ADVERTISEMENT

ಪಶು ಚಿಕಿತ್ಸಾಲಯ ಚಿತ್ರಣ ಬದಲಿಗೆ ಚಿಂತನೆ

ಒಂಬತ್ತು ಚಿನ್ನದ ಪದಕ ಪಡೆಯಲಿರುವ ವೈದ್ಯ ಡಾ.ನಿತೀಶ್‌ ಮನದಾಳದ ಮಾತು

ಚಂದ್ರಕಾಂತ ಮಸಾನಿ
Published 10 ಅಕ್ಟೋಬರ್ 2015, 10:38 IST
Last Updated 10 ಅಕ್ಟೋಬರ್ 2015, 10:38 IST

ಬೀದರ್: ಭಾರತದಲ್ಲಿ ಪಶುಚಿಕಿತ್ಸಾಲಯದ ಚಿತ್ರಣವನ್ನೇ ಬದಲಿಸಬೇಕು ಹಾಗೂ ಹೊಸದೊಂದು ಕ್ರಾಂತಿ ಮಾಡಬೇಕು ಎನ್ನುವುದು ನನ್ನ ಹೆಬ್ಬಯಕೆ.

ಹೀಗೆ ಮನದಾಳದ ಮಾತು ಹಂಚಿಕೊಂಡವರು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 9 ಚಿನ್ನದ ಪದಕ ಪಡೆಯಲಿರುವ ಬೆಂಗಳೂರು ಮೂಲದ ಡಾ.ನಿತೀಶ್ ಕಲ್ಯಾಣಪುರ.

ಗ್ರಾಮೀಣ ಜನರ ಆರ್ಥಿಕ ಮಟ್ಟವನ್ನು ಸಬಲಗೊಳಿಸುವಲ್ಲಿ ಪಶುಪಾಲನೆ ಪರೋಕ್ಷ ಪಾತ್ರ ವಹಿಸುತ್ತಿದೆ. ಪಶುಗಳ ಆರೋಗ್ಯ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ಈಗಿನ ಪಶು ಚಿಕಿತ್ಸಾಲಯದ ಸ್ವರೂಪವನ್ನು  ಬದಲಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಪ್ರಯತ್ನ ನಡೆಸುವೆ ಎಂದು ಹೇಳಿದರು.
ಪಶುವೈದ್ಯಕೀಯ ವಿಜ್ಞಾನದ ಪದವಿಯು ಕೇವಲ ವೃತ್ತಿಗೆ  ಅಷ್ಟೇ ಅಲ್ಲ ಸಮಾಜಕ್ಕೂ ಅನುಕೂಲವಿದೆ ಎಂದರು. 

ಪ್ರಸ್ತುತ ಉತ್ತರ ಪ್ರದೇಶದ ಬರೇಲಿಯ ಇಝ್ತಾನಗರದಲ್ಲಿರುವ ಭಾರತೀಯ ಪಶುಸಂಶೋಧನಾ ಸಂಸ್ಥೆಯಲ್ಲಿ ಸರ್ಜರಿ ಹಾಗೂ ರೇಡಿಯೊಲಾಜಿಯಲ್ಲಿ ಹೆಚ್ಚಿನ ಅಧ್ಯಯನ ಮಾಡುತ್ತಿದ್ದೇನೆ. ಬೆಂಗಳೂರಿನ ಸೇಂಟ್‌ ಜರ್ಮನ್‌ ಹೈಸ್ಕೂಲ್, ಸೇಂಟ್‌ ಜೋಸೆಫ್‌ ಬಾಯ್ಸ್‌ ಹೈಸ್ಕೂಲ್‌ನಲ್ಲಿ ಶಿಕ್ಷಣ ಪೂರೈಸಿದ್ದೇನೆ.

ನನಗೆ ಎಂಬಿಬಿಎಸ್‌ ಸೀಟ್‌ ಸಿಕ್ಕಿತ್ತು. ಆದರೆ ಪಶುವೈದ್ಯಕೀಯ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡೆ. ಪ್ರಾಣಿ ಕಲ್ಯಾಣ ಹಾಗೂ ದತ್ತು ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದದರಿಂದ ಪಶು ವೈದ್ಯಕೀಯ ಕ್ಷೇತ್ರದಲ್ಲಿ  ತೊಡಗಿಸಿ ಕೊಳ್ಳಲು ಪ್ರೇರಣೆ ದೊರೆಯಿತು ಎಂದು ತಿಳಿಸಿದರು.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದೇನೆ. ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬಿವಿಎಸ್‌ಸಿ ಪದವಿಗೆ ಪಾತ್ರನಾಗಿದ್ದೇನೆ ಎಂದರು.

ವಿಶ್ವವಿದ್ಯಾಲಯದ ಚಿನ್ನದ ಪದಕ, ಡಾ.ಎಸ್.ಎಂ.ನಂಜಯ್ಯ ಸ್ಮಾರಕ ಪದಕ, ಎಂ.ಎಂ. ಒಡೆಯರ (ಪಶು ವಿಜ್ಞಾನ) ಪದಕ, ಡಾ.ಎಸ್. ಎಂ.ನಂಜಯ್ಯ ಸ್ಮಾರಕ ಪದಕ (ಶರೀರ ರಚನೆ ವಿಜ್ಞಾನ), ಟಿ.ಕೆ.ಗುರುಸಿದ್ದಪ್ಪ ಸ್ಮಾರಕ ಪದಕ, ಲಯನ್‌ ಇಂಟರ್‌ ನ್ಯಾಷನಲ್‌ ಡಿಸ್ಟ್ರಿಕ್ಟ್‌–3045 ಪದಕ, ಆರ್‌.ಗುಂಡುರಾವ್–ಎಫ್‌.ಎಂ.ಖಾನ್‌ ಪದಕ, ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಪದಕ ಹಾಗೂ ಬಿ.ಹೊಸಹಳ್ಳಿ ಗುಳ್ಳಮ್ಮ ಚಿನ್ನದ ಪದಕಕ್ಕೆ ಅವರು ಭಾಜನರಾಗಿದ್ದಾರೆ.

ಐ.ವಿ.ಆರ್.ಐ ಸೇವೆ ನನ್ನ ಗುರಿ’

ಬೀದರ್: ನಮ್ಮ ತಂದೆ ಸ್ವಉದ್ಯೋಗ ಮಾಡಿ ನನಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದ ಬರೇಲಿಯ ಐವಿಆರ್‌ಐ.ನಲ್ಲಿ ಗೈನಿಕಾಲಾಜಿ ಮತ್ತು ಪ್ರಸೂತಿ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದೇನೆ. ಗರಿಷ್ಠ ಅಂಕ ಪಡೆದಿದ್ದಕ್ಕಾಗಿ  ಐದು ಪದಕಗಳು ಬಂದಿರುವುದು ಸಂತಸ ತಂದಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐ.ವಿ.ಆರ್.ಐ)ನಲ್ಲಿ ಸೇವೆ ಸಲ್ಲಿಸಬೇಕು ಎನ್ನುವುದೇ ನನ್ನ ಗುರಿ ಎಂದು ವಿಕ್ರಮ್ ಹೇಳಿದರು.

ಬೀದರ್‌ನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಶುವೈದ್ಯಕೀಯ ಪದವಿ ಪಡೆದಿರುವ ವಿಕ್ರಮ್‌ ಆರ್. ಮೂಲತಃ ಬೆಂಗಳೂರಿನವರು. ಅವರಿಗೆ ಐದು ಚಿನ್ನದ ಪದಕ ಬಂದಿವೆ.

ವಿಕ್ರಮ ಅವರು ವಿಶ್ವವಿದ್ಯಾಲಯ ಚಿನ್ನದ ಪದಕ, ಡಾ.ಸಯ್ಯದ್ ಮೊಹಿದ್ದೀನ್ ಸ್ಮಾರಕ ಪದಕ, ಕೆ.ಆರ್.ಆಲೂರ ಸ್ಮಾರಕ ಪದಕ, ಡಾ.ಡಿ.ಎಂ.ಕರೇಗೌಡ ಸ್ಮಾರಕ ಪದಕ(ಔಷಧ), ಡಾ.ಆರ್‌.ವಿ.ಪಾಟೀಲ್‌ ಸ್ಮಾರಕ ಚಿನ್ನದ ಪದಕ ಪಡೆಯಲಿದ್ದಾರೆ.


‘ಸ್ನೇಹಿತನ ಹೆಸರು ಪ್ರಕಟಿಸಿ’

ADVERTISEMENT

ಬೀದರ್: ಅಖಿಲ ಭಾರತ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಯಲ್ಲಿ 80ನೇ ರ‍್ಯಾಂಕ್‌ ಪಡೆದುಕೊಂಡಿದ್ದೆ. ಆದರೆ 10ನೇ ರ‍್ಯಾಂಕ್‌ ಪಡೆದ ನನ್ನ ಸ್ನೇಹಿತ ಭಾನುಪ್ರಕಾಶ ಮಾರ್ಗದರ್ಶನದ ಫಲವಾಗಿ ನನಗೆ ಮೂರು ಚಿನ್ನದ ಪದಕ ಬಂದಿವೆ. ಈ ಪದಕಗಳನ್ನು ಅವನಿಗೆ ಅರ್ಪಿಸುತ್ತೇನೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ  ವಿಶ್ವವಿದ್ಯಾಲಯದ 3 ಚಿನ್ನದ ಪದಕ ಪಡೆಯಲಿರುವ ಪ್ರದೀಪನಾಗ್‌ ಬಿ.ಎಸ್. ಹೇಳಿದರು.

ಪತ್ರಿಕೆಯಲ್ಲಿ ನನ್ನ ಹೆಸರು ಬರದಿದ್ದರೂ ಚಿಂತೆ ಇಲ್ಲ. ನನ್ನ ಸ್ನೇಹಿತನ ಹೆಸರು ಪ್ರಕಟಿಸಲು ಮರೆಯಬೇಡಿ. ನನ್ನ ಯಶಕ್ಕೆ ತಂದೆ, ತಾಯಿ ಹಾಗೂ ಗೆಳೆಯ ಭಾನುಪ್ರಕಾಶ ಪ್ರೋತ್ಸಾಹ ಕಾರಣ ಎಂದು ಭಾವುಕರಾದರು. ನಮ್ಮ ಮೂಲ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇಲದ ಕೆರೆ. ತಂದೆ 28 ವರ್ಷ ಸೇನೆಯಲ್ಲಿ ದ್ದರು. ಅವರು ಪರಿಶ್ರಮ ಪಟ್ಟು ಓದಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.