ADVERTISEMENT

ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ನಿಗಾ ಘಟಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 5:42 IST
Last Updated 20 ಸೆಪ್ಟೆಂಬರ್ 2017, 5:42 IST

ಬೀದರ್: ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗಾಗಿ ವಿಶೇಷ ನಿಗಾ ಘಟಕ ಆರಂಭಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ತಾಯಂದಿರ ಮರಣ ತಡೆಗಟ್ಟಲು ನಗರದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಿಸೆರಿಯನ್ ಆದ ನಂತರ ಗರ್ಭಿಣಿಯರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಆರೈಕೆ ಮಾಡಲು ನಿರ್ಣಯಿಸಲಾಯಿತು.

ಬ್ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಕೋಣೆ ಸ್ಥಾಪಿಸುವುದು, ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ತರಬೇತಿ ಹೊಂದಿದ ಹಿರಿಯ ಶುಶ್ರೂಷಕರನ್ನು ನೇಮಕ ಮಾಡುವುದು, ಹೆರಿಗೆ ಕೋಣೆಗೆ ದಿನದ 24 ಗಂಟೆಯೂ ರಕ್ಷಣಾ ಸಿಬ್ಬಂದಿಯನ್ನು ಒದಗಿಸುವುದು, ಕ್ಲಿಷ್ಟಕರ ಹೆರಿಗೆಗಳನ್ನು ನಿರ್ವಹಿಸಲು ಮಲ್ಟಿಪಾತ್ರ ಮೊನಿಟರ್ ನೀಡುವುದು, ಹೆರಿಗೆ ಕೋಣೆಗೆ ಬಂದ ಗರ್ಭಿಣಿಯರ, ಹೆರಿಗೆ ನಂತರ ತಾಯಿ ಮತ್ತು ಮಕ್ಕಳ ಆರೈಕೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರು ಲಭ್ಯ ಇರುವಂತೆ ನೋಡಿಕೊಳ್ಳುವುದು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ತದ ಘಟಕದ ವ್ಯವಸ್ಥೆ ಮಾಡುವುದು ಸೇರಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು.

ಬ್ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪ್ರಸೂತಿ ವಿಭಾಗಕ್ಕೆ 90 ಹಾಸಿಗೆಗಳು ಮಂಜೂರಾಗಿದ್ದರೂ 150 ಹಾಸಿಗೆಗಳನ್ನು ಒದಗಿಸಲಾಗಿದೆ. ಜೆಎಸ್‍ಎಸ್‌ಕೆ ಅನುದಾನದಲ್ಲಿ ಹೆರಿಗೆಗೆ ಬರುವ ಮಹಿಳೆಯರಿಗೆ ಔಷಧ, ಬಳಕೆ ವಸ್ತು, ರಕ್ತ ಪರೀಕ್ಷೆ, ರಕ್ತ, ಆಂಬುಲನ್ಸ್ ಸೇವೆಗಳನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದು ವಿವರಿಸಲಾಯಿತು.

ADVERTISEMENT

ತೀವ್ರ ಸಮಸ್ಯೆ ಎದುರಿಸುವ ಗರ್ಭಿಣಿಯರನ್ನು ಹೆರಿಗೆಗೆ ಮೇಲ್ದರ್ಜೆ ಆಸ್ಪತ್ರೆಗೆ ಕಳಿಸಿಕೊಡಬೇಕು. ತೀವ್ರ ರಕ್ತ ಹೀನತೆ ಇರುವ ಗರ್ಭಿಣಿಯರಿಗೆ ಬ್ರಿಮ್ಸ್‌ನಲ್ಲಿ ತಕ್ಷಣ ರಕ್ತ ಪಡೆಯಬೇಕು. ಹೆರಿಗೆ ನಂತರ ಉಂಟಾಗುವ ಸೋಂಕು ತಡೆಗಟ್ಟುವ ದಿಸೆಯಲ್ಲಿ ಜಿಲ್ಲೆಯ ಎಲ್ಲ ಹೆರಿಗೆ ಕೋಣೆಗಳನ್ನು ಕೇಂದ್ರ ಸರ್ಕಾರದ ಎಸ್‍ಒಪಿ ಪ್ರಕಾರ ನಿಭಾಯಿಸಬೇಕು ಎಂದು ಸೂಚಿಸಲಾಯಿತು.

ಬ್ರಿಮ್ಸ್ ನಿರ್ದೇಶಕ ಡಾ.ಚೆನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಎಸ್.ರಗಟೆ, ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ವಿಜಯಕುಮಾರ ಅಂತಪ್ಪನೋರ್, ಆರ್‌ಸಿಎಚ್ ಅಧಿಕಾರಿ ಡಾ.ರವಿಸಿರ್ಸೆ, ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುದಾಳೆ, ಸ್ತ್ರೀರೋಗ ತಜ್ಞೆ ಡಾ.ಉಮಾ ದೇಶಮುಖ, ಡಾ.ಸರಿತಾ ಭದಭದೆ, ಡಾ.ರಾಜಶ್ರೀ ಸ್ವಾಮಿ, ಡಾ.ಹರಿಕೃಷ್ಣಸಿಂಗ್, ಡಾ.ರವಿಕಾಂತ, ಡಾ.ಶರಣ ಬುಳ್ಳಾ, ಡಾ.ಎಸ್.ಆರ್.ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.