ADVERTISEMENT

ರೈತನ ಕೈಹಿಡಿದ ಗೋಡಂಬಿ ಬೇಸಾಯ

ಒಮ್ಮೆ ಸಸಿ ನೆಟ್ಟರೆ 30 ವರ್ಷಗಳ ಕಾಲ ಆದಾಯ

ಚಂದ್ರಕಾಂತ ಮಸಾನಿ
Published 15 ಮೇ 2017, 5:40 IST
Last Updated 15 ಮೇ 2017, 5:40 IST
ರೈತನ ಕೈಹಿಡಿದ ಗೋಡಂಬಿ ಬೇಸಾಯ
ರೈತನ ಕೈಹಿಡಿದ ಗೋಡಂಬಿ ಬೇಸಾಯ   
ಬೀದರ್‌: ನೀರಿನ ಕೊರತೆ ಹಾಗೂ ಸಕ್ಕರೆ ಕಾರ್ಖಾನೆಯ ಹಿಡಿತದಿಂದ ದೂರ ಉಳಿಯಲು ಬೀದರ್‌ ತಾಲ್ಲೂಕಿನ ಚಿಟ್ಟಾ ಗ್ರಾಮದ ನಾರಾಯಣರಾವ್‌ ಮಾಣಿಕಪ್ಪ ಅವರು ಕಬ್ಬು ಬೆಳೆಗೆ ಶಾಶ್ವತವಾಗಿ ತೀಲಾಂಜಲಿ ನೀಡಿದ್ದಾರೆ. ತೋಟದಲ್ಲಿ ಗೋಂಡಬಿ ಮರಗಳನ್ನು ಬೆಳೆಸುವ ಮೂಲಕ ಮೂರು ವರ್ಷಗಳಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ.
 
ನಾರಾಯಣರಾವ್‌ ಇನ್ನುಳಿದ ರೈತರಂತೆ ಕಬ್ಬು ನಾಟಿ ಮಾಡುತ್ತಿದ್ದರಿಂದ ನೀರು ಹೆಚ್ಚು ಬೇಕಾಗುತ್ತಿತ್ತು. ಅಲ್ಲದೆ, ಪ್ರತಿ ಬಾರಿಯೂ ಕಳೆ ತೆಗೆಯುವುದು ಹಾಗೂ ಕೃಷಿ ಕಾರ್ಮಿಕರನ್ನು ಹುಡುಕಿಕೊಂಡು ಹೋಗುವುದು ಸವಾಲಾಗಿ ಪರಿಣಿಮಿಸಿತ್ತು. ಕಬ್ಬು ಬೆಳೆದ ನಂತರವೂ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಭಾರಿ ಪ್ರಯಾಸ ಪಡಬೇಕಾಗಿತ್ತು. ಕಾರ್ಖಾನೆಗೆ ಕಬ್ಬು ಸಾಗಿಸಿದ ನಂತರವೂ ಸಕಾಲದಲ್ಲಿ ಹಣ ಕೈಗೆ ಸೇರುತ್ತಿರಲಿಲ್ಲ. ಪರಿಶ್ರಮ ಪಟ್ಟು ಕಬ್ಬು ಬೆಳೆದರೂ ಕಾರ್ಖಾನೆಯ ಅಧಿಕಾರಿಗಳು ಹಾಗೂ ಮುಖಂಡರ ಬಳಿ ಹೋಗಿ ಬಿಲ್‌ ಪಾವತಿಗೆ ಅಂಗಲಾಚುವುದು ಅನಿವಾರ್ಯವಾಗಿತ್ತು.
 
ಗೋಡಂಬಿ ನಿರ್ದೇಶನಾಲಯವು ಮೂರು ವರ್ಷಗಳ ಹಿಂದೆ ಬೀದರ್‌ನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಗೋಡಂಬಿ ಬೆಳೆ ಕುರಿತು ಕಾರ್ಯಾಗಾರ ಆಯೋಜಿಸಿತ್ತು. ತಜ್ಞರು ಗೋಡಂಬಿ ಬೆಳೆಯ ಮಹತ್ವ ಹಾಗೂ ಆದಾಯ ಕುರಿತು ಮಾರ್ಗದರ್ಶನ ನೀಡಿದ್ದರು. ಬರಡು ಭೂಮಿಯಲ್ಲೂ ಬೆಳೆಸಬಹುದಾದ ಬೆಳೆ ಇದಾಗಿದೆ ಎನ್ನುವುದನ್ನು ನಾರಾಯಣರಾವ್‌ ಅವರಿಗೆ ಮನವರಿಕೆ ಮಾಡಿದ್ದರು. 
 
ಇದರಿಂದ ಪ್ರೇರಿತರಾದ ಅವರು 2011ರ ಆಗಸ್ಟ್‌ನಲ್ಲಿ ತಮ್ಮ 2.28 ಎಕರೆ ಜಮೀನಿನಲ್ಲಿ 250 ಗೋಡಂಬಿ ಸಸಿಗಳನ್ನು ನೆಟ್ಟರು. ಗೋಡಂಬಿ ಮರಗಳು ನಾಲ್ಕು ವರ್ಷಗಳಲ್ಲಿ ಬೆಳೆದು ನಿಂತು ಫಲ ಕೊಡಲು ಆರಂಭಿಸಿದವು. ಮಾವಿನ ಮರಕ್ಕೆ ಮಂಗಗಳ ಕಾಟ ಜಾಸ್ತಿ ಇರುತ್ತದೆ. ಗೋಡಂಬಿಗೆ ಅವುಗಳ ಕೀಟಲೆಯೂ ಇಲ್ಲ, ದನಗಗಳ ಕಾಟವೂ ಇಲ್ಲ. ಹೀಗಾಗಿ ಗೋಡಂಬಿ ಸಮೃದ್ಧವಾಗಿ ಬೆಳೆದಿದೆ.
 
‘ಮೊದಲ ವರ್ಷ ಸಾಧಾರಣ ಬೆಳೆ ಬಂದಿತು. 2014ರಲ್ಲಿ ಒಟ್ಟು 70 ಕೆ.ಜಿ ಗೋಡಂಬಿ ಬೆಳೆದು ಪ್ರತಿ ಕೆ.ಜಿಗೆ ₹63 ರಂತೆ ಮಾರಾಟ ಮಾಡಿದಾಗ ₹ 4,410 ಆದಾಯ ಬಂದಿತು. 2015ರಲ್ಲಿ ಬೆಳೆದ 210 ಕೆ.ಜಿ ಗೋಡಂಬಿಯನ್ನು ಪ್ರತಿ ಕೆಜಿಗೆ ₹ 72ರಂತೆ ಮಾರಾಟ ಮಾಡಿದ್ದರಿಂದ ₹ 15,120 ಕೈಸೇರಿತು.
 
2016ರಲ್ಲಿ 450 ಕೆ.ಜಿ. ಗೋಡಂಬಿ ಬೆಳೆದು (ಪ್ರತಿ ಕೆ.ಜಿಗೆ ₹95) ₹45 ಸಾವಿರ ಗಳಿಸಿರುವೆ. ಈ ವರ್ಷ ಬೆಳೆದ 1,100 ಕೆ.ಜಿ. ಗೋಡಂಬಿಯನ್ನು (ಬೆಲೆ ₹155) ಮಾರಾಟ ಮಾಡಿ ₹1.26 ಲಕ್ಷ ಆದಾಯ ಪಡೆದಿರುವೆ’ ಎಂದು ಖುಷಿಯಿಂದ ವಿವರಿಸುತ್ತಾರೆ.
 
‘ಕಬ್ಬು ನಾಟಿ ಮಾಡಲು ಎಕರೆಗೆ ₹ 10 ಸಾವಿರ, ಗೊಬ್ಬರಕ್ಕೆ ₹ 3 ಸಾವಿರ ಹಾಗೂ ಕಬ್ಬು ಕಟ್ಟಲು ₹3ರಿಂದ ₹4 ಸಾವಿರ ಖರ್ಚಾಗುತ್ತಿತ್ತು.  ಆದಾಯ ಬರುತ್ತಿರಲಿಲ್ಲ. ಗೋಡಂಬಿ ಉತ್ತಮ ಬೆಳೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.