ADVERTISEMENT

‘ಬರವಣಿಗೆ ಕೌಶಲ ರೂಢಿಸಿಕೊಳ್ಳಿ’

ಬಹುಭಾಷಾ ಕವಿಗೋಷ್ಠಿ, ಆಟೊರಿಕ್ಷಾ ಚಾಲಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 9:27 IST
Last Updated 24 ಮಾರ್ಚ್ 2018, 9:27 IST

ಬೀದರ್: ‘ಕವಿಗಳು ಉತ್ತಮ ಬರವಣಿಗೆ ಕೌಶಲ ರೂಢಿಸಿಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಪ್ರೊ. ದೇವೇಂದ್ರ ಕಮಲ್‌ ತಿಳಿಸಿದರು.

ಮಂದಾರ ಕಲಾ ವೇದಿಕೆ ವತಿಯಿಂದ ನಗರದ ರಾಂಪುರೆ ಕಾಲೊನಿಯ ದತ್ತಾಶ್ರಮದಲ್ಲಿ ಈಚೆಗೆ ನಡೆದ ಬಹುಭಾಷಾ ಕವಿಗೋಷ್ಠಿ ಹಾಗೂ ಆಟೋ ಚಾಲಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬರಹಗಾರರಲ್ಲಿ ಹೃದಯವಂತಿಕೆ ಇರಬೇಕು. ಆಗ ಮಾತ್ರ ನೆನಪಿನಲ್ಲಿ ಉಳಿಯುವಂಥ ಕಾವ್ಯ ರಚಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಉತ್ತಮ ಬರವಣಿಗೆಯನ್ನು ಸಮಾಜಕ್ಕೆ ಧಾರೆ ಎರೆಯುವ ಬರಹಗಾರ ಪ್ರಬುದ್ಧ ಸಾಹಿತಿ ಎನಿಸಿಕೊಳ್ಳುತ್ತಾನೆ. ಯುವ ಬರಹಗಾರರಿಗೆ ಮಾದರಿಯೂ ಆಗುತ್ತಾರೆ’ ಎಂದರು.

ಉರ್ದು ಅಕಾಡೆಮಿಯ ಸದಸ್ಯ ಮಹಮ್ಮದ್ ಯುಸೂಫ್ ರಹೀಂ ಬಿದ್ರಿ ಮಾತನಾಡಿ, ‘ತಮ್ಮ ಸಾಮರ್ಥ್ಯ ಮೀರಿ ಬಿಂಬಿಸುವ ಸಾಹಿತ್ಯವು ಕವಿಗೆ ಮೈ ತುಂಬ ಕಣ್ಣುಗಳಿರುತ್ತವೆ ಎನ್ನುವುದಕ್ಕೆ ನಿದರ್ಶನವಾಗಿದೆ. ಭಾವನೆಗಳಿಂದ ಹೊರ ಬರುವ ಕಾವ್ಯಗಳು ಗಟ್ಟಿಯಾಗಿರುತ್ತವೆ’ ಎಂದರು.

ಹೊಕ್ರಾಣಾದ ಜಗನ್ನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ರಾಯಕೋಡದ ಚನ್ನಬಸಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಸಾಹಿತಿ ಅಕ್ಕಮಹಾದೇವಿ ಹಾರೂರಗೇರಿ ಅಧ್ಯಕ್ಷತೆ ವಹಿಸಿದ್ದರು. ಮಂದಾರ ಕಲಾ ವೇದಿಕೆ ಅಧ್ಯಕ್ಷ ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ದೇಶಾಂಶ ಹುಡಗಿ, ಪ್ರಮುಖರಾದ ರಾಮದಾಸ ಬಿರಾದಾರ, ಕಲಿರಾಜ ಹುಣಸೂರ, ಕಸ್ತೂರಿ ಪಟಪಳ್ಳಿ ಮುಂತಾದವರು ಇದ್ದರು.

ಆಟೊ ಚಾಲಕರಾದ ಅಶೋಕ ವೀರಶೆಟ್ಟಿ, ಭದ್ರಯ್ಯ ಸ್ವಾಮಿ, ಭೀಮಾಶಂಕರ, ತುಕಾರಾಮ, ಸಂಜೀವಕುಮಾರ ಕರಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಕವಿಗಳು ಕವನ ವಾಚಿಸಿದರು. ಪುಣ್ಯವತಿ ವಿಸಾಜಿ ಸ್ವಾಗತಿಸಿದರು. ಸುನೀತಾ ದಾಡಗೆ ನಿರೂಪಿಸಿದರು. ಕಿರಣ ಮಹಾರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.