ADVERTISEMENT

ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ

ಅಖಂಡ ಕರ್ನಾಟಕ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 6:44 IST
Last Updated 6 ಏಪ್ರಿಲ್ 2018, 6:44 IST

ಬೀದರ್: ರೈತರ ಮಕ್ಕಳು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿದೆ. ನಗರದ ಶಿವನಗರದ ಅಕ್ಕ ಮಹಾದೇವಿ ಫಂಕ್ಷನ್‌ ಹಾಲ್‌ನಲ್ಲಿ ಸಂಘದ ರಾಜ್ಯ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

‘ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಕೃಪಾಂಕ ಕೊಡಲಾಗುತ್ತಿತ್ತು. ನಂತರ ಬಂದ ಸರ್ಕಾರಗಳು ಕೃಪಾಂಕ ಹಿಂದಕ್ಕೆ ಪಡೆದುಕೊಂಡಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಸರ್ಕಾರ ಕೃಪಾಂಕ ನೀಡುವ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು’ ಎಂದು ಪ್ರಮುಖರು ಬೇಡಿಕೆ ಮಂಡಿಸಿದರು.

‘ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿ ಮತದಾರರಿಗೆ ಆಮಿಷ ತೋರಿಸಿ ಮತ ಪಡೆದು ಅಧಿಕಾರಕ್ಕೆ ಬರುತ್ತವೆ. ಆದರೆ, ಪ್ರಣಾಳಿಕೆಯಲ್ಲಿ ಶೇ 10 ರಷ್ಟನ್ನೂ ಅನುಷ್ಠಾನಕ್ಕೆ ತರುವುದಿಲ್ಲ. ಆದ್ದರಿಂದ ಪ್ರಣಾಳಿಕೆ ಕುರಿತು ಪಕ್ಷಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಜಮೀನುಗಳಿಗೆ ಹೋಗಲು ದಾರಿ ಇಲ್ಲದ ಕಾರಣ ಅನೇಕ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದಿನಂತೆ ದಾರಿ ಮಾಡಿಕೊಡುವ ಅಧಿಕಾರವನ್ನು ಆಯಾ ತಹಶೀಲ್ದಾರ್‌ಗೆ ಕೊಡಬೇಕು. ದಾರಿ ಕೊಡದ ರೈತರಿಗೆ ದಂಡ ವಿಧಿಸುವ ಅಧಿಕಾರವನ್ನೂ ನೀಡಬೇಕು‘ಎಂದು ಆಗ್ರಹಿಸಿದರು. ‘ಬ್ರಿಟಿಷರ ಆಡಳಿತದ ನಂತರ ಮತ್ತೆ ಸರ್ವೆ ಆಗದ ಕಾರಣ ರಾಜ್ಯದಾದ್ಯಂತ ರೈತರ ಜಮೀನುಗಳ ಸರ್ವೇ ಮಾಡಿ ಹೊಸ ದಾಖಲೆಗಳನ್ನು ಒದಗಿಸಬೇಕು‘ ಎಂದು ಒತ್ತಾಯಿಸಿದರು.ಕೃಷಿ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿದ್ಯಾರ್ಥಿ ಪರಿಷತ್ ಸ್ಥಾಪಿಸಲು ಹಾಗೂ ರೈತ ಹುತಾತ್ಮ ದಿನವನ್ನು ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ರಾಜ್ಯ ಗೌರವಾಧ್ಯಕ್ಷ ನಿರ್ಮಲಕಾಂತ ಪಾಟೀಲ, ಕಾರ್ಯಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಪ್ರಧಾನ ಕಾರ್ಯದರ್ಶಿ ಕೆ. ಸುಧೀರಕುಮಾರ, ಉಪಾಧ್ಯಕ್ಷರಾದ ನಾಗರಾಜಪ್ಪ, ಲಕ್ಷ್ಮೀನಾರಾಯಣ, ಯು.ಡಿ. ಒಡೆಯರ್‌, ಸಂಘಟನಾ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಾರ್ಯಕಾರಿಣಿ ಸದಸ್ಯೆ ಜಯಶ್ರೀ ಜಂಗಮಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುರಾವ್ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.