ADVERTISEMENT

ಸಚಿವ ಖಂಡ್ರೆ, ಸಂಸದ ಭಗವಂತ ಮಧ್ಯೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 14 ಮೇ 2017, 7:28 IST
Last Updated 14 ಮೇ 2017, 7:28 IST
ಬೀದರ್‌ನ ಜಿಲ್ಲಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು
ಬೀದರ್‌ನ ಜಿಲ್ಲಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು   

ಬೀದರ್‌: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರ ನಡುವೆ ನಡೆದ ಜಟಾಪಟಿ ಸಾರ್ವಜನಿಕರಿಗೆ ಮನರಂಜನೆ ನೀಡಿತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವಿದ್ಯಾಶ್ರೀ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ಆರಂಭಿಸಿದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದ ಸಂಸದ ಭಗವಂತ ಖೂಬಾ ವೇದಿಕೆಯ ಮೇಲೆ ಹೋಗದೆ ವೇದಿಕೆಯ ಮುಂದಿನ ಆಸನದಲ್ಲಿ ಕುಳಿತರು. ಖಂಡ್ರೆ ಹಾಗೂ ಶಾಸಕ ರಹೀಂ ಖಾನ್‌ ಮನವಿ ಮಾಡಿದರೂ ವೇದಿಕೆ ಮೇಲೆ ಹೋಗಲಿಲ್ಲ.

ಕೆಲ ಸಮಯದಲ್ಲೇ ಮೈಕ್‌ ಹಿಡಿದು ಮಾತನಾಡಲು ಆರಂಭಿಸಿದ ಭಗವಂತ ಖೂಬಾ, ‘ಮೂರು ವರ್ಷಗಳಿಂದ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣದ ಜಾಗ ಅಂತಿಮವಾಗಿಲ್ಲ. ಸಚಿವರು ಈವರೆಗೂ ಜನಾಭಿಪ್ರಾಯ ಪಡೆದಿಲ್ಲ. ಚುನಾಯಿತ ಪ್ರತಿನಿಧಿಗಳ ಸಭೆ ಕರೆದೂ ಚರ್ಚಿಸಿಲ್ಲ. ಜನರ ವಿರೋಧದ ನಡುವೆ ಬೀದರ್‌ ಹೊರವಲಯದಲ್ಲಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಹಳ್ಳಿಯ ಜನ ₹10 ಖರ್ಚು ಮಾಡಿ ನಗರಕ್ಕೆ ಬಂದರೆ, ₹100 ಖರ್ಚು ಮಾಡಿ ನಗರದ ಹೊರವಲಯದಲ್ಲಿ ನಿರ್ಮಾಣ ಆಗಲಿರುವ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣಕ್ಕೆ ಯಾವಾಗ ಜಾಗ ಅಂತಿಮಗೊಳಿಸುತ್ತೀರಿ ಈಗಲೇ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ತಕ್ಷಣ ಪ್ರತಿಕ್ರಿಯಿಸಿದ ಖಂಡ್ರೆ, ‘ಈಗಾಗಲೇ ಮೂರು ಕಡೆ ಜಾಗ ಪರಿಶೀಲಿಸಲಾಗಿದೆ. ಎರಡು ಜಾಗಗಳ ಬಗೆಗೆ ಗೊಂದಲ ಇದೆ. ಇನ್ನೊಂದು ಜಾಗ ಅಂತಿಮಗೊಳಿಸಲು ಕಾನೂನು ತೊಡಕು ಇದೆ. ಜಾಗ ಆಯ್ಕೆ ಮಾಡಲು ವಿಳಂಬವಾಗಿರುವುದು ನಿಜ. ಮೇ 15ರಂದು ಜನಪ್ರತಿನಿಧಿಗಳ ಸಭೆ ನಡೆಸಿ 15 ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಮಾತು ಮುಂದುವರಿಸಿ ಸಚಿವರು ಕಾಂಗ್ರೆಸ್‌ ಸರ್ಕಾರದ ಸಾಧನೆ ವಿವರಿಸಲು ಆರಂಭಿಸಿದಾಗ ಮಧ್ಯಪ್ರವೇಶಿಸಿದ ಭಗವಂತ ಖೂಬಾ ‘ನಾನು ಇಲ್ಲಿ ರಾಜಕೀಯ ಭಾಷಣ ಕೇಳಲು ಬಂದಿಲ್ಲ. ಜನರಿಗೆ ಸರಿಯಾದ ಮಾಹಿತಿ ಕೊಟ್ಟರೆ ಜಾಗ ಖಾಲಿ ಮಾಡುತ್ತೇನೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇದು ಸರ್ಕಾರದ ನಾಲ್ಕು ವರ್ಷಗಳ ಸಾಧನೆ ತಿಳಿಸುವ ಜನಮನ ಕಾರ್ಯಕ್ರಮವೇ ಹೊರತು, ಜನಸ್ಪಂದನ ಕಾರ್ಯಕ್ರಮ ಅಲ್ಲ. ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನನ್ನ ಖಾಸಗಿ ಸೊತ್ತಲ್ಲ. ಇಂತಹ ಪ್ರಶ್ನೆಗಳನ್ನು ಕೇಳಲು ಇದು ವೇದಿಕೆಯೂ ಅಲ್ಲ. ಜಾಗವೇ ಅಂತಿಮವಾಗದಿದ್ದರೂ 10 ಕಿ.ಮೀ ದೂರದಲ್ಲಿ ಜಾಗ ಗುರುತಿಸಲಾಗಿದೆ ಎಂದು ನಿಮಗೆ ಹೇಳಿದವರು ಯಾರು? ಪೂರ್ವಾಗ್ರಹಪೀಡಿತರಾಗಿ ಮಾತನಾಡುವುದು ಸರಿಯಲ್ಲ’ ಎಂದು ಖಂಡ್ರೆ ಹೇಳಿದರು.

