ADVERTISEMENT

ಶಾಲಾ ಕಟ್ಟಡ ತೆರವು ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:45 IST
Last Updated 16 ಜುಲೈ 2017, 10:45 IST

ಬೀದರ್: ಸರ್ಕಾರಿ ಭೂಮಿ ಅತಿಕ್ರಮಣ ತೆರವುಗೊಳಿಸಲು ಒತ್ತಾಯಿಸಿ ಹಾಗೂ ಕನ್ನಡ ಮಾಧ್ಯಮ ಕಾನ್ವೆಂಟ್ ಶಾಲೆ ಕಟ್ಟಡ ತೆರವುಗೊಳಿಸಿದ್ದನ್ನು ವಿರೋಧಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರು ಬೆಳಿಗ್ಗೆ ನಗರದ ಜನವಾಡ ರಸ್ತೆಯಲ್ಲಿನ ಅಂಬೇಡ್ಕರ್ ಭವನ ಆವರಣದಲ್ಲಿ ಸೇರಿದರು. ಅಲ್ಲಿಂದ ಹಲಿಗೆಯೊಂದಿಗೆ ಘೋಷಣೆ ಕೂಗುತ್ತ ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್ ವೃತ್ತ, ಬಸವೇಶ್ವರ ವೃತ್ತ, ತಹಶೀಲ್ದಾರ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಯಕರ್ತರು ಪಕ್ಷದ ಧ್ವಜ, ಘೋಷಣಾ ಫಲಕಗಳನ್ನು ಹಿಡಿದುಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರು ಬಹಿರಂಗ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಹುಮನಾಬಾದ್‌ ಪಟ್ಟಣದಲ್ಲಿನ ಭಗತ್‌ಸಿಂಗ್ ಕನ್ನಡ ಮಾಧ್ಯಮ ಕಾನ್ವೆಂಟ್ ಶಾಲೆ ಕಟ್ಟಡ ತೆರವುಗೊಳಿಸಿದ್ದರಿಂದ ಆಗಿರುವ ₹ 45 ಲಕ್ಷ ನಷ್ಟಕ್ಕೆ ಸರ್ಕಾರ ಪರಿಹಾರ ಒದಗಿಸಬೇಕು.

ಕಟ್ಟಡ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ  ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಹಿಂದೆ ಇದ್ದ ಸ್ಥಳದಲ್ಲಿಯೇ ಶಾಲೆ ಕಟ್ಟಡ ನಿರ್ಮಿಸಲು ಅನುಮತಿ ಕೊಡಬೇಕು. ಪರಿಶಿಷ್ಟ ಜಾತಿ ಆಡಳಿತ ಮಂಡಳಿಯ ಗೋಖಲೆ ಶಿಕ್ಷಣ ಸಂಸ್ಥೆಗೆ ಸರ್ವೇ ಸಂಖ್ಯೆ 205 ರಲ್ಲಿನ 5 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಹಾಗೂ ಅವರ ಸಂಬಂಧಿಕರು ಸರ್ವೇ ಸಂಖ್ಯೆ 474, 295/3 ರಲ್ಲಿನ ಕೋಟ್ಯಂತರ ರೂಪಾಯಿ ಬೆಳೆ ಬಾಳುವ ಭೂಮಿ ಕಬಳಿಸಿದ್ದಾರೆ. ಕೂಡಲೇ ಅತಿಕ್ರಮಣ ತೆರವುಗೊಳಿಸಿ ಭೂಮಿಯನ್ನು ಬಡವರು ಹಾಗೂ ಕಾರ್ಮಿಕರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬೀದರ್‌ನ ಚಿದ್ರಿಯ ಸರ್ವೇ ಸಂಖ್ಯೆ 199, 200 ರಲ್ಲಿನ ಜಾಗ ಅತಿಕ್ರಮಣ ತೆರವುಗೊಳಿಸಬೇಕು. ಜಿಲ್ಲೆಯಾದ್ಯಂತ ಶ್ರೀಮಂತರು ಹಾಗೂ ಬಲಾಢ್ಯರು ಒತ್ತುವರಿ ಮಾಡಿರುವ ಸರ್ಕಾರಿ ಭೂಮಿಯನ್ನು ತೆರವು ಮಾಡಬೇಕು. ಬಗರ್‌ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂದು ಬೇಡಿಕೆ ಮಂಡಿಸಿದರು.

ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು. ಎಲ್ಲ ಜಾತಿಗಳ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಉಚಿತ ವಿತರಿಸಬೇಕು. ಅಬ್ದಲ್ ಕಲಾಂ ಆಜಾದ್ ಭವನ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ಆರ್. ಮುನಿಯಪ್ಪ, ಸೈಯದ್ ಜುಲ್ಫೇಕಾರ್ ಹಾಷ್ಮಿ, ಪ್ರಧಾನ ಕಾರ್ಯದರ್ಶಿ ಪಿ. ವಿಠ್ಠಲ ನಾಯಕ್, ಸಂಯೋಜಕ ಮಾರಸಂದ್ರ ಮುನಿಯಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಂಕುಶ ಗೋಖಲೆ, ಪ್ರಕಾಶ ಕೋಟೆ, ಅಶೋಕಕುಮಾರ ಮಾಳಗೆ ಭಾಗವಹಿಸಿದ್ದರು.  ಮೆರವಣಿಗೆ ಹಾಗೂ ಬಹಿರಂಗ ಸಭೆ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.