ADVERTISEMENT

ದಶಕ ಕಳೆದರೂ ಸಮರ್ಪಕ ರಸ್ತೆ ಕಾಣದ ಗೌಡಗಾಂವ

ಗ್ರಾಮದಲ್ಲಿ ಹೆಚ್ಚಿದ ಸಮಸ್ಯೆ: ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ–ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:42 IST
Last Updated 21 ಫೆಬ್ರುವರಿ 2017, 5:42 IST
ದಶಕ ಕಳೆದರೂ ಸಮರ್ಪಕ ರಸ್ತೆ ಕಾಣದ ಗೌಡಗಾಂವ
ದಶಕ ಕಳೆದರೂ ಸಮರ್ಪಕ ರಸ್ತೆ ಕಾಣದ ಗೌಡಗಾಂವ   

ಭಾಲ್ಕಿ: ದಶಕದಿಂದ ಹದಗೆಟ್ಟ ರಸ್ತೆ, ಎರಡು ವರ್ಷದಿಂದ ಗ್ರಾಮಕ್ಕೆ ಬಾರದ ಬಸ್‌, ಶಾಲೆ ಮಕ್ಕಳಿಗೆ ಆಟದ ಮೈದಾನದ ಕೊರತೆ, ಕುಡಿಯುವ ನೀರಿನ, ಶೌಚಾಲಯ ಸಮಸ್ಯೆ. ಇದು ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದಲ್ಲಿರುವ ರಾಚಪ್ಪ ಗೌಡಗಾಂವ ಗ್ರಾಮದ ದುಃಸ್ಥಿತಿ.

ಒಂದು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ಮೋರಂಬಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ. 15 ವರ್ಷಗಳಿಂದ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಜನರು ಪರದಾಡುವಂತಾಗಿದೆ.

ಹದಗೆಟ್ಟ ರಸ್ತೆ ಕಾರಣ ನೀಡಿ ಎರಡು ವರ್ಷಗಳಿಂದ ಸರ್ಕಾರಿ ಬಸ್‌ ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ಶಾಲೆ–ಕಾಲೇಜು ವಿದ್ಯಾರ್ಥಿ, ರೈತರು, ರೋಗಿಗಳು ತೊಂದರೆಪಡುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

‘ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮ ಸಮೀಪದಲ್ಲಿರುವ ಸೇತುವೆ ಕಿರಿದಾಗಿದ್ದು, ಮಳೆಗಾಲದಲ್ಲಿ ಹೆಚ್ಚಿನ ಮಳೆಯಾದರೆ ಸೇತುವೆ ಮೇಲಿನಿಂದ ನೀರು ಹರಿಯುತ್ತದೆ. ಇದರಿಂದ ತಾಲ್ಲೂಕು ಕೇಂದ್ರ ಒಳಗೊಂಡಂತೆ ಇತರ ಹಳ್ಳಿಗಳೊಂದಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಸೇತುವೆಗೆ ಎರಡು ಬದಿಗಳಲ್ಲಿ ರಕ್ಷಣಾ ಗೋಡೆ ಇಲ್ಲ. ಇದರಿಂದ ಪ್ರಯಾಣಿಕರು ಭಯದಲ್ಲೇ ಸಂಚರಿಸುವಂತಾಗಿದೆ’ ಎಂದು ಗ್ರಾಮದ ಮಹಾದೇವ ಸಜ್ಜನಶೆಟ್ಟಿ, ರಾಚಪ್ಪ ಹುಡ್ಗೆ ದೂರುತ್ತಾರೆ.

‘ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಮೂರು ತಿಂಗಳಿನಿಂದ ಮನೆಯ ನಲ್ಲಿಗಳಿಗೆ ನೀರು ಬರುತ್ತಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೊಸ ಕೊಳವೆ ಬಾವಿ ಕೊರೆಯಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಶಿವಾಜಿ ಪಾಟೀಲ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಇದರಿಂದ ಮಹಿಳೆಯರು ತೊಂದರೆ ಪಡುವಂತಾಗಿದೆ. ಬಯಲು ಶೌಚಾಲಯದಿಂದ ರೋಗ ಭೀತಿ ಹೆಚ್ಚಿದೆ.
ಗ್ರಾಮದಲ್ಲಿನ ಚರಂಡಿಗಳಲ್ಲಿ ಕೊಳಚೆ ಸಂಗ್ರಹಗೊಂಡಿದ್ದು, ದುರ್ವಾಸನೆ ಬೀರುತ್ತಿದೆ.  ಸ್ವಚ್ಛತೆ ಕಾರ್ಯಕ್ಕೆ ಸಂಬಂಧಿತರು ಮುಂದಾಗುತ್ತಿಲ್ಲ’ ಎಂದು ದೂರುತ್ತಾರೆ ಅವರು.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನ ಇಲ್ಲ. ಇದರಿಂದ ವಿದ್ಯಾರ್ಥಿಗಳು ಇರುವ ಚಿಕ್ಕ ಸ್ಥಳದಲ್ಲೇ ಆಟವಾಡಬೇಕಾದ ಸ್ಥಿತಿ ಇದೆ. ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಇದೇ 22ರಂದು ಭಾಲ್ಕಿ–ಬಸವಕಲ್ಯಾಣ ಮುಖ್ಯ ರಸ್ತೆಯಲ್ಲಿ ರಸಸ್ತೆರೋಕೊ ನಡೆಸುತ್ತಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸುತ್ತಾರೆ.

ಗ್ರಾಮದಲ್ಲಿನ ರಸ್ತೆ ದುರಸ್ತಿಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ಚರಂಡಿ ಸ್ವಚ್ಛಗೊಳಿಸಬೇಕು. ಶೌಚಾಲಯ ನಿರ್ಮಿಸಬೇಕು. ನೀರಿನ ಸಮಸ್ಯೆ ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

-ಬಸವರಾಜ್‌ ಎಸ್.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT