ADVERTISEMENT

ಮಾತೃಭಾಷೆಯಲ್ಲಿ ಕಡ್ಡಾಯ ಶಿಕ್ಷಣ ಜಾರಿಯಾಗಲಿ

ಔರಾದ್ ನಾಲ್ಕನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಪ್ರವೀಣಕುಮಾರ ಹೆಬ್ರಿ ಆಶಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 7:33 IST
Last Updated 2 ಮಾರ್ಚ್ 2017, 7:33 IST
ಔರಾದ್ ತಾಲ್ಲೂಕಿನ ಠಾಣಾಕುಶನೂರಿನಲ್ಲಿ ಬುಧವಾರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಾ.ನಾ.ಸೋಲಾಪುರೆ ಅವರ ಮೆರವಣಿಗೆ ನಡೆಯಿತು.
ಔರಾದ್ ತಾಲ್ಲೂಕಿನ ಠಾಣಾಕುಶನೂರಿನಲ್ಲಿ ಬುಧವಾರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಾ.ನಾ.ಸೋಲಾಪುರೆ ಅವರ ಮೆರವಣಿಗೆ ನಡೆಯಿತು.   

ಔರಾದ್:  ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯಲು ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಕಡ್ಡಾಯವಾಗಬೇಕು. ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಗೆ ಸಮಸ್ತ ಕನ್ನಡಿಗರು ಒತ್ತಡ ತರಬೇಕು ಎಂದು ಸಾಹಿತಿ ಡಾ. ಪ್ರವೀಣಕುಮಾರ ಹೆಬ್ರಿ ಹೇಳಿದರು. ತಾಲ್ಲೂಕಿನ ಠಾಣಾಕುಶನೂರ್‌ನಲ್ಲಿ ಬುಧವಾರ ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ಇರುವುದು ನಿಜ. ಆದರೆ ಭವಿಷ್ಯದಲ್ಲಿ ಅದು ಎಷ್ಟು ವರ್ಷ ಉಳಿಯುತ್ತದೆ ಎಂಬುದು ಈಗ ಮುಖ್ಯ. ಎಲ್ಲರೂ ಆಂಗ್ಲ ಭಾಷೆ ಮೋಹಕ್ಕೆ ಶರಣಾದರೆ ಮಾತೃಭಾಷೆ ಉಳಿಯಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಕನ್ನಡ ಜತೆ ಕನ್ನಡಿಗರು ಉಳಿಯಬೇಕು. ಆದರೆ ರಾಜ್ಯದ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅವರು ಆತ್ಮಹತ್ಯೆಗೆ ಶರಣಾಗುತ್ತಿರುವುದು ತುಂಬ ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಈ ಜಿಲ್ಲೆಯ ಗಡಿ ಕನ್ನಡಿಗರ ಭಾಷಾ ಬಾಂಧವ್ಯ ಮೆಚ್ಚಿಕೊಂಡ ಅವರು, ಸಮ್ಮೇಳನದ ಮೆರವಣಿಗೆಯಲ್ಲಿ ಕಂಡು ಬಂದ ಉತ್ಸಾಹ ತಾಯಿ ನಾಡಿನ ಅಭಿಮಾನ ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನದಿಂದ ಜನಪ್ರತಿನಿಧಿಗಳನ್ನು ದೂರ ಇಡುವ ವಿಚಾರಕ್ಕೆ ನನ್ನ ವಿರೋಧ ಇದೆ ಎಂದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಬೆಳೆಸಲು ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ತಮ್ಮ ಮಕ್ಕಳಿಗೆ ಮಾತೃಭಾಷೆ ಕಲಿಸುವುದರ ಜತೆ ಉತ್ತಮ ಸಂಸ್ಕಾರ ಕೊಡಬೇಕು. ಮಗು ಕೇವಲ ಹೆಚ್ಚು ಅಂಕ ಗಳಿಸುವುದರ ಕಡೆ ಗಮನ ಕೊಡದೆ ಅವರ ವ್ಯಕ್ತಿತ್ವ ವಿಕಾಸದ ಕಡೆಗೂ ಒತ್ತು ನೀಡಬೇಕು ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ದೇವರು ಸಾನಿಧ್ಯ ವಹಿಸಿ, ಇಲ್ಲಿ ಅನ್ಯ ಭಾಷೆ ಪ್ರಭಾವದ ನಡುವೆಯೂ ಕನ್ನಡ ಬೆಳೆಯುತ್ತಿದೆ. ಅನ್ಯ ಭಾಷಿಕರು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ಭಾಷಣ ಮಾಡಿದರು. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಶಿವಕುಮಾರ ಕಟ್ಟೆ ಮಾತನಾಡಿ, ಸಮ್ಮೇಳನಾಧ್ಯಕ್ಷರ ಜವಾಬ್ದಾರಿ ಹೆಚ್ಚಿರುತ್ತದೆ. ಕನ್ನಡ ಬೆಳೆಸುವುದರ ಜತೆ ಇಲ್ಲಿಯ ಕನ್ನಡಿಗರ ಬದುಕು ಕಟ್ಟಿಕೊಡುವ ಕೆಲಸ ಆಗಬೇಕು ಎಂದರು.

