ADVERTISEMENT

ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಮಹಿಳೆಯರಿಂದ ಪ್ರತ್ಯೇಕ ಬಣ್ಣದೋಕುಳಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:01 IST
Last Updated 14 ಮಾರ್ಚ್ 2017, 6:01 IST
ಬೀದರ್‌ನ ಜೈಲ್‌ ಕಾಲೊನಿಯಲ್ಲಿ ಯುವತಿಯೊಬ್ಬಳು ಮೊಸರು ಗಡಿಗೆ ಒಡೆದು ಸಂಭ್ರಮಿಸಿದಳು
ಬೀದರ್‌ನ ಜೈಲ್‌ ಕಾಲೊನಿಯಲ್ಲಿ ಯುವತಿಯೊಬ್ಬಳು ಮೊಸರು ಗಡಿಗೆ ಒಡೆದು ಸಂಭ್ರಮಿಸಿದಳು   

ಬೀದರ್: ನಗರದಲ್ಲಿ ಸೋಮವಾರ ಹೋಳಿ  ಹಬ್ಬವನ್ನು ವೈಶಿ ಷ್ಟ್ಯಪೂರ್ಣವಾಗಿ ಆಚರಿಸಲಾಯಿತು. ಯುವಕರು, ಮಹಿಳೆಯರು ಮತ್ತು ಮಕ್ಕಳು ಬಣ್ಣದ ಓಕುಳಿಯಲ್ಲಿ  ಮಿಂದೆದ್ದರು.

ಡಾಲ್ಬಿಯಲ್ಲಿ ಮೂಡಿಬರುತ್ತಿದ್ದ ಹಾಡಿಗೆ ಯುವಕರು ಗುಂಪುಗಳಲ್ಲಿ ಹೆಜ್ಜೆ ಹಾಕಿದರೆ, ಮಹಿಳೆಯರು ತಮ್ಮ ಓಣಿ ಓಣಿಗಳಲ್ಲೇ ಆಪ್ತರಿಗೆ ಬಣ್ಣ ಎರಚಿ ಹಬ್ಬದ ರಂಗನ್ನು ಹೆಚ್ಚಿಸಿದರು. ಮಕ್ಕಳೊಂದಿಗೆ ಹಿರಿಯರು ಮುಖವಾಡ ಹಾಕಿಕೊಂಡು ಓಕುಳಿಯಾಡಿದರು.

ನಗರದ ಹಾರೂರಗೇರಿ ಕಮಾನು, ಗುಂಪಾ ರಸ್ತೆ, ಮೈಲೂರ್‌ ಕ್ರಾಸ್, ನಂದಿ ಕಾಲೊನಿ, ಜ್ಯೋತಿ ಕಾಲೋನಿ, ಶಿವ ನಗರ,   ಮಡಿವಾಳ ವೃತ್ತ,  ಡಾ.ಅಂಬೇಡ್ಕರ್‌ ವೃತ್ತ ಹಾಗೂ ಸಿದ್ಧಾರ್ಥ ಕಾಲೇಜು ಸಮೀಪದ ವೃತ್ತದ ಲ್ಲಿ ಯುವಕರು ಬಣ್ಣದ ಪುಡಿಯನ್ನು ಮೇಲಕ್ಕೆ ತೂರಿ ದೂಳೆಬ್ಬೆಸಿದರು. ಆಪ್ತರಿಗೆ ಬಣ್ಣ  ಎರಚಿ ಖುಷಿಪಟ್ಟರು. ಮಕ್ಕಳು ಪ್ಲಾಸ್ಟಿಕ್‌ ಪಿಚಕಾರಿಗಳನ್ನು ಹಿಡಿದು ಬಣ್ಣ  ಚಿಮ್ಮಿಸಿದರು.

