ADVERTISEMENT

‘ನಗರದಲ್ಲಿ ಎಫ್.ಎಂ ರೇಡಿಯೊ ಆರಂಭವಾಗಲಿ’

ಕಲಾಂಜಲಿ ಸಾಹಿತ್ಯ ಸಮ್ಮೇಳನದಲ್ಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 6:55 IST
Last Updated 6 ಮಾರ್ಚ್ 2017, 6:55 IST
ಬೀದರ್: ನಗರದಲ್ಲಿ ಎಫ್‌.ಎಂ. ರೇಡಿಯೊ ಆರಂಭಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಮಾಣಿಕಪ್ಪ ಬಿರಾದಾರ ಅಭಿಪ್ರಾಯಪಟ್ಟರು.
 
ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಮಂದಾರ ಕಲಾವಿದರ ವೇದಿಕೆ, ರಾಜ್ಯ ಸಿರಿಗನ್ನಡ ವೇದಿಕೆಯಿಂದ  ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಕಲಾಂಜಲಿ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಭಾಷಣ ಮಾಡಿದರು.
 
ಎಫ್‌.ಎಂ. ರೇಡಿಯೊದಿಂದ  ಉಪಯುಕ್ತ ಮಾಹಿತಿ ದೊರೆಯುತ್ತದೆ. ನಗರದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು. ಬೀದರ್ ವಾಯುನೆಲೆಯಿಂದ ವಿಮಾನಯಾನ ಸೇವೆ ಶುರುವಾಗಬೇಕು ಎಂದು ಹೇಳಿದರು.
 
ಗಡಿಭಾಗದಲ್ಲಿ ಕನ್ನಡ ಸಾಹಿತ್ಯ, ಸಂಗೀತ, ಕಲೆಗಳು ಪ್ರೋತ್ಸಾಹವಿಲ್ಲದೆ ಸೊರಗುತ್ತಿವೆ.  ಗಡಿಭಾಗದಲ್ಲಿ ಹೆಚ್ಚೆಚ್ಚು ಕನ್ನಡ ಶಾಲೆಗಳು ಸ್ಥಾಪಿಸಿ, ಕನ್ನಡ ಪುಸ್ತಕ ಒದಗಿಸಬೇಕಿದೆ ಎಂದರು. ಗಡಿಗೆ ಭಾಗದ ಔರಾದ್‌ ಹಾಗೂ ಭಾಲ್ಕಿ ತಾಲ್ಲೂಕಿನ  ಗ್ರಾಮಸ್ಥರಿಗೆ   ಕನ್ನಡ  ಕಲಿಸಬೇಕಾಗಿದೆ.  ವಯಸ್ಕರ ಶಿಕ್ಷಣ ತರಗತಿ  ಅಗತ್ಯ ಎಂದು ಹೇಳಿದರು.
 
ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಭಾಷೆ ಅಳವಿನ ಅಂಚಿನಲ್ಲಿದೆ. ಭಾಷೆ ಉಳಿಸಿ ಬೆಳೆಸಬೇಕು ಅಂದರೆ ಮೊದಲು ಕನ್ನಡಿಗರು ಮಮ್ಮಿ ಡ್ಯಾಡಿ ಎಂಬ ಸಂಸ್ಕೃತಿ ಬಿಟ್ಟು, ಅಪ್ಪ–ಅಮ್ಮ ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. 
 
ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು. ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೊರ್ಗಿ ಸಚ್ಚಿದಾನಂದ ಸ್ವಾಮೀಜಿ, ಸಾಹಿತಿ ಡಾ. ಸೋಮನಾಥ ಯಾಳವಾರ, ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ,  ಪ್ರಮುಖರಾದ ಶಿವಶರಣಪ್ಪ ವಾಲಿ, ಎಸ್‌.ವಿ.ಕಲ್ಮಠ, ವಿಜಯಕುಮಾರ ಸೋನಾರೆ, ಉಪಸ್ಥಿತರಿದ್ದರು. ಮಾಣಿಕರಾವ್‌ ಬಿರಾದಾರ ಬರೆದ ‘ಮಹಾರಾಷ್ಟ್ರ ಗಡಿಯ ಜಾನಪದ ಗೀತೆಗಳು’ ಪುಸ್ತಕ ಹಾಗೂ ‘ಕುಸುಮಾಂಜಲಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
 
ಸಮ್ಮೇಳನ ಸರ್ವಾಧ್ಯಕ್ಷ ಮಾಣಿಕರಾವ್ ಬಿರಾದಾರ ಅವರ ಮೆರವಣಿಗೆ ನಡೆಯಿತು. ಬಸವ ತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜನಾಥ ಕಮಠಾಣೆ ಮೆರವಣಿಗೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.