ADVERTISEMENT

‘ಶಿಕ್ಷಕರ ಕೊರತೆ ವಿದ್ಯಾರ್ಥಿಗಳ ಪ್ರಗತಿಗೆ ಹೊಡೆತ’

ಬಸವರಾಜ ಎಸ್.ಪ್ರಭಾ
Published 15 ನವೆಂಬರ್ 2017, 6:23 IST
Last Updated 15 ನವೆಂಬರ್ 2017, 6:23 IST
13ಬಿಎಲ್‌ಕೆ1 ಭಾಲ್ಕಿ ತಾಲ್ಲೂಕಿನ ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಾಳು ಬಿದ್ದಿರುವ ಶೌಚಾಲಯ 13ಬಿಎಲ್‌ಕೆ1. ಬಿರುಕುಬಿಟ್ಟ ಶಾಲೆಯ ಕೋಣೆಗಳು
13ಬಿಎಲ್‌ಕೆ1 ಭಾಲ್ಕಿ ತಾಲ್ಲೂಕಿನ ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಾಳು ಬಿದ್ದಿರುವ ಶೌಚಾಲಯ 13ಬಿಎಲ್‌ಕೆ1. ಬಿರುಕುಬಿಟ್ಟ ಶಾಲೆಯ ಕೋಣೆಗಳು   

ಭಾಲ್ಕಿ: ಎರಡು ವರ್ಷಗಳಿಂದ ಹಿಂದಿ ವಿಷಯಕ್ಕೆ ಶಿಕ್ಷಕರಿಲ್ಲ, ಮೂರು ವರ್ಷಗಳಿಂದ ಕಾಯಂ ಮುಖ್ಯ ಶಿಕ್ಷಕರಿಲ್ಲ. ಶಾಲೆಯಲ್ಲಿ ಕೋಣೆಗಳ ಸಮಸ್ಯೆ, ಗಣಕ ಯಂತ್ರಗಳು ಇಲ್ಲ. ಶಿಕ್ಷಕರೂ ಇಲ್ಲ. ಚಿತ್ರಕಲಾ ಶಿಕ್ಷಕರಂತೂ ಇಲ್ಲವೇ ಇಲ್ಲ. ವಿದ್ಯಾರ್ಥಿಗಳು, ಶಿಕ್ಷಕರಿಗೆ ಇರುವುದು ಶಿಥಿಲಗೊಂಡಿರುವ ಒಂದೇ ಶೌಚಾಲಯ. ಇದು ತಾಲ್ಲೂಕಿನಿಂದ 26 ಕಿ.ಮೀ ದೂರದಲ್ಲಿರುವ ಬಾಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ನೋವಿನ ನುಡಿಗಳು.

ಈ ಶಾಲೆಗೆ ಡೊಂಗರಗಿ, ಚಂದಾಪೂರ, ಜೈನಾಪೂರ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಶಾಲೆಯ 8ನೇ ತರಗತಿಯಲ್ಲಿ 32, 9ನೇ ತರಗತಿಯಲ್ಲಿ 41, ಹತ್ತನೇ ವರ್ಗದಲ್ಲಿ 45 ಸೇರಿದಂತೆ ಒಟ್ಟು 118 ವಿದ್ಯಾರ್ಥಿಗಳಿದ್ದಾರೆ.

ಶಾಲೆಯಲ್ಲಿ ಸದ್ಯಕ್ಕೆ ಕೇವಲ ಐದು ಕೋಣೆಗಳು ಮಾತ್ರ ಇವೆ. ಹಳೆಯ ಐದು ಕೋಣೆಗಳು ಬಿರುಕು ಬಿಟ್ಟಿರುವ ಕಾರಣ ಉಪಯೋಗಕ್ಕೆ ಇಲ್ಲದಂತಾಗಿವೆ. ಆದರೆ, ಸುಮಾರು ವರ್ಷಗಳಿಂದ ಅವುಗಳನ್ನು ನೆಲಸಮಗೊಳಿಸಿಲ್ಲ ಎನ್ನುತ್ತಾರೆ ಪಾಲಕರು.