ಗುರುದ್ವಾರ ಸಮೀಪದ ಸಿಂಗ್‌ ಲೇಔಟ್‌ನಲ್ಲಿ ಕೆಲವು ಕುಟುಂಬಗಳು ಪ್ರತ್ಯೇಕ ಟೆಂಟ್‌ ಹಾಕಿ ಪರಸ್ಪರ ಬಣ್ಣ  ಎರಚಿ ಸಂಭ್ರಮಿಸಿದರು. ಪೈಪ್‌ಲೈನ್‌ನಿಂದ ಚಿಮ್ಮುತ್ತಿದ್ದ ಬಣ್ಣದ ನೀರಿನ ಕೆಳಗೆ ಮಕ್ಕಳೊಂದಿಗೆ ಕುಣಿದು ಖುಷಿ ಹಂಚಿಕೊಂಡರು. ಆದರ್ಶ ಕಾಲೊನಿಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ  ಬಣ್ಣದಾಟಕ್ಕೆ ಪ್ರತ್ಯೇಕ ವ್ಯವಸ್ಥೆ  ಮಾಡಲಾಗಿತ್ತು.

ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ನಗರದ  ಪ್ರಮುಖ ಸ್ಥಳಗಳಲ್ಲಿ  ಬಣ್ಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಕೆಂಪು, ಕೇಸರಿ,  ಹಸಿರು, ನೀಡಲಿ, ಹಳದಿ ಹಾಗೂ ಕಂದು ಬಣ್ಣ ಗಳು ಹೆಚ್ಚು ಆಕರ್ಷಕವಾಗಿದ್ದರಿಂದ ಅವುಗಳನ್ನೇ ಜನ ಹೆಚ್ಚು ಖರೀದಿಸಿದರು.

ಯುವಕರು ತಮ್ಮ  ಗೆಳೆಯರನ್ನು ಹುಡುಕಿಕೊಂಡು ಅವರ ಮನೆಗಳಿಗೆ ತೆರಳಿ ಹೊರ ಬರುವಂತೆ ಒತ್ತಾಯಿಸುತ್ತಿದ್ದರು. ಮನೆಯಿಂದ ಹೊರ ಬರದಿದ್ದಾಗ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದರು. ಗೆಳೆಯರು ಮನೆಯಿಂದ ಹೊರ ಬರುತ್ತಿದ್ದಂತೆಯೇ ಅವರ ಮೇಲೆ ಬಣ್ಣ ಎರಚಲು ಒಮ್ಮೇಲೆ ಮುಗಿಬೀಳುತ್ತಿದ್ದರು.
ನಗರದ ಕೆಲ ಕಡೆ ಶವಯಾತ್ರೆಯ ಅಣುಕು ಪ್ರದರ್ಶನ ನಡೆಯಿತು. ಕೆಲವರು ಗೆಳೆಯರ ತಲೆಯ ಮೇಲೆ  ಮೊಟ್ಟೆಯೊಡೆದು ಕೀಟಲೆ ಮಾಡಿದರು.  ಯುವಕರು ಪೈಪೋಟಿಯೊಂದಿಗೆ ಹಲಗೆ ಬಾರಿಸುವ ವಿನೋದಾವಳಿ ಗಮನ ಸೆಳೆಯಿತು. 

ಲಂಬಾಣಿ ಮಹಿಳೆಯರು ಮನೆಗಳ ಮುಂದೆ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಕಾಣಿಕೆ ಕೇಳಿ ಪಡೆದುಕೊಂಡರು. ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮದ್ಯ ನಿಷೇಧಿಸಿದ್ದರೂ ಮದ್ಯದ ಅಂಗಡಿಗಳ ಹಿಂಬಾಗಿಲಿನಿಂದ ಮದ್ಯ ಖರೀದಿಸಿ ತರುತ್ತಿದ್ದರು. ಮದ್ಯ ಪ್ರಿಯರು ತಮ್ಮ  ಗೆಳೆಯರೊಂದಿಗೆ ನಗರದ ಹೊರವದ ತೋಟಗಳಿಗೆ ತೆರಳಿ  ಮದ್ಯ ಸೇವನೆ ಮಾಡಿ, ಮಾಂಸದೂಟ ಸವಿದರು.
 
ಹೋಳಿ ಸಂದರ್ಭದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ  ಕಾಪಾಡುವ ದಿಸೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದರು. ಬೈಕ್‌ ಮೇಲೆ ಮೂರು,  ನಾಲ್ಕು ಜನ ಕುಳಿತು ವೇಗವಾಗಿ ಓಡಿಸುತ್ತಿದ್ದ ಬೈಕ್‌ಗಳನ್ನು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿ ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.