ADVERTISEMENT

ಮೇವಿಗಾಗಿ ಕುರಿಗಾಹಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 6:34 IST
Last Updated 1 ಸೆಪ್ಟೆಂಬರ್ 2017, 6:34 IST

ಚಿಟಗುಪ್ಪ: ಕುರಿಗಳಿಗೆ ಮೇವು ಮತ್ತು ನೀರು ಸಿಗದೆ ಕುರಿಗಾಹಿಗಳು ಪರದಾಡುವಂತಾಗಿದೆ. ಊರು ಬಿಟ್ಟು, ಕತ್ತೆಯ ಮೇಲೆ ಸಾಮಗ್ರಿ ಹಾಕಿಕೊಂಡು ಕುರಿಗಳ ಜೊತೆಗೆ ನಿತ್ಯ ಊರಿಂದ ಊರಿಗೆ ಸಂಚರಿಸುತ್ತಿದ್ದಾರೆ.

ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಕುರಿಗಾಹಿ ಜನರು ಸೋಮವಾರ ಹುಮನಾಬಾದ್ ತಾಲ್ಲೂಕಿನ ನಿರ್ಣಾ– ಬನ್ನಳ್ಳಿ ಶಿವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಕುರಿಗಳ ಜೊತೆಗೆ ಬಿಡಾರ ಹಾಕಿದ್ದರು.

’ಉತ್ತರ ಕರ್ನಾಟಕದ ರಾಯಚೂರು, ಕಲಬುರ್ಗಿ, ಬೀದರ್, ಮಹಾರಾಷ್ಟ್ರದ ಉಮರ್ಗಾ, ಉದಗೀರ್, ಸೋಲ್ಲಾಪುರ ಮತ್ತಿತರ ಕಡೆಗಳಿಗೆ ನಮ್ಮವರು ಕುರಿಗಳ ಜೊತೆಗೆ ಮೇವಿಗಾಗಿ 4– 5 ತಿಂಗಳು ಹೋಗುತ್ತಾರೆ’ ಎಂದು ಚಂದ್ರಪ್ಪ ವಗ್ಗೆನೋರ್ ತಿಳಿಸಿದರು.

ADVERTISEMENT

‘ದಿನಕ್ಕೆ ಕನಿಷ್ಠ 15 ಕಿ.ಮೀ ಸಂಚರಿಸುತ್ತೇವೆ. ಪ್ಲಾಸ್ಟಿಕ್ ತಾಡಪಾಲ್ ಬಿಡಾರ ಹಾಕಿ ಕುರಿಗಳ ಮಧ್ಯೆ ಮಲಗಿ ರಾತ್ರಿ ಕಳೆಯುತ್ತೇವೆ. ಸಾಮಗ್ರಿ ಹೊತ್ತುಕೊಂಡು ಹೋಗಲು ಮೂರು ಕತ್ತೆಗಳು, ಕುರಿಗಳ ರಕ್ಷಣೆಗೆ ಕನಿಷ್ಠ ಐದು ನಾಯಿಗಳಿವೆ’ ಎಂದು ಕುರಿಗಾಹಿ ಧರ್ಮಣ್ಣ ಹೇಳಿದರು.

‘ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ನಮ್ಮ ಕಡೆ ಮೇವು ಮತ್ತು ನೀರಿನ ಕೊರತೆ ಆಗಿದೆ. ಹೀಗಾಗಿ ಕುರಿಗಳ ಜೊತೆಗೆ ಸಂಚಾರ ಮಾಡಬೇಕಾದ ಸ್ಥಿತಿ ಬಂದಿದೆ’ ಎಂದು ಶಿವಣ್ಣ ನುಡಿದರು.

‘ಯಾವುದೇ ಊರಿಗೆ ಹೋದರೂ ತಮ್ಮ ಹೊಲ ಗದ್ದೆಗಳ ಬೆಳೆಯನ್ನು ಕುರಿಗಳು ಹಾಳು ಮಾಡುತ್ತವೆ ಎಂದು ರೈತರು ಆಶ್ರಯ ಕೊಡುವುದಿಲ್ಲ. ನಿತ್ಯ ಅರಣ್ಯ ಪ್ರದೇಶದಲ್ಲಿ ಓಡಾಡಬೇಕು. ನರಿ, ಚಿರತೆ ಕುರಿಗಳನ್ನು ತಿನ್ನುವ ಭೀತಿ ಇರುವುದರಿಂದ ರಾತ್ರಿ ಪಾಳಿ ಮೇಲೆ ಮಲಗುತ್ತೇವೆ. ಆದರೂ ಕಾಡು ಪ್ರಾಣಿಗಳು ಕುರಿಗಳನ್ನು ಎಳೆದುಕೊಂಡು ಹೋದ ಕಹಿ ಪ್ರಸಂಗ ನಡೆದಿದೆ’ ಎಂದು ರುದ್ರಣ್ಣ ಬ್ಯಾಡಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.