ADVERTISEMENT

ಪಡಿತರ ಚೀಟಿ ರದ್ದು: ಆಕ್ರೋಶ

ಶಾಸಕರ ಗ್ರಾಮ ಸಂಚಾರದ ವೇಳೆ ಸಮಸ್ಯೆ ತೆರೆದಿಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 6:01 IST
Last Updated 18 ಜನವರಿ 2017, 6:01 IST
ಪಡಿತರ ಚೀಟಿ ರದ್ದು:  ಆಕ್ರೋಶ
ಪಡಿತರ ಚೀಟಿ ರದ್ದು: ಆಕ್ರೋಶ   

ಔರಾದ್:  ಶಾಸಕ ಪ್ರಭು ಚವಾಣ್ ಅವರು ಮಂಗಳವಾರದಿಂದ ತಾಲ್ಲೂಕಿನಲ್ಲಿ ಆರಂಭಿಸಿದ ಗ್ರಾಮ ಸಂಚಾರದ ವೇಳೆ ಬಹುತೇಕ ಗ್ರಾಮಗಳ ಜನ ಪಡಿತರ ಚೀಟಿ ಸಮಸ್ಯೆ ಹೇಳಿಕೊಂಡರು.

ನಮ್ಮ ಊರಲ್ಲಿ ಅರ್ಧದಷ್ಟು ಜನರಿಗೆ ರೇಷನ್ ಕಾರ್ಡ್‌ ಇಲ್ಲ. ಸರ್ಕಾರ ದಿನಕ್ಕೊಂದು ನಿಯಮ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಮುಸ್ತಾಪುರ ಗ್ರಾಮಸ್ಥರು ಗೋಳು ತೋಡಿಕೊಂಡರು.

ಕೆಲವರ ಬಳಿ ರೇಷನ್ ಕಾರ್ಡ್‌ ಇದ್ದರೂ ಆಹಾರ ಧಾನ್ಯ ಸಿಗುತ್ತಿಲ್ಲ. ವಯಸ್ಸಾದವರು 15 ಕಿ.ಮೀ. ದೂರದ ಕೌಡಗಾಂವಗೆ ಹೋಗಿ ಪಡಿತರ ಧಾನ್ಯ ತರುವುದು ತುಂಬಾ ಕಷ್ಟವಾಗುತ್ತಿದೆ. ಊರಲ್ಲೇ ಪಡಿತರ ಧಾನ್ಯ ವಿತರಿಸುವ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ತಿಂಗಳಲ್ಲಿ ಒಂದು ದಿನ ಗ್ರಾಮದಲ್ಲಿ ತಂದು ಪಡಿತರ ಧಾನ್ಯ ವಿತರಿಸುವಂತೆ ತಹಶೀಲ್ದಾರ್ ಎಂ. ಚಂದ್ರಶೇಖರ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಮ್ಮ ಊರಿನ ಜನ ಜಾನುವಾರು ಸಾಕಿ ಉಪ ಜೀವನ ನಡೆಸುತ್ತಿದ್ದಾರೆ. ಆದರೆ ಜಾನುವಾರುಗಳಿಗೆ ರೋಗ ಬಂದರೆ ನೋಡುವವರು ಯಾರೂ ಇಲ್ಲ. ಪಶು ವೈದ್ಯರಿಗೆ ನಮ್ಮ ಊರೇ ಗೊತ್ತಿಲ್ಲ ಎಂದು ಮುಸ್ತಾಪುರ ಗ್ರಾಮಸ್ಥರು ಶಾಸಕರ ಗಮನ ಸೆಳೆದರು.

ಬೇಜವಾಬ್ದಾರಿ ಅಧಿಕಾರಿಗಳಿಗೆ ನಮ್ಮಲ್ಲಿ ಅವಕಾಶವಿಲ್ಲ. ಜನರ ಸಮಸ್ಯೆಗೆ ಸ್ಪಂದಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಮತ್ತು ನಿರ್ಲಕ್ಷ್ಯ ತೋರಿದ ಪಶು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ನಮ್ಮ ಊರಿನಲ್ಲಿ ಹಳೆ ವಿದ್ಯುತ್ ಕಂಬ ಮತ್ತು ತಂತಿ ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಅವು ತೆರವು ಮಾಡುವಂತೆ ಶೆಂಬೆಳ್ಳಿ ಗ್ರಾಮಸ್ಥರು ಬೇಡಿಕೆ ಮಂಡಿಸಿದರು.

ನಮ್ಮ ಊರಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಬೀದರ್-ಔರಾದ್ ಮುಖ್ಯ ರಸ್ತೆಯಿಂದ ಗ್ರಾಮದ ವರೆಗೆ ಕಾಂಕ್ರಿಟ್ ರಸ್ತೆ ಮಾಡಿಕೊಡುವಂತೆ ಚೆಟ್ನಾಳ ಗ್ರಾಮಸ್ಥರು ಮನವಿ ಮಾಡಿದರು. ನೀರಿನ ಮೂಲ ಇರುವ ಕಡೆ ಕೊಳವೆ ಬಾವಿ ಕೊರೆಯಬೇಕು. ಮತ್ತು ಎಚ್‌ಕೆಆರ್‌ಡಿಬಿ ಅನುದಾನದಲ್ಲಿ 3 ಕಿ.ಮೀ. ಕಾಂಕ್ರಿಟ್ ರಸ್ತೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಶಾಸಕರು ಜೀಗರಾ (ಕೆ), ಜೀಗರಾ (ಬಿ), ಧುಪತಮಹಾಗಾಂವ್, ಲಾಧಾ, ಬಾಚೆಪಳ್ಳಿ, ಮಣಿಗೆಂಪುರ, ಬಾಬಳಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಕೇಳಿದರು. ತಹಶೀಲ್ದಾರ್ ಎಂ. ಚಂದ್ರಶೇಖರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ಲೋಕೋಪಯೋಗಿ ಎಂಜಿನಿಯರ್ ಅಶೋಕ ಸಜ್ಜನಶೆಟ್ಟಿ, ನೀರು ಸರಬರಾಜು ಮಂಡಳಿ ಎಂಜಿನಿಯರ್ ಮಲ್ಲಿಕಾರ್ಜುನ ಕರಂಜೆ, ಪಂಡಿತ ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂಜುಕುಮಾರ ಮಾನಕರಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಬಿರಾದಾರ, ಧುರೀಣ ಬಂಡೆಪ್ಪ ಕಂಟೆ, ಸತೀಶ ಪಾಟೀಲ, ಕಿರಣ ಪಾಟೀಲ, ಜಿಪಂ. ಸದಸ್ಯ ಮಾರುತಿ ಚವಾಣ್, ತಾಪಂ. ಸದಸ್ಯ ಸಚಿನ ರಾಠೋಡ, ನಾಗಶೆಟ್ಟಿ ಶೆಂಬೆಳ್ಳಿ, ಮಾದಪ್ಪ ಮಿಠಾರೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.