ADVERTISEMENT

ನಾಮಾಂಕಿತ ಕಂಪೆನಿಗಳ ನೆಚ್ಚಿನ ಐಟಿಐ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:17 IST
Last Updated 15 ಜುಲೈ 2017, 7:17 IST

ಬೀದರ್‌: ಜಿಲ್ಲೆಯಲ್ಲಿ ಕೈಗಾರಿಕೆಗಳ ಕೊರತೆ ಇದ್ದರೂ ಕೈಗಾರಿಕೆ ತರಬೇತಿಗೆ ಯುವಕರನ್ನು ಆಕರ್ಷಿಸಿ ಶಿಕ್ಷಣ ಪೂರೈಸಿದ ವರ್ಷದಲ್ಲೇ ನಾಮಾಂಕಿತ ಕಂಪೆನಿಗಳಲ್ಲಿ ಉದ್ಯೋಗ ಕಲ್ಪಿಸಿಕೊಡುವಲ್ಲಿ ಇಲ್ಲಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ  ಮುಂಚೂಣಿಯಲ್ಲಿದೆ. ಬೋಧಕ ಸಿಬ್ಬಂದಿ ಕೊರತೆಯ ಮಧ್ಯೆಯೂ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಿ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದ ಕೈಗಾರಿಕೆಗಳ ಗಮನ ಸೆಳೆದಿದೆ.

1975ರ ಆಗಸ್ಟ್‌ನಲ್ಲಿ ಐಟಿಐ ಆರಂಭವಾದಾಗ ಎಲೆಕ್ಟ್ರಿಷಿಯನ್‌ ಹಾಗೂ ಫಿಟ್ಟರ್‌ ವಿಭಾಗದಲ್ಲಿ ಒಟ್ಟು 32 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸ್ತುತ ಎಂಟು ವಿಭಾಗಗಳಲ್ಲಿ 400 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ತರಬೇತಿ ಪೂರೈಸಿ ಹೊರ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆಯುತ್ತಿದ್ದಾರೆ. ನಾಲ್ಕು ವರ್ಷಗಳ ಅವಧಿಯಲ್ಲಿ ಒಬ್ಬ ವಿದ್ಯಾರ್ಥಿಯೂ ನಿರುದ್ಯೋಗಿ ಆಗಿ ಗುರುತಿಸಿಕೊಂಡಿಲ್ಲ.

ಟಾಟಾ, ಟಾಟಾ ಅಡ್ವಾನ್ಸ್ ಸಿಸ್ಟಮ್‌, ಕಿರ್ಲೋಸ್ಕರ್, ಹೊಂಡಾ, ಮಹಿಂದ್ರಾ ಆ್ಯಂಡ್‌ ಮಹಿಂದ್ರಾ, ಐಟಿಸಿ, ಉಷಾ ಇಂಟರ್‌ನ್ಯಾಷನಲ್, ಹಾಯರ್‌ ಕಂಪೆನಿ, ಮುಂಗೆ ಬ್ರದರ್ಸ್, ಇಂಡೊ ಆಟೊಟೆಕ್‌ ಮತ್ತಿತರ ಕಂಪೆನಿಗಳು ನಾಲ್ಕು ವರ್ಷಗಳಿಂದ ನಗರದ ಸರ್ಕಾರಿ ಐಟಿಐನಲ್ಲೇ ಉದ್ಯೋಗ ಮೇಳ ನಡೆಸುತ್ತಿವೆ. ಬೆಂಗಳೂರು, ಕೋಲಾರ, ಧಾರವಾಡ, ಪುಣೆ, ಔರಂಗಾಬಾದ್, ಹೈದರಾಬಾದ್ ಹಾಗೂ ಜಹೀರಾಬಾದ್‌ನಲ್ಲಿರುವ ಕೈಗಾರಿಕೆಗಳಲ್ಲಿ ಬೀದರ್ ಜಿಲ್ಲೆಯ  ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ  ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ಕೈಗಾರಿಕೆಗಳಲ್ಲಿ ಎಲೆಕ್ಟ್ರಿಷಿಯನ್‌ ಹಾಗೂ ಫಿಟ್ಟರ್‌ ಕೋರ್ಸ್‌ ಪೊರೈಸಿದವರಿಗೆ ಇವತ್ತಿಗೂ ಬೇಡಿಕೆ ಇದೆ. ನಮ್ಮ ಸಂಸ್ಥೆಯಲ್ಲಿ ಈವರೆಗೆ 2,688 ವಿದ್ಯಾರ್ಥಿಗಳು ತಾಂತ್ರಿಕ ಕೌಶಲ ತರಬೇತಿ ಪಡೆದಿದ್ದಾರೆ.

