ADVERTISEMENT

ಲಾರಿ ಹಾವಳಿಯಿಂದ ಸಂಚಾರ ಸಮಸ್ಯೆ

ಔರಾದ್ ಮಾರುಕಟ್ಟೆಯಲ್ಲಿ ಅನಧಿಕೃತ ಮರಳು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:05 IST
Last Updated 21 ಮೇ 2018, 12:05 IST
ಔರಾದ್‌ನ ರಸ್ತೆಬದಿಯಲ್ಲಿ ಲಾರಿಗಳು ನಿಲುಗಡೆಯಾಗಿರುವುದು
ಔರಾದ್‌ನ ರಸ್ತೆಬದಿಯಲ್ಲಿ ಲಾರಿಗಳು ನಿಲುಗಡೆಯಾಗಿರುವುದು   

ಔರಾದ್: ತಾಲ್ಲೂಕಿನಿಂದ ಹಾದು ಹೋಗುವ ಮರಳು ಲಾರಿಗಳ ಹಾವಳಿ ಹೆಚ್ಚಾಗಿದ್ದು, ಜನರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಮಹಾರಾಷ್ಟ್ರದ ಕಡೆಯಿಂದ ನಿತ್ಯ ನೂರಾರು ಲಾರಿಗಳು ಮರಳು ತುಂಬಿಕೊಂಡು ತಾಲ್ಲೂಕಿನಿಂದ ಹಾದು ಹೋಗುತ್ತವೆ. ಈ ಸಮಸ್ಯೆ ಪರಿಹರಿಸುವಂತೆ ಜನರು ಕೋರಿದ್ದಾರೆ.

‘ಚಾಲಕರು ಲಾರಿಗಳನ್ನು ಮನ ಬಂದ ಕಡೆ ರಸ್ತೆ ಬದಿ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಬೆಳಿಗ್ಗೆ ಹೊತ್ತು ಹಲವಾರು ಲಾರಿಗಳು ರಸ್ತೆಗಳನ್ನು ಆವರಿಸಿಕೊಳ್ಳುತ್ತವೆ. ಇದರಿಂದ ಇಲ್ಲಿ ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ನಡೆಯಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ತಿಳಿಸಿದರು.

‘ಪಟ್ಟಣದ ಪ್ರಮುಖ ವ್ಯಾಪಾರ ಕೇಂದ್ರ ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ರಸ್ತೆಯ ಅಕ್ಪಕ್ಕದಲ್ಲಿ ಅತಿಕ್ರಮಣ ಆಗಿದೆ. ಇದರಿಂದಲೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಮರಳು ಸಂಗ್ರಹ: ತಾಲ್ಲೂಕಿನ ವಿವಿಧೆಡೆ ಕೆಲವರು ಅನಧಿಕೃತವಾಗಿ ಮರಳ ಸಂಗ್ರಹ ಕೆಲಸದಲ್ಲಿ ತೊಡಗಿದ್ದಾರೆ. ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಮರಳು ಸಂಗ್ರಹಣೆ ಕಾರ್ಯ ನಡೆದಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ 25 ರಿಂದ 30 ಲಾರಿಗಳಷ್ಟು ಮರಳು ಸಂಗ್ರಹವಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಎಪಿಎಂಸಿ ಸಹಾಯಕ ನಿರ್ದೇಶಕ ತುಕಾರಾಮ ಲಾಖೆ ಅವರು ಈಚೆಗೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಮರಳು ಸಂಗ್ರಹವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದರು.
‘ಎಪಿಎಂಸಿ ಮಾರುಕಟ್ಟೆ ಕೆಲವರು ತಮ್ಮ ಸೊತ್ತು ಮಾಡಿಕೊಂಡಿದ್ದಾರೆ. ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಶೀಘ್ರದಲ್ಲಿ ಈ ಎಲ್ಲದಕ್ಕೂ ಕಡಿವಾಣ ಹಾಕಲಾಗುವುದು’ ಎಂದು ತುಕಾರಾಮ ಲಾಖೆ ತಿಳಿಸಿದ್ದಾರೆ.

**
ಮರಳು ಲಾರಿ ಬೇಕಾಬಿಟ್ಟಿ ನಿಲುಗಡೆ ಮಾಡುವಂತಿಲ್ಲ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಕಾನೂನು ಪಾಲನೆ ಮಾಡದಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು
ನಾನಾಗೌಡ, ಪಿಎಸ್‌ಐ ಔರಾದ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.