ADVERTISEMENT

ರಾಜಶೇಖರ ಪಾಟೀಲ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:49 IST
Last Updated 24 ಏಪ್ರಿಲ್ 2018, 6:49 IST

ಹುಮನಾಬಾದ್: ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಬಿ.ಪಾಟೀಲ ಅವರು ಸೋಮವಾರ ಸಾವಿರಾರು ಸಂಖ್ಯೆ ಅಭಿಮಾನಿಗಳ ಮಧ್ಯ ಮೆರವಣಿಗೆಯಲ್ಲಿ ಆಗಮಿಸಿ, ನಾಮಪತ್ರ ಸಲ್ಲಿಸಿದರು.

ರಾಜಶೇಖರ ಬಿ.ಪಾಟೀಲ ಅವರು ರಾಜರಾಜೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಅಭಿಷೇಕ ಸಲ್ಲಿಸಿದರು. ನಂತರ ತಮ್ಮ ತಾಯಿ ದಿವಂಗತ ಶಕುಂತಲಾ ಪಾಟೀಲ, ತಂದೆ ಬಸವರಾಜ ಪಾಟೀಲ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಪತ್ನಿ ಪ್ರೇಮಾ ಹಾಗೂ ಪರಿವಾರ ಸದಸ್ಯರೊಂದಿಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಸಲ್ಲಿಸಿದರು.

ನಂತರ ವೀರಭದ್ರೇಶ್ವರ ದೇವಸ್ಥಾನದಿಂದ ತೆರೆದ ಜೀಪ್‌ನಲ್ಲಿ ರಾಜಶೇಖರ ಬಿ.ಪಾಟೀಲ ಅವರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಜಾಬ‌ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಸದಸ್ಯ ಲಕ್ಷ್ಮಣರಾವ ಬುಳ್ಳಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ ತೆರೆದ ಜೀಪ್‌ನಲ್ಲಿ ಇದ್ದರು.

ADVERTISEMENT

ಪುಟಾಣಿ ಗಲ್ಲಿ ಮಾರ್ಗವಾಗಿ, ಬಸವೇಶ್ವರ ವೃತ್ತ, ಬಾಲಾಜಿ ವೃತ್ತ, ಸರ್ದಾರ ಪಟೇಲ, ಡಾ.ಅಂಬೇಡ್ಕರ್, ಶಿವಚಂದ್ರ ನೆಲ್ಲೊಗಿ ವೃತ್ತ ಮಾರ್ಗವಾಗಿ ಮಿನಿವಿಧಾನ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಹೋದರ ಡಾ.ಚಂದ್ರಶೇಖರ ಬಿ.ಪಾಟೀಲ ಇದ್ದರು.

ಕಳೆದ ಬಾರಿಗಿಂತ ಅಧಿಕ ಮತಗಳಿಂದ ಗೆಲುವು: ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜಶೇಖರ ಬಿ.ಪಾಟೀಲ, ‘ ಕಳೆದ ಬಾರಿ 26ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿ ಅದಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ಇದೆ’ ಎಂದು ತಿಳಿಸಿದರು.

ತಮ್ಮ ಪ್ರತಿಸ್ಪರ್ಧಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅಭಿವೃದ್ದಿಪ್ರಿಯ. ಜನರಿಗೆ ಕಳೆದ ಚುನಾವಣೆ ವೇಳೆ ಏನೇನು ಭರವಸೆ ಕೊಟ್ಟಿದ್ದೇನೋ ಆ ಪೈಕಿ ಶೇ 90 ರಷ್ಟು ಈಡೇರಿಸಿದ್ದೇನೆ. ನನ್ನೆದುರು ಯಾರೇ ಸ್ಪರ್ಧಿಸಿದರೂ ಗೆಲುವು ಸಾಧಿಸುವುದು ನಾನೇ ಆಗಿರುವುದರಿಂದ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

ಮುಂದಿನ ಆದ್ಯತೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜಿಲ್ಲೆಯ ರೈತರ ಜೀವನಾಡಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವುದು ಮೊದಲ ಆದ್ಯತೆ. ಬಳಿಕ ರೈತರ ಇತರೆ ಸಮಸ್ಯೆ ನಂತರ ಉಳಿದವುಗಳ ಕಡೆಗೆ ಗಮನಹರಿಸುತ್ತೇನೆ’ ಎಂದು ವಿವರಿಸಿದರು.

ಬೇರೆ ಪಕ್ಷಗಳ ಮುಖಂಡರಿಗೆ ಟಿಕೆಟ್‌ ಕೈ ತಪ್ಪಲು ನೀವೇ ಕಾರಣ ಎಂಬಂತೆ ಎಂಬ ದೂರಿನ ಕುರಿತ ಕೇಳಿದ  ಪ್ರಶ್ನೆಗೆ ‘ ವಿರೋಧ ಪಕ್ಷದವರಿಗೆ ಟಿಕೆಟ್‌ ಕೊಡಿಸುವ ಶಕ್ತಿ ನನ್ನ ಬಳಿ ಇದೆ ಎಂಬುದನ್ನು ಬೇರೆ ಪಕ್ಷಗಳ ಮುಖಂಡರು ಗುರುತಿಸಿದ್ದಕ್ಕೆ ಅಭಿನಂದನೆಗಳು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.