ADVERTISEMENT

ಡೆಂಗಿ ಪತ್ತೆ: ಗ್ರಾಮಕ್ಕೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 6:38 IST
Last Updated 1 ಸೆಪ್ಟೆಂಬರ್ 2017, 6:38 IST
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ ಹಾಗೂ ಅಧಿಕಾರಿಗಳು ಗುರುವಾರ ಹುಮನಾಬಾದ್ ತಾಲ್ಲೂಕು ಬೇನಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ ಹಾಗೂ ಅಧಿಕಾರಿಗಳು ಗುರುವಾರ ಹುಮನಾಬಾದ್ ತಾಲ್ಲೂಕು ಬೇನಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಹುಮನಾಬಾದ್: ತಾಲ್ಲೂಕಿನ ವಿವಿಧ ಕಡೆ ಡೆಂಗಿ ಪ್ರಕರಣ ಪತ್ತೆಯಾದ ಕಾರಣ ಜಿಲ್ಲಾ ಮಲೇರಿಯಾ ಅಧಿಕಾರಿಗಳ ತಂಡ ಗುರುವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ತಾಲ್ಲೂಕಿನ ಬೇನಚಿಂಚೋಳಿ ಗ್ರಾಮದಲ್ಲಿ 3 ಡೆಂಗಿ ಪರಕರಣ ಪತ್ತೆಯಾಗಿದ್ದು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ ಗ್ರಾಮಕ್ಕೆ ಭೇಟಿ ನೀಡಿ, ‘ನೀರು ತುಂಬಿದ ಬ್ಯಾರಲ್‌ ಯಾವುದೇ ಕಾರಣಕ್ಕೂ ತೆರೆದಿಡದೆ ಸದಾ ಮುಚ್ಚಿಡುವಂತೆ’ ಸಲಹೆ ನೀಡಿದರು.

‘ವಾರದಲ್ಲಿ ಕನಿಷ್ಠ ಎರಡು ಬಾರಿ ಬ್ಯಾರೆಲ್‌ ಸ್ವಚ್ಛಗೊಳಿಸಿ, ಬಿಸಿಲಲ್ಲಿ ಒಣಗಿಸಿದ ನಂತರ ಮತ್ತೆ ಹೊಸದಾಗಿ ನೀರು ತುಂಬಬೇಕು. ಮನೆ ಸುತ್ತಲು ಅನಗತ್ಯ ನೀರು ಸಂಗ್ರಹಕ್ಕೆ ಅವಕಾಶ ಕಲ್ಪಿಸದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜ್ವರ, ಶೀತ, ಸುಸ್ತಾಗಿರುವುದು ಇತ್ಯಾದಿ ಸಣ್ಣಪುಟ್ಟ ಕಾಯಿಲೆ ಬಂದಲ್ಲಿ ನಿರ್ಲಕ್ಷ್ಯ ವಹಿಸದೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

‘ಡೆಂಗಿ ಕಾಯಿಲೆಗೆ ಚಿಕಿತ್ಸೆ ಇದ್ದು, ಇದರಿಂದ ಪ್ರಾಣಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಮುನ್ನೆಚ್ಚರಿಕೆ ವಹಿಸಬೇಕು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಲಹೆ ಪಾಲಿಸಬೇಕು’ ಎಂದು ಜಿಲ್ಲಾ ಆರೋಗ್ಯ ಸಹಾಯಕ ಮಲ್ಲಿಕಾರ್ಜುನ ಸಲಹೆ ನೀಡಿದರು.

ADVERTISEMENT

‘ಕೆಲವು ಜನರು ಸಣ್ಣಪುಟ್ಟ ಕಾಯಿಲೆ ಬಂದ ತಕ್ಷಣ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದು, ಪ್ರಕರಣ ಕುರಿತು ಖಚಿತ ಮಾಹಿತಿ ಇಲ್ಲದಿದ್ದರೂ ಡೆಂಗಿ ಎಂದು ಸಂಶಯ ಮಾಡುತ್ತಿದ್ದಾರೆ. ಕಾರಣ ಸಾರ್ವಜನಿಕರು ಖಾಸಗಿ ವೈದ್ಯರ ಮಾತಿಗೆ ಕಿವಿಗೊಡದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು’ ಎಂದು ತಿಳಿಸಿದರು.

ಅಧಿಕಾರಿಗಳ ತಂಡ ಸ್ಥಳೀಯ ಸಂಗಮೆಶ್ವರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿತು. ಡಾ.ಶಿವಕಾಂತ, ತಾಲ್ಲೂಕು ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.