ADVERTISEMENT

ಮತ್ತೆ ಹದಗೆಟ್ಟ ಬೀದರ್–ಔರಾದ್ ರಸ್ತೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 7:06 IST
Last Updated 13 ಸೆಪ್ಟೆಂಬರ್ 2017, 7:06 IST

ಔರಾದ್: ಬೀದರ್–ಔರಾದ್ ನಡುವಿನ ರಸ್ತೆ ಮತ್ತೆ ಹಾಳಾಗಿದ್ದು, ದುರಸ್ತಿ ಮಾಡುವಂತೆ ಸಾರ್ವಜನಕರು ಆಗ್ರಹಿಸದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಹಾಳಾಗುವುದು, ದುರಸ್ತಿ ಮಾಡುವುದು ಸಹಜವಾಗಿದೆ. ಆದರೆ, ರಾಜ್ಯ ಹೆದ್ದಾರಿ ಸ್ಥಾನಮಾನ ಪಡೆದ ಈ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿರುವುದು ಪ್ರಯಾಣಿಕರಲ್ಲಿ ಬೇಸರ ತಂದಿದೆ.

ಎರಡು ರಾಜ್ಯಗಳ ನಡುವೆ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆ  ವಾಹನ ದಟ್ಟಣೆಯಿಂದ ಕೂಡಿರುತ್ತದೆ. ನಾಂದೇಡ್‌ಗೆ ಹೋಗುವ ಸಿಖ್ ಪ್ರಯಾಣಿಕರು ಇದೇ ರಸ್ತೆ ಬಳಸುತ್ತಾರೆ. ಈ ರಸ್ತೆ ವ್ಯಾಪ್ತಿಯಲ್ಲಿ ಬರುವ ಬೀದರ್‌ನಿಂದ ಔರಾದ್‌ ವರೆಗಿನ 40 ಕಿ.ಮೀ ರಸ್ತೆಯಲ್ಲಿ  ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಈ 40 ಕಿ.ಮೀ ರಸ್ತೆ ಪೈಕಿ 15ರಿಂದ 20 ಕಿ.ಮೀ ಬೀದರ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅವರೂ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ದೂರುಗಳಿವೆ. ‘ಈ ರಸ್ತೆಗೆ ಅಡ್ಡಲಾಗಿರುವ ಕೌಠಾ ಸೇತುವೆ ತಿರುವು ಅಪಘಾತ ವಲಯವಾಗಿ ಪರಿಣಮಿಸಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸಬಹುದಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಯವರು ಕಂಡು ಕಾಣದಂತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಧನರಾಜ ಮುಸ್ತಾಪುರ ದೂರಿದ್ದಾರೆ.

ADVERTISEMENT

‘ಕೌಠಾ ಸೇತುವೆ ಸುಮಾರು 50 ವರ್ಷ ಹಳೆಯದಾಗಿದ್ದು, ಸಿಥಿಲಗೊಂಡಿದೆ. ಹೀಗಾಗಿ ತಜ್ಞ ಎಂಜಿನಿಯರ್ ಕರೆಸಿ ಸೇತುವೆ ಸಾಮರ್ಥ್ಯ ಪರೀಕ್ಷೆ ಮಾಡಿಸುವಂತೆ ಅವರು ಬೇಡಿಕೆ ಮಂಡಿಸಿದ್ದಾರೆ. ಒಂದು ವಾರದೊಳಗೆ ಬೀದರ್–ಔರಾದ್ ನಡುವಿನ ಹಾಳಾದ ರಸ್ತೆ ದುರಸ್ತಿ ಮಾಡದೆ ಇದ್ದಲ್ಲಿ ಹೋರಾಟ ಹೋರಾಟ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಕೌಠಾ ಸೇತುವೆ ತಡೆಗೋಡೆ ರಿಪೇರಿ: ಕೌಠಾ (ಬಿ) ಸೇತುವೆ ತಡೆಗೋಡೆ ಕುಸಿದಿರುವ ಕುರಿತು ಈಚೆಗೆ 'ಪ್ರಜಾವಾಣಿ' ಪ್ರಕಟಿಸಿದ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಲೋಕೋಪಯೋಗಿ ಅಧಿಕಾರಿಗಳ ತಂಡ ಈಚೆಗೆ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದೆ. ಸೇತುವೆ ಕುಸಿದ ಭಾಗ ರಿಪೇರಿ ಮಾಡಿದ್ದಾರೆ. ಸೇತುವೆ ಸಾಮರ್ಥ್ಯ ಪರೀಕ್ಷೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಲೋಕೋಪಯೋಗಿ ಎಂಜಿನಿಯರ್ ಅಶೋಕ ಸಜ್ಜನಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.