ADVERTISEMENT

ಶಾಲೆಯಲ್ಲಿ ಎಲ್ಲ ವಿಷಯ ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಗಣಕ ಯಂತ್ರಗಳು, ಸುಸಜ್ಜಿತ ಆಟದ ಮೈದಾನ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣದಿಂದ ವಂಚಿತರಾಗಿದ್ದಾರೆ.

2015–16ನೇ ಸಾಲಿನಲ್ಲಿ ಶಾಲೆಯ ಫಲಿತಾಂಶ ಶೇ 76.19 ಆಗಿತ್ತು. ಆದರೆ ಕಳೆದ ವರ್ಷದ ಫಲಿತಾಂಶ ಕೇವಲ ಶೇ 43.35 ಆಗಿದೆ. ಇದಕ್ಕೆ ಕಾರಣ ಕಾಯಂ ಮುಖ್ಯಶಿಕ್ಷಕ ಮತ್ತು ಹಿಂದಿ ವಿಷಯ ಶಿಕ್ಷಕರ ಕೊರತೆ ಎಂದು ದೂರುತ್ತಾರೆ ಹೆಸರು ಹೇಳಲಿಚ್ಛಿಸದ ಪೋಷಕ.

ಕೋಣೆಗಳ ಸಮಸ್ಯೆ ಇರುವುದರಿಂದ ಗಣಕ ಯಂತ್ರ, ಪ್ರಯೋಗಾಲಯದ ಸಾಮಗ್ರಿ, ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕ ತರಿಸಲಾಗಿಲ್ಲ. ಶಾಲೆಗೆ ಕೆಲವೆಡೆ ಮಾತ್ರ ಕಾಂಪೌಂಡ್‌ ನಿರ್ಮಿಸಲಾಗಿದೆ. ಹಾಗಾಗಿ, ಇತರೆಡೆಯಿಂದ ನಾಯಿ, ದನ ಶಾಲೆಯ ಆವರಣ ಪ್ರವೇಶಿಸಿ ಹೊಲಸು ಮಾಡುತ್ತಿವೆ. ಕೆಲ ಪುಂಡ, ಪೊಕರಿಗಳು ಶಾಲೆಯನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಶೌಚಾಲಯದ ಮೇಲಿದ್ದ ಸಿಂಟೆಕ್ಸ್‌ ಹಾಗೂ ಇತರ ವಸ್ತುಗಳುನ್ನೂ ಧ್ವಂಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಿಬ್ಬಂದಿ.

ಕೋಣೆ ನೆಲಸಮಗೊಳಿಸುವ ಸಂಬಂಧ ಈಗಾಗಲೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಹೊಸ ಐದು ಕೋಣೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಪ್ರಭಾರಿ ಮುಖ್ಯಶಿಕ್ಷಕ ಅನಿಲ್‌ಕುಮಾರ ಬುರಾಡಿ ತಿಳಿಸುತ್ತಾರೆ.

ಸಂಬಂಧಪಟ್ಟವರು ಆದಷ್ಟು ಬೇಗ ಶಾಲೆಯಲ್ಲಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರೆಯುವಂತೆ ಮಾಡಬೇಕು. ಇಲ್ಲವಾದಲ್ಲಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸುತ್ತಾರೆ ಗ್ರಾಮಸ್ಥರು.

* * 

ಶಿಕ್ಷಕರ ಕೊರತೆ, ಇತರ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಹೊಡೆತ ಬೀಳುತ್ತಿದೆ. ಶಾಲೆಯಲ್ಲಿನ ಕೊರತೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ.
ಅನಿಲ್‌ಕುಮಾರ ಬುರಾಡೆ
ಪ್ರಭಾರಿ ಮುಖ್ಯಶಿಕ್ಷಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.