ADVERTISEMENT

ಡಾಂಬರು ರಸ್ತೆಗೆ ಕಾಯುತ್ತಿರುವ ಗ್ರಾಮ

ಮಾಣಿಕ ಆರ್ ಭುರೆ
Published 12 ಡಿಸೆಂಬರ್ 2017, 9:03 IST
Last Updated 12 ಡಿಸೆಂಬರ್ 2017, 9:03 IST

ಬಸವಕಲ್ಯಾಣ: ಡಾಂಬರೀಕರಣಕ್ಕಾಗಿ ಕಾಯುತ್ತಿರುವ ಇಲ್ಲಾಳ ಮತ್ತು ಮಂಠಾಳದಿಂದ ಬರುವ ರಸ್ತೆ, ರಸ್ತೆಯಲ್ಲಿ ಹರಿಯುವ ಚರಂಡಿ ನೀರು, ನಿರ್ಮಾಣವಾಗದ ಸಿ.ಸಿ ರಸ್ತೆ...
ಇದು ಜಾಫರವಾಡಿ ಗ್ರಾಮದ ಸ್ಥಿತಿ.

‘ತಾಲ್ಲೂಕು ಸ್ಥಳದಿಂದ 15 ಕಿ.ಮೀ ಅಂತರದಲ್ಲಿ ಊರಿದೆ. ಮಧ್ಯದಲ್ಲಿನ ಇಲ್ಲಾಳ ಗ್ರಾಮದವರೆಗೆ ಡಾಂಬರು ರಸ್ತೆ ಇದೆ. ಆದರೆ ಅಲ್ಲಿಂದ ಮಾತ್ರ ಕೆಂಪು ಮಣ್ಣು ಹರಡಿರುವ ಕಚ್ಚಾ ರಸ್ತೆಯಿದೆ. ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ದೂಳು, ವಾಹನಗಳು ಸಂಚರಿಸಿದಾಗ ದೂಳಿನ ಮಜ್ಜನ ಹಾಗೂ ಇದಲ್ಲದೆ ಗುಡ್ಡದ ಮೇಲಿರುವ ಓಣಿಯಲ್ಲಿನ ಮನೆಗಳಿಗೆ ಈ ದೂಳು ಸೇರುತ್ತಿರುವ ಕಾರಣ ಇಲ್ಲಿನ ನಿವಾಸಿಗಳು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆ ಡಾಂಬರೀಕರಣ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ಗ್ರಾಮದ ಪ್ರಮುಖರಾದ ಶಾಂತವಿಜಯ ಪಾಟೀಲ.

`ಸರ್ಕಾರಿ ಪ್ರಾಥಮಿಕ ಶಾಲೆ ಗುಡ್ಡದ ಮೇಲಿರುವ ಕಾರಣ ಹಳೆಯ ಗ್ರಾಮದಿಂದ ಶಾಲೆಗೆ ಬರುವ ರಸ್ತೆಯ ಸುಧಾರಣೆಯೂ ಕೈಗೊಳ್ಳಬೇಕಾಗಿದೆ. ಗುಡ್ಡವನ್ನು ಅಗೆದು ರಸ್ತೆ ನಿರ್ಮಿಸಿ ದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲದಲ್ಲಿ ಇಲ್ಲಿಂದ ನೀರು ಹರಿಯುವ ಕಾರಣ ಶಾಲೆಗೆ ಬರುವ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

‘ಬಸವಕಲ್ಯಾಣದಿಂದ ಜಾಫರವಾಡಿ ಮತ್ತು ಗುಂಡೂರ ಮಾರ್ಗವಾಗಿ ಕೊಹಿನೂರ ಮೂಲಕ ಕಲಬುರ್ಗಿಗೆ ಮಾರ್ಗವಿದೆ. ಆದರೆ, ಇಲ್ಲಾಳದಿಂದ ಕಚ್ಚಾ ರಸ್ತೆ ಹಾಗೂ ಜಾಫರವಾಡಿಯಿಂದ ಗುಂಡೂರ ವರೆಗಿನ ರಸ್ತೆಯೂ ಹದಗೆಟ್ಟಿರುವುದರಿಂದ ವಾಹನಗಳು ಸಂಚರಿಸುತ್ತಿಲ್ಲ. ಕಲಬುರ್ಗಿಗೆ ಬಸ್ ಸಂಚರಿಸುವಂತೆ ಕ್ರಮ ತೆಗೆದು ಕೊಳ್ಳಬೇಕು ಎಂದು ಕೇಳಿಕೊಂಡರೆ ರಸ್ತೆ ಸರಿಯಿಲ್ಲ ಎಂದು ಬಸ್ ಘಟಕ ವ್ಯವಸ್ಥಾಪಕರು ಹೇಳುತ್ತಿದ್ದಾರೆ’ ಎಂದು ಪರಮೇಶ್ವರ ಅವರು ಹೇಳಿದ್ದಾರೆ.

ಗ್ರಾಮದಲ್ಲಿ ಮರಳುಮಿಶ್ರಿತ ಕಪ್ಪು ಮಣ್ಣು ಇದೆ. ಆದ್ದರಿಂದ ಕಟ್ಟಡಗಳ ನಿರ್ಮಾಣಕ್ಕೆ ಆಳವಾದ ಅಡಿಪಾಯ ಹಾಕಬೇಕಾಗುತ್ತದೆ. ಇದಕ್ಕಾಗಿಯೇ ಹೆಚ್ಚಿನ ಹಣ ವ್ಯಯ ಆಗುವುದರಿಂದ ಕೆಲ ಮನೆಗಳನ್ನು ಸಮೀಪದ ಗುಡ್ಡದ ಮೇಲೆ ಸ್ಥಳಾಂತರಿಸಲಾಗಿದೆ. ಸರ್ಕಾರದಿಂದ ಮಂಜೂರಾದ ಮನೆಗಳನ್ನು ಕೂಡ ಇಲ್ಲಿ ಕಟ್ಟಲಾಗಿದೆ. ಆದರೆ ಇಲ್ಲಿ ಸೌಲಭ್ಯಗಳ ಕೊರತೆಯಿದೆ. `ಈ ಓಣಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಬೇಕು. ಹಳೆಯ ಗ್ರಾಮದಲ್ಲಿಯೂ ಕೆಲವೆಡೆ ಚರಂಡಿ ನಿರ್ಮಾಣ ಮಾಡಬೇಕು’ ಎಂದು ನಾಗಣ್ಣ ಒತ್ತಾಯಿಸಿದ್ದಾರೆ.

* * 

ರಸ್ತೆ ಡಾಂಬರೀಕರಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಸಲ ಮನವಿ ಸಲ್ಲಿಸಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ
ಶಾಂತವಿಜಯ ಪಾಟೀಲ ಗ್ರಾಮದ ಪ್ರಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.