ಸಮ್ಮೇಳನಾಧ್ಯಕ್ಷ ಬಾ.ನಾ ಸೋಲಾಪುರೆ, ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಉದಗೀರ್, ಲಾತೂರ್‌ನಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದ್ದು. ಅಲ್ಲಿ ಕನ್ನಡ ಶಾಲೆ ತೆರೆಯಬೇಕಾಗಿದೆ ಎಂದರು.

ಸುರೇಶ ಭೋಸ್ಲೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಠಾಣಾಕುಶನೂರ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಪ.ಪಂ. ಅಧ್ಯಕ್ಷ ರಾಜಪ್ಪ ನಿರ್ಮಳೆ,  ಬಂಡೆಪ್ಪ ಕಂಟೆ, ಬಸವಣಪ್ಪ ಅಲ್ಮಾಜೆ, ಸತೀಶ ಜೀರ್ಗೆ, ವಿರೇಂದ್ರ ರಾಜಪುರೆ, ರಾಮಶೆಟ್ಟಿ ಪನ್ನಾಳೆ, ಪ್ರಶಾಂತ ಮಠಪತಿ, ಬಸವರಾಜ ಬಲ್ಲೂರ, ಟಿ.ಎಂ. ಮಚ್ಚೆ ಇದ್ದರು. ಕಸಾಪ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಸ್ವಾಗತಿಸಿದರು. ಶಾಲಿವಾನ ಉದಗೀರೆ ನಿರೂಪಿಸಿದರು. ಉಮಾಕಾಂತ ಮಹಾಜನ ವಂದಿಸಿದರು.

ಸಮ್ಮೇಳನಕ್ಕೆ ಜನಪ್ರತಿನಿಧಿಗಳ ಗೈರು
ಔರಾದ್:
 ತಾಲ್ಲೂಕಿನ ಠಾಣಾಕುಶನೂರ್‌ನಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಹುತೇಕ ಜನಪ್ರತಿನಿಧಿಗಳ ಗೈರು ಎದ್ದು ಕಾಣುತಿತ್ತು.

ಶಾಸಕ ಪ್ರಭು ಚವಾಣ್ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕುಣಿಯುವುದಕ್ಕಷ್ಟೇ ಸೀಮಿತರಾದರು. ನಂತರ ಅವರು ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಣಲೇ ಇಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅನುಪಸ್ಥಿತಿಯಲ್ಲಿ ಸುರೇಶ ಭೋಸ್ಲೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಠಾಣಾಕುಶನೂರಗೆ ಹೊಂದಿಕೊಂಡಿರುವ ತೋರಣಾ ಗ್ರಾಮದವರಾದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪ್ರಕಾಶ ಪಾಟೀಲ ಸಮ್ಮೇಳನಕ್ಕೆ ಗೈರು ಆಗಿದ್ದರು.

ಜಿಪಂ. ಸದಸ್ಯ ಅನೀಲ ಬಿರಾದಾರ, ಮಾರುತಿ ಚವಾಣ್, ಸುರೇಖಾ ಭೋಸ್ಲೆ ಮೆರವಣಿಗೆಯಲ್ಲಿ ಕಾಣಿಸಿಕೊಂಡರೂ ಸಮ್ಮೇಳನ ಉದ್ಘಾಟನೆಯಲ್ಲಿ ಕಾಣಲಿಲ್ಲ. ಎಕಂಬಾ ಜಿಪಂ. ಸದಸ್ಯೆ ಸಂಧ್ಯಾರಾಣಿ ನರೋಟೆ ಗೈರು ಇದ್ದರು. ಆಮಂತ್ರಿತ ಜನಪ್ರತಿನಿಧಿಗಳು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಯ ನೀಡದಿರುವುದು ಕನ್ನಡಾಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ADVERTISEMENT

*
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ ಎನ್ನುವುದು ಮುಖ್ಯ ಅಲ್ಲ. ಅದು ಭವಿಷ್ಯದಲ್ಲಿ ಎಷ್ಟು ವರ್ಷ ಬದುಕಿರುತ್ತದೆ ಎನ್ನುವುದು ಮುಖ್ಯ.
-ಪ್ರದೀಪಕುಮಾರ ಹೆಬ್ರಿ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.