ADVERTISEMENT

ದೇಶದ ಪರಂಪರೆಯ ರಕ್ಷಣೆ ಎಲ್ಲರ ಹೊಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 5:57 IST
Last Updated 8 ನವೆಂಬರ್ 2017, 5:57 IST

ಬಸವಕಲ್ಯಾಣ: ‘ದೇಶದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆ ಎಲ್ಲರ ಹೊಣೆಯಾಗಿದೆ’ ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ರಾಜೇಶ್ವರದ ಹಿರೇಮಠ ದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಠಾಧೀಶರ ಒಕ್ಕೂಟದ ಸಮಾವೇಶ ಮತ್ತು ಹಾನಗಲ್ ಗುರುಕುಮಾರೇಶ್ವರರ 150 ನೇ ಜಯಂತಿ ಹಾಗೂ ಕಾರ್ತಿಕ ದೀಪೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಗುರು ಕುಮಾರೇಶ್ವರರು ಶಿವಯೋಗ ಮಂದಿರದಲ್ಲಿ ಮಠಾಧೀಶರಿಗೆ ತರಬೇತಿ ನೀಡುವ ಸಂಸ್ಥೆ ಸ್ಥಾಪಿಸಿ ಪರಂಪರೆಯನ್ನು ಪೋಷಿಸಿದ್ದಾರೆ. ಧರ್ಮೋಪದೇಶ ಮಾಡುವ ಪಡೆ ಕಟ್ಟಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿಸಿ ಧರ್ಮದ ಉಳಿವಿಗೆ ಪ್ರಯತ್ನಿಸಿದ್ದಾರೆ. ವೀರೇಶ್ವರ ಪುಣ್ಯಾಶ್ರಮ ಕಟ್ಟಿ ಅಂಧ, ಅನಾಥರಿಗೆ ಆಶ್ರಯ ನೀಡಿ ಅದ್ವಿತೀಯ ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು.

ಮಠಾಧೀಶರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ವೀರಶೈವ ಲಿಂಗಾಯತ ಬೇರೆ, ಲಿಂಗಾಯತ ಧರ್ಮ ಬೇರೆ ಎಂದು ಪ್ರತಿಪಾದಿಸಿ ಕೆಲವರು ಸಮಾಜ ಒಡೆಯುತ್ತಿರುವುದು ಸರಿಯಲ್ಲ. ವೀರಶೈವ ಧರ್ಮ ಪ್ರಾಚೀನವಾದದ್ದು, ಎಲ್ಲರೂ ಇದೇ ಧರ್ಮದವರಾಗಿದ್ದೇವೆ. ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಈಚೆಗೆ ವೀರಶೈವರ ಬಗ್ಗೆ ಅವಹೇಳನಕಾರಿ ಮಾತಾಡಿರುವುದು ಮತ್ತು ಸುಲಫಲ್ ಮಠದ ಸ್ವಾಮೀಜಿಗಳು ರಂಭಾಪುರಿ ಪೀಠಾಧ್ಯಕ್ಷರ ಬಗ್ಗೆ ಇಲ್ಲಸಲ್ಲದನ್ನು ಹೇಳಿರುವುದು ಖಂಡನೀಯ’ ಎಂದರು.

ADVERTISEMENT

ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಮಾತೆ ಮಹಾದೇವಿ ಮತ್ತು ಸಚಿವ ಎಂ.ಬಿ.ಪಾಟೀಲ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸಿ ಕೊಡುವ ಹೆಸರಿನಲ್ಲಿ ಸಮಾವೇಶಗಳನ್ನು ಮಾಡಿ, ಸಮಾಜದಲ್ಲಿ ಗದ್ದಲದ ವಾತಾವರಣ ನಿರ್ಮಿಸಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಲಿಂಗಾಯತರು, ವೀರಶೈವರು ಒಂದೇ ಆಗಿದ್ದಾರೆ’ ಎಂದರು.

ಹಿರೇಮಠದ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಧರ್ಮದಿಂದ ಶಾಂತಿ, ನೆಮ್ಮದಿ ದೊರಕುತ್ತದೆ. ಆದ್ದರಿಂದ ಮಠಾಧೀಶರು ಧರ್ಮಕಾರ್ಯವನ್ನು ವಿಸ್ತರಿಸಿ ಸಮಾಜದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಬೇಕು. ತಮ್ಮ ಮಠದಿಂದ ಶೈಕ್ಷಣಿಕ, ಸಾಮಾಜಿಕ ಕಾರ್ಯ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು. ಶಿವಣಿ ಹಾವಗಿಲಿಂಗೇಶ್ವರ ಶಿವಾ ಚಾರ್ಯರು, ಹಿರಿಯ ಮುಖಂಡ ಕೇಶಪ್ಪ ಬಿರಾದಾರ, ಅಹ್ಮದಪಾಶಾ ಪೂಜಾರಿ, ಶಿವರಾಜ ಸೀಗಿ ಮಾತನಾಡಿದರು.

ಒಕ್ಕೂಟದ ಗೌರವಾಧ್ಯಕ್ಷರಾದ ಹುಡಗಿ ವೀರೂಪಾಕ್ಷ ಶಿವಾಚಾರ್ಯ, ಹಾರಕೂಡ ಚನ್ನವೀರ ಶಿವಾಚಾರ್ಯ ಹಾಗೂ ಅಧ್ಯಕ್ಷ ಜಯಶಾಂತಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು ಹುಮನಾಬಾದ್ ಗಂಗಾಧರ ಶಿವಾಚಾರ್ಯರು, ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವಘನಲಿಂಗ ರುದ್ರಮುನಿ ಶಿವಾಚಾರ್ಯರು, ಸಾಯಗಾಂವ ಶಿವಾನಂದ ಸ್ವಾಮೀಜಿ, ಕಲ್ಲೂರು ಮೃತ್ಯುಂಜಯ ಸ್ವಾಮಿ, ಡೊಂಗರಗಾಂವ ಉದಯರಾಜೇಂದ್ರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ಹುಡಗಿ ಚನ್ನಮಲ್ಲ ಸ್ವಾಮೀಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.