿಕೆಟ್‌ ಕೊಡಬೇಕು’ ಎಂದು ಕ್ಷತ್ರೀಯ ಮರಾಠಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್‌ ಮಾನಕರಿ ಹಾಗೂ ವಕೀಲ ನಾರಾಯಣ ಗಣೇಶ ಮಂಗಳವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬಸವಕಲ್ಯಾಣ ಹಾಗೂ ಔರಾದ್‌ ಕ್ಷೇತ್ರದಲ್ಲಿ ತಲಾ 50 ಸಾವಿರ ಮರಾಠರು ಇದ್ದರೆ, ಭಾಲ್ಕಿ ಕ್ಷೇತ್ರವೊಂದರಲ್ಲೇ 75 ಸಾವಿರ ಮರಾಠರು ನೆಲೆಸಿದ್ದಾರೆ. ಮರಾಠಾ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಹಾಗೂ ಶಾಹು ಮಹಾರಾಜ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದಲ್ಲಿ ಬೃಹತ್‌ ಮೆರವಣಿಗೆ ನಡೆಸಿದರೂ ಕಾಂಗ್ರೆಸ್‌ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಸಮಾಜ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದೆ’ ಎಂದು ತಿಳಿಸಿದರು.

ADVERTISEMENT

‘ಬಿ.ಎಸ್. ಯಡಿಯೂರಪ್ಪ ಅವರು ಟಿಕೆಟ್‌ ಕೊಡುವ ಭರವಸೆ ನೀಡಿದ ಮೇಲೆ ಮಾರುತಿರಾವ್‌ ಮುಳೆ ಬಿಜೆಪಿಗೆ ಸೇರಿಕೊಂಡಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಈಗಿನ ರಾಜಕೀಯ ಬೆಳವಣಿಗೆಯು ಬೇಸರ ಉಂಟು ಮಾಡಿದೆ. ಬಿಜೆಪಿ ಮುಖಂಡರು ಮಾತಿಗೆ ತಪ್ಪಿದರೆ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಮರಾಠಾ ಸಮಾಜದ ಮುಖಂಡರಾದ ಸುಭಾಷ ಬಿರಾದಾರ, ಬಾಲಾಜಿ ಚಂಡಕಾಪುರೆ, ರಂಗರಾವ್ ಪಾಟೀಲ, ವೆಂಕಟರಾವ್‌ ನೆಲವಾಡೆ, ಪಿರಾಜಿರಾವ್‌ ಬಿರಾದಾರ, ಗುಣವಂತರಾವ್‌ ಶಿಂಧೆ, ಪ್ರಭಾಕರ ಕಾರಭಾರಿ, ದಿಗಂಬರರಾವ್ ಮಾನಕರಿ, ಪ್ರದೀಪ ಬಿರಾದಾರ, ವಿಶ್ವನಾಥ
ಶಿಂಧೆ, ಶಿವಾಜಿ ತಾಡಮಲ್ಲೆ ಇತರರು ಇದ್ದರು.

ಹಿಂಜರಿಯುವುದಿಲ್ಲ

ಬೀದರ್‌: ‘ಮರಾಠಾ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಟಿಕೆಟ್‌ ಕೊಡದಿದ್ದರೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಜತೆ ಸೇರಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಿಂಜರಿಯುವುದಿಲ್ಲ’ ಎಂದು ಮರಾಠಾ ಸಮಾಜದ ಮುಖಂಡ ನಿವೃತ್ತ ಪ್ರಾಚಾರ್ಯ ನಾಮದೇವರಾವ್ ಪವಾರ ಎಚ್ಚರಿಕೆ ನೀಡಿದರು.‘ಬೀದರ್‌ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 19 ರಷ್ಟು ಮರಾಠರು ಇದ್ದಾರೆ. ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಟಿಕೆಟ್‌, ಭಾಲ್ಕಿ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಹಾಗೂ ಬೀದರ್‌ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಅನ್ನು ಮರಾಠಾ ಸಮಾಜದ ಅಭ್ಯರ್ಥಿಗೆ ಕೊಡಬೇಕು’ಎಂದು ಅವರು ಒತ್ತಾಯಿಸಿದರು.

**

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಸಮಾಜದವರಿಗೆ ಕೊಡಲೇಬೇಕು. ಇಲ್ಲದಿದ್ದರೆ ಸಮಾಜ ಬಿಜೆಪಿ ವಿರುದ್ಧ ಮತ ಚಲಾಯಿಸಲಿದೆ – ನಾರಾಯಣ ಗಣೇಶ,ವಕೀಲ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.