ನಾಲ್ಕು ವರ್ಷಗಳ ಅವಧಿಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಉದ್ಯೋಗ ಪಡೆದಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರಣ ನಾಮಾಂಕಿತ ಕಂಪೆನಿಗಳು ನಮ್ಮ ಸಂಸ್ಥೆಯಲ್ಲೇ ನೇರ ನೇಮಕಾತಿ ಸಂದರ್ಶನ ನಡೆಸುತ್ತಿವೆ. ಜಿಲ್ಲೆಯ ಆರು ಸರ್ಕಾರಿ ಐಟಿಐ, ಆರು ಅನುದಾನಿತ ಹಾಗೂ 55 ಖಾಸಗಿ ಐಟಿಐ ಸೇರಿ ಒಟ್ಟು 67 ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ಪ್ರಾಚಾರ್ಯ ಶಿವಶಂಕರ ಟೋಕರೆ ಹೇಳುತ್ತಾರೆ.

‘ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ ತರಬೇತಿಯನ್ನು ಪರಿಗಣಿಸಿ 2017ರ ಮಾರ್ಚ್‌ 4ರಂದು ಸಂಸ್ಥೆಗೆ ಐಎಸ್‌ಒ ಪ್ರಮಾಣಪತ್ರ ನೀಡಲಾಗಿದೆ. ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಸಮೀರ್‌ ಶುಕ್ಲಾ ಅವರು 2017ರ ಮೇ 5 ರಂದು ಕೈಗಾರಿಕೆ ತರಬೇತಿ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಾ ಪತ್ರವನ್ನೂ ಕಳಿಸಿದ್ದಾರೆ’ ಎನ್ನುತ್ತಾರೆ ಅವರು.

‘ಸಂಸ್ಥೆಯಲ್ಲಿ 18 ಕಿರಿಯ ತರಬೇತಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆರು ಹುದ್ದೆಗಳು ಖಾಲಿ ಇವೆ. ಈಗಿರುವ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ಕೊಟ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಎರಡು ಸ್ಮಾರ್ಟ್‌ ಕ್ಲಾಸ್‌ ರೂಮ್‌ಗಳು ಇವೆ.

ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಉಜ್ವಲ್‌ಕುಮಾರ ಸಂಸ್ಥೆಗೆ ವಿಶೇಷ ಅನುದಾನ ಒದಗಿಸಿ ಸಂಸ್ಥೆಯ ಬೆಳವಣಿಗೆಗೆ ನೆರವಾಗಿದ್ದಾರೆ. ಜಿತೇಂದ್ರ ನಾಯಕ ಸಿಇಒ ಆಗಿದ್ದಾಗ ಬಿಆರ್‌ಜಿಎಫ್‌ನಿಂದ ₹ 54 ಲಕ್ಷ ವೆಚ್ಚದಲ್ಲಿ ನಾಲ್ಕು ವರ್ಕ್‌ಶಾಪ್‌ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರಿಗೆ ಮನವಿ ಸಲ್ಲಿಸಿದ 58 ದಿನಗಳಲ್ಲೇ ₹ 67 ಲಕ್ಷ ಅನುದಾನ ಮಂಜೂರು ಮಾಡಿಸಿದ್ದರು. ಒಂಬತ್ತು ತಿಂಗಳಲ್ಲಿ ಕಟ್ಟಡ ಸಹ ನಿರ್ಮಾಣ ಮಾಡಲಾಯಿತು. ಈಗ ಹೊಸ ಕಟ್ಟಡದಲ್ಲೇ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ ಟೋಕರೆ.

‘ಬೀದರ್‌ನ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯು ಯುವ ಜನಾಂಗದಲ್ಲಿ ಕೌಶಲ ಬೆಳೆಸುತ್ತಿರುವ, ಹೈದರಾಬಾದ್‌ ಕರ್ನಾಟಕದಲ್ಲಿಯೇ ಅತ್ಯುತ್ತಮ ಸಂಸ್ಥೆಯಾಗಿದೆ. ಪ್ರಮುಖ ಕಂಪೆನಿಗಳು ಇಲ್ಲಿಯ ಸರ್ಕಾರಿ ಐಟಿಐನಲ್ಲಿ ಕ್ಯಾಂಪಸ್‌ ಸಂದರ್ಶನ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಉದ್ಯೋಗ ತರಬೇತಿ ಇಲಾಖೆಯ ಕಲಬುರ್ಗಿಯ ಜಂಟಿ ನಿರ್ದೇಶಕ ವೈಜಗೊಂಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.