ADVERTISEMENT

ಶೈಲೇಂದ್ರ, ಕಲ್ಲೂರಗೆ ಬಿಜೆಪಿ ಟಿಕೆಟ್

ಪ್ರಕಾಶ ಖಂಡ್ರೆ, ಧನಾಜಿಗೆ ಮಣೆ ಹಾಕಿದ ಜೆಡಿಎಸ್‌: ಚುನಾವಣೆ ಕಣಕ್ಕೆ ಇಳಿಯಲು ಸಿದ್ಧತೆ

ಚಂದ್ರಕಾಂತ ಮಸಾನಿ
Published 21 ಏಪ್ರಿಲ್ 2018, 6:08 IST
Last Updated 21 ಏಪ್ರಿಲ್ 2018, 6:08 IST

ಬೀದರ್‌: ರಾಜಕೀಯ ಪಕ್ಷಗಳು ಜಿಲ್ಲೆಯ ಎಲ್ಲ ಕ್ಷೇತ್ರಗಳ ಟಿಕೆಟ್‌ ಘೋಷಣೆ ಮಾಡಿವೆ. ಕಾಂಗ್ರೆಸ್ ಮೊದಲ ಹಂತದಲ್ಲೇ ಎಲ್ಲ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದರೆ, ಉತ್ತಮ ಅಭ್ಯರ್ಥಿಗಳ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಹಾಗೂ ಬಿಜೆಪಿ ಮೊದಲ, ಎರಡನೆಯ ಪಟ್ಟಿ ಬಿಡುಗಡೆ ಮಾಡಿದ ನಂತರ ಬಾಕಿ ಉಳಿದಿದ್ದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಶುಕ್ರವಾರ ಘೋಷಿಸಿ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿವೆ.

ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆಗೆ ಬೀದರ್ ದಕ್ಷಿಣ ಹಾಗೂ ಮಾಜಿ ಶಾಸಕ ಸುಭಾಷ ಕಲ್ಲೂರ ಅವರಿಗೆ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಟಿಕೆಟ್ ದೊರೆತಿದೆ.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಇತ್ತೀಚಿಗಷ್ಟೇ ಪಕ್ಷಕ್ಕೆ ಸೇರಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರಿಗೆ ಬಸವಕಲ್ಯಾಣ ಹಾಗೂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಶಾಸಕ ಪ್ರಭು ಚವಾಣ್‌ಗೆ ಔರಾದ್ ಮೀಸಲು ಕ್ಷೇತ್ರದ ಟಿಕೆಟ್ ಪ್ರಕಟಿಸಲಾಗಿತ್ತು. ನಂತರ ಪ್ರಕಟವಾದ ಎರಡನೇ ಪಟ್ಟಿಯಲ್ಲಿ ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಬೀದರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಕೆ. ಸಿದ್ರಾಮಗೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಟಿಕೆಟ್ ದಕ್ಕಿತ್ತು.

ADVERTISEMENT

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಕಿ ಉಳಿದಿದ್ದ ಬೀದರ್ ದಕ್ಷಿಣ ಹಾಗೂ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಲಭಿಸಲಿದೆ ಎನ್ನುವುದು ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಬಿಜೆಪಿ ಪ್ರಕಟಿಸಿದ ಮೂರನೇ ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರಲ್ಲಿ ಗುರುತಿಸಿಕೊಂಡ ಶೈಲೇಂದ್ರ ಬೆಲ್ದಾಳೆ ಹಾಗೂ ಸುಭಾಷ ಕಲ್ಲೂರ ಅವರಿಗೆ ಟಿಕೆಟ್ ಲಭಿಸಿದೆ.

ಶಾಸಕ ಅಶೋಕ ಖೇಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ದಕ್ಕಿದ್ದರಿಂದ ಅಸಮಾಧಾನಗೊಂಡ ಆ ಪಕ್ಷದ ಮುಖಂಡ ಚಂದ್ರಾಸಿಂಗ್ ಬಂಡಾಯಕ್ಕೆ ಸಿದ್ಧತೆ ನಡೆಸಿದ್ದು, ಅವರು ಬಿಜೆಪಿಯ ಹುರಿಯಾಳು ಆಗಬಹುದು ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದವು. ಆದರೆ, ಈಗ ಅದೆಲ್ಲದಕ್ಕೂ ತೆರೆ ಬಿದ್ದಿದೆ.

ಹುಮನಾಬಾದ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಂಜಯ ಖೇಣಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ ಅವರ ಹೆಸರುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಕಲ್ಲೂರ ಅವರಿಗೆ ಟಿಕೆಟ್ ಒಲಿದು ಬಂದಿದೆ.

ಶೈಲೇಂದ್ರ ಬೆಲ್ದಾಳೆ ಕಳೆದ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಸುಭಾಷ ಕಲ್ಲೂರ ಅವರು ಹುಮನಾಬಾದ್‌ನಿಂದ ಕೆಜೆಪಿಯಿಂದ ಸ್ಪರ್ಧಿಸಿದ್ದ ಅಶ್ರಫ್ ಅಲಿ ಮಾಲಿಪಾಟೀಲ ಪರ ಕೆಲಸ ಮಾಡಿದ್ದರು.

ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲೇ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಭಾಲ್ಕಿಯಲ್ಲಿ ಈಶ್ವರ ಖಂಡ್ರೆ, ಹುಮನಾಬಾದ್ ರಾಜಶೇಖರ ಪಾಟೀಲ, ಬಸವಕಲ್ಯಾಣ ಬಿ. ನಾರಾಯಣರಾವ್, ಬೀದರ್ ರಹೀಂಖಾನ್, ಬೀದರ್ ದಕ್ಷಿಣ ಅಶೋಕ ಖೇಣಿ ಹಾಗೂ ಔರಾದ್‌ನಲ್ಲಿ ವಿಜಯಕುಮಾರ ಕೌಡಾಳೆ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಬೀದರ್ ಕ್ಷೇತ್ರವನ್ನು ಬಹುಜನ ಸಮಾಜ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಮಾರಸಂದ್ರ ಮುನಿಯಪ್ಪ ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಜಾತ್ಯತೀತ ಜನತಾ ದಳ ಜಿಲ್ಲೆಯ ಉಳಿದ ಐದು ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳ ಹೆಸರುಗಳನ್ನು ಪ್ರಕಟಿಸಿದೆ.

ಬಸವಕಲ್ಯಾಣದಲ್ಲಿ ಪಿ.ಜಿ.ಆರ್. ಸಿಂಧ್ಯ, ಬೀದರ್ ದಕ್ಷಿಣ ಬಂಡೆಪ್ಪ ಕಾಶೆಂಪುರ, ಹುಮನಾಬಾದ್ ನಸಿಮೊದ್ದೀನ್ ಪಟೇಲ್, ಭಾಲ್ಕಿ ಪ್ರಕಾಶ ಖಂಡ್ರೆ ಹಾಗೂ ಔರಾದ್‌ನಲ್ಲಿ ಧನಾಜಿ ಜಾಧವ್ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಪ್ರಕಾಶ ಖಂಡ್ರೆ ಹಾಗೂ ಧನಾಜಿ ಜಾಧವ್ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವ ಮೂಲಕ ಈ ಕ್ಷೇತ್ರಗಳಲ್ಲಿ ಚುನಾವಣಾ ಕಣ ರಂಗೇರುವಂತೆ ಮಾಡಿದೆ. ಅಲ್ಲದೆ, ಕ್ಷೇತ್ರಗಳಲ್ಲಿನ ಈವರೆಗಿನ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲೆಯಲ್ಲಿ ಹೆಚ್ಚು ಲಿಂಗಾಯತರಿಗೆ ಮಣೆ ಹಾಕಿದರೆ ಜೆಡಿಎಸ್ ಮುಸ್ಲಿಂ, ದಲಿತ, ಲಿಂಗಾಯತ, ಮರಾಠ, ಕುರುಬ ಸಮುದಾಯಕ್ಕೆ ಸೇರಿದ ತಲಾ ಒಬ್ಬ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ತಾನು ನಿಜ ಅರ್ಥದಲ್ಲಿಯೂ
ಜಾತ್ಯತೀತ ಎನ್ನುವ ಸಂದೇಶ ರವಾನಿಸಿದೆ ಎಂದು ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.