ADVERTISEMENT

ಬಸವಕಲ್ಯಾಣ: ಪಲ್ಲಕ್ಕಿ ಮೆರವಣಿಗೆ; ಕೆಂಡ ಹಾಯ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 6:18 IST
Last Updated 17 ಜನವರಿ 2017, 6:18 IST
ಬಸವಕಲ್ಯಾಣ: ಪಲ್ಲಕ್ಕಿ ಮೆರವಣಿಗೆ; ಕೆಂಡ ಹಾಯ್ದ ಭಕ್ತರು
ಬಸವಕಲ್ಯಾಣ: ಪಲ್ಲಕ್ಕಿ ಮೆರವಣಿಗೆ; ಕೆಂಡ ಹಾಯ್ದ ಭಕ್ತರು   

ಬಸವಕಲ್ಯಾಣ: ಇಲ್ಲಿನ ತ್ರಿಪುರಾಂತ ಕೆರೆ ದಂಡೆಯಲ್ಲಿ ಸೋಮವಾರ ಶರಣ ಮಡಿವಾಳ ಮಾಚಿದೇವರ ಜಾತ್ರೆ ಅಂಗವಾಗಿ ಅನೇಕ ಭಕ್ತರು ಅಗ್ನಿಪೂಜೆ ನೆರವೇರಿಸಿ ಕೆಂಡ ಹಾಯ್ದರು.

ತ್ರಿಪುರಾಂತದ ಬಕ್ಕಯ್ಯ ಸ್ವಾಮಿ ಮತ್ತು ಭದ್ರಪ್ಪ ಪಾಟೀಲ ಅವರ ಮನೆಗಳಲ್ಲಿ ಪ್ರತ್ಯೇಕವಾಗಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಾತ್ರಿ ಜಾಗರಣೆ ಮಾಡಲಾಯಿತು. ಬೆಳಿಗ್ಗೆ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಛತ್ರಿ, ಚಾಮರಗಳೊಂದಿಗೆ ಆಕರ್ಷಕ ಪಲ್ಲಕ್ಕಿ­ಗಳಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

ಪಲ್ಲಕ್ಕಿ ಮನೆಗಳ ಎದುರಿಗೆ ಬಂದಾಗ ಕಟುಂಬ ಸಮೇತರಾಗಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಬ್ಯಾಂಡ್‌­ಬಾಜಾ, ಡೊಳ್ಳು ಕುಣಿತ, ಹಲಗೆ ವಾದನ ಮತ್ತು ಪುರವಂತರ ತಂಡಗಳು ಪಾಲ್ಗೊಂಡಿದ್ದರಿಂದ ಮೆರವಣಿಗೆಗೆ ಹೆಚ್ಚಿನ ಮೆರುಗು ಬಂದಿತ್ತು. ಯುವಕರು ಉತ್ಸಾಹದಿಂದ ಕುಣಿದರು.

ಮೆರವಣಿಗೆ ಕೆರೆಯ ಪೂರ್ವದ ದಂಡೆಯಲ್ಲಿನ ಅಗ್ನಿಕಟ್ಟೆಗೆ ಬಂದಾಗ ಮೂರ್ತಿಗಳನ್ನು ಕೆಲಕಾಲ ಭಕ್ತರ ದರ್ಶನಕ್ಕಾಗಿ ಕಟ್ಟೆಯ ಮೇಲೆ ಇಡಲಾಗಿತ್ತು. ನಂತರ ‘ಕೋನ ಬಲಾ ಶಂಕರ ಬಲಾ’ ಹಾಗೂ ‘ಮಡಿವಾಳ ಮಾಚೇಶ್ವರ ಮಹಾರಾಜ ಕೀ ಜೈ’ ಎಂಬ ಜಯಘೋಷ ಹಾಕುತ್ತ ಅಗ್ನಿಕುಂಡಕ್ಕೆ ಪಲ್ಲಕ್ಕಿಯೊಂದಿಗೆ ಪ್ರದಕ್ಷಿಣೆ ಹಾಕಲಾಯಿತು. ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅಗ್ನಿಪೂಜೆ ನೆರವೇರಿಸಿದ ನಂತರ ಸಾಲು ಸಾಲಾಗಿ ಕೆಂಡವನ್ನು ತುಳಿಯಲಾಯಿತು.

ಮಹಿಳೆಯರು, ಮಕ್ಕಳು ಕೂಡ ಕೆಂಡದ ಮೇಲಿನಿಂದ ಓಡುತ್ತ ಬರುವ ರೋಮಾಂಚಕಾರಿ ದೃಶ್ಯವನ್ನು ನೋಡಲು ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

ಶಾಸಕ ಮಲ್ಲಿಕಾರ್ಜುನ ಖೂಬಾ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಶಿವರಾಜ ನರಶೆಟ್ಟಿ, ಬಾಬುರಾವ ಬಿರಾದಾರ, ರಾಮಣ್ಣ ಬೊಕ್ಕೆ, ಚಂದ್ರಕಾಂತ ಬಿರಾದಾರ, ಮಹಾದೇವ ಚನ್ನಮಲ್ಲೆ, ಶಿವಬಸಪ್ಪ ಚನ್ನಮಲ್ಲೆ, ನಟರಾಜ ಬಿರಾದಾರ, ಡಾ.ಬಸವರಾಜ ಸ್ವಾಮಿ, ಸೋಮಶಂಕರ ಸ್ವಾಮಿ, ರಾಜೀವ ಪಾಟೀಲ, ಮರೆಪ್ಪ ಪಾಟೀಲ, ಬಸವಂತರಾಯ, ಸಂಜೀವ ಪಾಟೀಲ, ಸಂಜಯ ಶ್ರೀವಾಸ್ತವ, ಮಡೋಳಪ್ಪ ಮಾಲಗಾರ, ಬಾಬು ಮಾಲಿ ಪಾಲ್ಗೊಂಡಿದ್ದರು. ಇಡೀ ದಿನ ಅಗ್ನಿಕುಂಡಕ್ಕೆ ನೈವೇದ್ಯ ಅರ್ಪಿಸುವ ಕಾರ್ಯಕ್ರಮ ನಡೆಯಿತು.

ಕೆರೆಯ ದಂಡೆಯುದ್ದಕ್ಕೂ ವಿವಿಧ ತಿಂಡಿ ತಿನಿಸು ಮತ್ತು ಮಕ್ಕಳ ಆಟಿಕೆಗಳ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಜಾತ್ರೆ ಅಂಗವಾಗಿ ಅಮರೇಶ್ವರ ಸ್ವಾಮೀಜಿ ಅವರಿಂದ ಮೂರು ದಿನಗಳವರೆಗೆ ಪ್ರವ ಚನ ನಡೆಯಿತು. ಸಾಂಸ್ಕೃತಿಕ ಕಾರ್ಯ ಕ್ರಮ ಕೂಡ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT