ADVERTISEMENT

ರೈತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ: ಸಚಿವ ಖಂಡ್ರೆ

ಭಾಲ್ಕಿ: ಟೌನ್‌ಹಾಲ್‌ ಕಟ್ಟಡ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 6:30 IST
Last Updated 13 ಜುಲೈ 2017, 6:30 IST

ಭಾಲ್ಕಿ: ‘ರೈತರ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ಲೋಕೋಪಯೋಗಿ ಇಲಾಖೆ, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ₹ 3.75 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹಾಗೂ ಟೌನ್‌ ಹಾಲ್‌ (ನೆಮ್ಮದಿ ಊರು) ಕಟ್ಟಡ ಕಾಮಗಾರಿಗೆ  ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ರಾಜ್ಯದ ರೈತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಹಲವು ಕೃಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಲಮನ್ನಾದಿಂದ ರಾಜ್ಯದ ಸುಮಾರು 16 ರಿಂದ 20 ಲಕ್ಷ ರೈತರಿಗೆ ಸದುಪಯೋಗವಾಗಿದೆ. ಬೀದರ್ ಜಿಲ್ಲೆಯಲ್ಲಿ ಅಂದಾಜು ₹ 550 ಕೋಟಿ ರೈತರ ಸಾಲಮನ್ನಾ ಆಗಲಿದೆ’ ಎಂದರು.

ADVERTISEMENT

‘ಬೆಳೆವಿಮೆ, ಇನ್‍ಪುಟ್ ಸಬ್ಸಿಡಿಗೆ ಜಿಲ್ಲೆಗೆ ₹ 545 ಕೋಟಿ ಬಿಡುಗಡೆಯಾಗಿದ್ದು, ಆಯಾ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ತೊಗರಿ ಬೆಳೆಯವ ಪ್ರದೇಶ ಹೆಚ್ಚಾಗಿರುವ ಕಾರಣಕ್ಕೆ ರಾಜ್ಯ ಸರ್ಕಾರ ತೊಗರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಇದುವರೆಗೂ ಬಡವರಿಗಾಗಿ 23 ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿದೆ’ ಎಂದು ಹೇಳಿದರು. ಪಟ್ಟಣದಲ್ಲಿ ಈಚೆಗೆ ಪ್ರತಿಪಕ್ಷದವರು ಪ್ರತಿಕೃತಿ ದಹನ ಮಾಡಿರುವುದು ಹಾಗೂ ವಿನಾಕಾರಣ ಆರೋಪ ಮಾಡುತ್ತಿರುವುದಕ್ಕೆ ಸಚಿವ ಖಂಡ್ರೆ ಆಕ್ರೋಶ ವ್ಯಕ್ತ ಪಡಿಸಿದರು.

ಪುರಸಭೆ ಅಧ್ಯಕ್ಷ ವಿಶಾಲ ಪೂರಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್, ಉಪಾಧ್ಯಕ್ಷ ಮಾರುತಿರಾವ ಮಗರ, ಪುರಸಭೆ ಉಪಾಧ್ಯಕ್ಷೆ ಅನಿತಾ ಪಾಂಡುರಂಗ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಶಶಿಕಾಂತ ಮಳ್ಳಿ,  ಸಾರಿಗೆ ಸಂಸ್ಥೆ ರಾಜ್ಯ ನಿರ್ದೇಶಕ ವಿಲಾಸ ಮೋರೆ, ಹಣಮಂತರಾವ ಚವ್ಹಾಣ, ಶ್ರಾವಣಕುಮಾರ ಗಾಯಕವಾಡ್, ಪ್ರಕಾಶ ಭಾವಿಕಟ್ಟಿ, ಮಹಾದೇವ ಸ್ವಾಮಿ, ಬುದ್ಧಾನಂದ ಕುಂದೆ, ರಾಜಕುಮಾರ ವಂಕೆ, ಶಿವಶರಣಪ್ಪ ಛತ್ರೆ, ಎಪಿಎಂಸಿ ಅಧ್ಯಕ್ಷ ಗೋವಿಂದರಾವ, ಜಲೀಲ್‌ ಅಹ್ಮದ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೋಟಪ್ಪಗೋಳ, ಶ್ರೀನಿವಾಸ ಪೊದ್ದಾರ್ ಇದ್ದರು.
ಗಣಪತರಾವ ಕಲ್ಲೂರೆ ನಿರೂಪಿಸಿದರು. ಸಿ.ನಾಗರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.