‘ಏನಾಗಿದೆ ನಿಮಗೆ, ಜೋತಿಷ್ಯ ಕೇಳಿ ಇಲ್ಲಿಗೆ ಬಂದ್ರಾ? ಆವೇಶ ಭರಿತರಾಗಿ ಮಾತನಾಡುವುದು ಸರಿ ಅಲ್ಲ. ಎರಡು ದಿನಗಳ ಹಿಂದೆ ಕೆಡಿಪಿ ಸಭೆ ಕರೆಯಲಾಗಿತ್ತು. ಅಲ್ಲಿ ಇದೇ ಪ್ರಶ್ನೆ ಕೇಳಬಹುದಿತ್ತು. ಸಭೆಗೆ ಗೈರಾಗಿ ಸೂಕ್ತವಲ್ಲದ ವೇದಿಕೆಯಲ್ಲಿ ಪ್ರಶ್ನೆ ಮಾಡಿದರೆ ಹೇಗೆ. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲೇ ಕಟ್ಟಡ ನಿರ್ಮಾಣ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತನ್ನ ಹೆಸರನ್ನೇ ಉಲ್ಲೇಖಿಸಿ, ‘ನಿಮ್ಮ ಮನಸ್ಸು ನೋಯಿಸಲು ಇಲ್ಲಿಗೆ ಬಂದಿಲ್ಲ. ‘ಭಗವಂತ’ ನ ಮೇಲೆ ಒತ್ತಡ ಹೇರುವ ಶಕ್ತಿ ಯಾವ ದುಷ್ಟಶಕ್ತಿಗೂ ಇಲ್ಲ. ಜಿಲ್ಲೆಯ 14 ಲಕ್ಷ ಜನರ ಅನುಕೂಲ ಹಾಗೂ ಅನಾನುಕೂಲದ ಬಗೆಗೆ ತಿಳಿದುಕೊಳ್ಳುವುದು ನನ್ನ ಕರ್ತವ್ಯ. ಇದು ನನ್ನ ವೈಯಕ್ತಿಕ ವಿಷಯ ಅಲ್ಲ. ಮಾಮನಕೇರಿಯ ಬಳಿ ನನ್ನ ಜಮೀನು ಇಲ್ಲ. ಸಚಿವರು ಪ್ರಾಮಾಣಿಕವಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಹೇಳಿ ಸಾರ್ವಜನಿಕರತ್ತ ಕೈಮುಗಿಯುತ್ತ ಕಾರ್ಯಕ್ರಮದಿಂದ ಹೊರ ನಡೆದರು.

ರಂಗ ಮಂದಿರದಲ್ಲಿ ಸೇರಿದ್ದ ಜನರು ಖೂಬಾ ಮಾತನಾಡುವಾಗ ಚಪ್ಪಾಳೆ ತಟ್ಟಿದರು. ಸಚಿವ ಖಂಡ್ರೆ ಮಾತನಾಡುವಾಗಲೂ ಚಪ್ಪಾಳೆ ತಟ್ಟಿದರು. ಅಧಿಕಾರಿಗಳು ಇಬ್ಬರ ಸಂಭಾಷಣೆಗಳನ್ನೂ ಶಾಂತಚಿತ್ತರಾಗಿ ಆಲಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದ ಮೇಲೆ ‘ಜನಮನ’ ಬೆಳಕು

ಬೀದರ್‌: ‘ಸಾಲಬಾಧೆಯಿಂದಾಗಿ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡು ಮೂರು ವರ್ಷಗಳು ಆಗಿವೆ. ರಾಜ್ಯ ಸರ್ಕಾರ, ₹5 ಲಕ್ಷ ಪರಿಹಾರ ನೀಡಿದೆ. ಆದರೆ, ವಿಧವಾ ವೇತನ ಕೊಟ್ಟಿಲ್ಲ’ ಎಂದು ಭಾಲ್ಕಿ ತಾಲ್ಲೂಕಿನ ಕೌಶಲ್ಯ ದೂರಿದರು.

ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಿದ್ದ ಜನಮನ ಕಾರ್ಯಕ್ರಮದಲ್ಲಿ ತಮ್ಮ ಅಳಲು ತೋಡಿಕೊಂಡರು.

‘ನನಗೆ ಮೂರು ಮಕ್ಕಳು ಇದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಹಣ ಠೇವಣಿ ಇಟ್ಟಿದ್ದೇನೆ. ಕೊನೆಯ ಮಗ ಇನ್ನೂ ಚಿಕ್ಕವನಾಗಿದ್ದಾನೆ. ವಿಧವಾ ವೇತನ ಬರುತ್ತಿಲ್ಲ. ಕೃಷಿ ಮಾಡಲು ಜಮೀನು ಯೋಗ್ಯವಾಗಿಲ್ಲ. ಕೃಷಿ ಹೊಂಡ ನಿರ್ಮಿಸಿಕೊಡಲು ನೆರವು ಒದಗಿಸಬೇಕು’ ಎಂದು ಮನವಿ ಮಾಡಿದರು.

ತಕ್ಷಣ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ‘ರೈತ ಮಹಿಳೆಯ ಹಿಂದಿನ ಬಾಕಿ ಸಹಿತ ವಿಧವಾ ವೇತನ ಕೊಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಕೃಷಿ ಹೊಂಡ ನಿರ್ಮಾಣ ಮಾಡಲು ಅಗತ್ಯ ನೆರವು ಒದಗಿಸಬೇಕು’ ಎಂದು ಸೂಚನೆ ನೀಡಿದರು.

ವಿದ್ಯಾರ್ಥಿ ಯೋಜನೆಯ ಫಲಾನುಭವಿ ಶಿವಕುಮಾರ ಕಲ್ಯಾಣರಾವ್‌ ಮಾತನಾಡಿ, ‘ನಾವು ಬಹಳ ಬಡವರು. ರಾಜ್ಯ ಸರ್ಕಾರ ತಿಂಗಳಿಗೆ ₹1,500 ನೆರವು ಕೊಡುತ್ತಿರುವುದರಿಂದ ಅನುಕೂಲವಾಗಿದೆ. ಮೂರು ತಿಂಗಳಿಗೆ ಒಂದು ಬಾರಿ ಖಾತೆಗೆ ಹಣ ಜಮಾ ಮಾಡುತ್ತಿರುವುದರಿಂದ ತೊಂದರೆ ಆಗುತ್ತಿದೆ. ಪ್ರತಿ ತಿಂಗಳು ಹಣ ಜಮಾ ಮಾಡಬೇಕು’ ಎಂದು ಮನವಿ ಮಾಡಿದರು.

ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಮಾತನಾಡಿ, ‘ಜಿಲ್ಲೆಯಲ್ಲಿ 150 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. 50 ಜನರಿಗೆ ಮಾತ್ರ ಪ್ರಮಾಣಪತ್ರ ಕೊಡಲಾಗಿದೆ. ಇನ್ನುಳಿದವರಿಗೆ ಅಧಿಕಾರಿಗಳು ಪ್ರಮಾಣಪತ್ರ ಕೊಡುತ್ತಿಲ್ಲ’ ಎಂದು ದೂರಿದರು.

‘ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಅದಾಲತ್‌ ಏರ್ಪಡಿಸಿ ಪ್ರಮಾಣಪತ್ರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಖಂಡ್ರೆ ಸೂಚಿಸಿದರು. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕೊಡುವ ಸೈಕಲ್‌ಗಳ ಮಾಡೆಲ್‌ ಸರಿ ಇಲ್ಲ.

ವಿದ್ಯಾರ್ಥಿಗಳಿಗೆ ಒಳ್ಳೆಯ ಸೈಕಲ್‌ಗಳನ್ನು ವಿತರಿಸಬೇಕು ಎಂದು ವಿದ್ಯಾರ್ಥಿಯೊಬ್ಬ ಸಚಿವರಿಗೆ ಮನವಿ ಮಾಡಿದರು. ಸಚಿವರು ಮಾತನಾಡಿ, ‘₹6 ಲಕ್ಷದ ವರೆಗೂ ಸೈಕಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ಸರ್ಕಾರವು ತೆರಿಗೆ ಹಣದಲ್ಲಿ ಬಡವರಿಗೆ ಅನುಕೂಲ ಮಾಡಿಕೊಡಲು ಸೈಕಲ್‌ ಕೊಡುತ್ತಿದೆ. ಈಗಿರುವ ಸೈಕಲ್‌ಗಳನ್ನು ಸರಿಯಾಗಿ ಬಳಸಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್, ಜಿಲ್ಲಾ ಪಂಚಾಯಿತಿ ಸಿಇಒ ಆರ್.ಸೆಲ್ವಮಣಿ ಇದ್ದರು.

ಎರಡು ವರ್ಷಗಳ ನಂತರ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಿದರೂ ಚಿಂತೆ ಇಲ್ಲ. ಆದರೆ, ಯಾವ ಸ್ಥಳದಲ್ಲಿ ಕಟ್ಟಡ  ನಿರ್ಮಾಣ ಎಂಬುದು ಸ್ಪಷ್ಟವಾಗಬೇಕು.
ಭಗವಂತ ಖೂಬಾ
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.