ADVERTISEMENT

ಪಂಚಾಯಿತಿ ಸದಸ್ಯನ ಕೊಲೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:08 IST
Last Updated 21 ಮೇ 2017, 6:08 IST

ಬೀದರ್: ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಗರದ ಕೋಟೆ ಯೊಳಗೆ ಮಂದಕನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ ಅಡವೆಪ್ಪ ಹರಗೆಯ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್‌ ಹೇಳಿದರು.

‘ನಗರದ ಮನಿಯಾರ್‌ ತಾಲೀಂನ ಮಹಮ್ಮದ್ ಅಬ್ದುಲ್ ಮಜೀದ್, ಖಾಸೆಂಪುರದ ಮಹಮ್ಮದ್‌ ಶಾಬೋದ್ದೀನ್ ಚಾಂದಪಾಷಾ, ಲತೀಫ್‌ ಸಾದಕಅಲಿ ಅತ್ವಾಲ್ ಹಾಗೂ ಕಮಠಾಣ ದ ಉಮರ್ ಫಾರೂಕ್ ಚಾಂದಪಾಷಾ ಹಡಗೊಡಿವಾಲೆ ಎನ್ನುವವರನ್ನು ಬಂಧಿಸಲಾಗಿದೆ’ ಎಂದು ನಗರದ ಪೊಲೀಸ್‌ ಮುಖ್ಯಾಲಯದಲ್ಲಿ  ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿಗಳಿಂದ ಒಂದು ನಾಡ ಪಿಸ್ತೂಲ್, ಮೂರು ಜೀವಂತ ಗುಂಡು ಗಳು, ಮೂರು ಮಚ್ಚು, ಮೂರು ಚೂರಿ, ಮೋಟರ್‌ ಸೈಕಲ್ ಹಾಗೂ ₹ 2.70 ಲಕ್ಷ  ನಗದು  ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿ ಕೊಂಡಿರುವ ಒಬ್ಬ ಆರೋಪಿಯ ಶೋಧ ಕಾರ್ಯ ಮುಂದುವರಿದಿದೆ’ ಎಂದು ಹೇಳಿದರು.

ADVERTISEMENT

‘ ಫಯಾಜ್‌ಖಾನ್‌ನ ತಂದೆ ಮಹಮ್ಮದ್ ಮಜೀದ್‌ನು ರಮೇಶನಿಗೆ ಹೊಲದ ಮೇಲೆ ₹ 4 ಲಕ್ಷ ಸಾಲ ಕೊಟ್ಟಿದ್ದ. ಕರಾರಿನಂತೆ ಮೂರು ವರ್ಷಗಳ ನಂತರ ಹಣ ಕೊಡಲು ರಮೇಶ ನಿರಾಕರಿಸಿದ್ದ. ಬೇರೆ ಕಡೆ ಸಾಲ ಕೊಡಿಸಿದರೆ ₹ 2 ಲಕ್ಷ ಸಾಲ ಮರಳಿಸುವ ಭರವಸೆ ನೀಡಿದ್ದ. ಫಯಾಜ್‌ಖಾನ್‌ ಮತ್ತೆ ಆಫ್ರೋಜ್‌ ಲಾಲವಾಡಿಯಿಂದ ₹ 5 ಲಕ್ಷ ಸಾಲ ಕೊಡಿಸಿದ್ದರೂ ಹಣ ಮರಳಿಸಿರಲಿಲ್ಲ.

ರಮೇಶ, ಮಂದಕನಳ್ಳಿಯ ಶಿರಾಜುದ್ದೀನ್‌ ಎನ್ನುವ ವ್ಯಕ್ತಿಗೂ ಮೋಸ ಮಾಡಿದ್ದ. ಹೀಗಾಗಿ ಫಯಾಜ್‌ಖಾನ್‌,  ಮಂದನಕಳ್ಳಿಯ ಶಿರಾಜುದ್ದೀನ್‌ನನ್ನು ಸಂಪರ್ಕಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ’ ಎಂದು ತಿಳಿಸಿದರು.

‘ಶಿರಾಜುದ್ದೀನ್‌ ಸಾಲ ಕೊಡಿಸು ವುದಾಗಿ ನಂಬಿಸಿ ಮೇ 15ರಂದು ಸಂಜೆ ರಮೇಶನನ್ನು ಕೋಟೆ ಆವರಣ ದಲ್ಲಿರುವ ಕ್ಯಾಂಟೀನ್‌ಗೆ ಕರೆಯಿಸಿದ್ದ. ಇಲ್ಲಿ ಹಣದ ವಿಷಯವಾಗಿಯೇ ಜಗಳ ನಡೆದು ಆರೋಪಿಯೊಬ್ಬ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಗಾಯಗೊಳಿಸಿದ್ದ. ನಂತರ ಆರೋಪಿಗಳು ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ರಮೇಶನ ಪತ್ನಿ ಬೇಬಿ ಹರಗೆ ಬೀದರ್‌ನ ಟೌನ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಹೇಳಿದರು.

‘ಡಿವೈಎಸ್‌ಪಿ ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ಸಿಪಿಐ ಶರಣಬಸವೇಶ್ವರ ಭಜಂತ್ರಿ, ಗ್ರಾಮೀಣ ಸಿಪಿಐ ರಾಮಪ್ಪ ಸಾವಳಗಿ, ಡಿಸಿಐಬಿ ಪೊಲೀಸ್‌ ಇನ್‌ಸ್ಪೆಕ್ಟರ್ ಸತೀಶ್, ಪಿಎಸ್‌ಐ ಬಸವರಾಜ ಧರಣೆ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ’ ಎಂದು ತಿಳಿಸಿದರು.

‘ಆರೋಪಿಗಳ ಬಳಿ  ₹ 2.70 ಲಕ್ಷ ನಗದು ಪತ್ತೆಯಾಗಿದೆ. ಹಣ ಹಾಗೂ ನಾಡ ಪಿಸ್ತೂಲ್‌ ಎಲ್ಲಿಂದ ತಂದಿದ್ದಾರೆ ಎನ್ನುವ ಕುರಿತು ಸಹ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಇದ್ದರು.

* * 

ಆರೋಪಿಗಳು  ರಮೇಶನ ಕೊಲೆಗೆ ಬಳಿಸಿದ ನಾಡ ಪಿಸ್ತೂಲ್‌ ಅನ್ನು  ಎಲ್ಲಿಂದ ತಂದಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚವ ಕಾರ್ಯ ನಡೆದಿದೆ
ಪ್ರಕಾಶ ನಿಕಮ್
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.