ADVERTISEMENT

ಸಮಸ್ಯೆಗಳ ಸಂಕೋಲೆಯಲ್ಲಿ ಭೂಂಯಾರ್‌(ಕೆ)

ಮೂಲ ಸೌಕರ್ಯಗಳಿಂದ ವಂಚಿತವಾದ ಗ್ರಾಮ: ನೀರಿಗಾಗಿ ನಿತ್ಯವೂ ಅಲೆದಾಟ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 8:53 IST
Last Updated 14 ಫೆಬ್ರುವರಿ 2017, 8:53 IST
ಚಿಂಚೋಳಿ ತಾಲ್ಲೂಕಿನ ಭೂಂಯಾರ್‌(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿ
ಚಿಂಚೋಳಿ ತಾಲ್ಲೂಕಿನ ಭೂಂಯಾರ್‌(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿ   
ಚಿಂಚೋಳಿ: ತಾಲ್ಲೂಕಿನ ಗಡಿ ಗ್ರಾಮ ಭೂಂಯಾರ್‌(ಕೆ) ಗ್ರಾಮದಲ್ಲಿ ಎಲ್ಲ ಇದ್ದರೂ ಏನು ಇಲ್ಲದ ಸ್ಥಿತಿ ಇದೆ. ಒಳಚರಂಡಿ, ಕುಡಿಯುವ ನೀರು, ಸಾರಿಗೆ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾಮದಲ್ಲಿ ಹೆಜ್ಜೆಹೆಜ್ಜೆಗೂ ಕುಡಿಯುವ ನೀರಿನ ಕೊಳವೆ ಕಾಲಿಗೆ ತಾಕುತ್ತದೆ. ಆದರೆ ನೀರು ಬರುವುದೇ ಇಲ್ಲ. 
 
ಗ್ರಾಮದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕೊಳವೆ ಅಳವಡಿಸಲಾಗಿದೆ. ಗ್ರಾಮಕ್ಕೆ ಕಿರುನೀರು ಪೂರೈಕೆ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆ ಎರಡು ಸಂಪರ್ಕ ಇದ್ದರೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿಫಲವಾಗಿದೆ. ಇದರಿಂದ ಜನರಿಗೆ ಎಳ್ಳಷ್ಟು ನೆರವಾಗಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಶರಣಪ್ಪ ಬಿರಾದಾರ. 
 
ಚಂದನಕೇರಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶುದ್ಧೀಕರಿಸಿದ ನೀರು ಭೂಂಯಾರ್‌ ಗ್ರಾಮಕ್ಕೆ ಪೂರೈಸಲು ಕೊಳವೆ ಮಾರ್ಗ ಕಾಮಗಾರಿ ಮುಗಿದಿದೆ. ಗ್ರಾಮದ ಲ್ಲಿಯೂ ಕೊಳವೆ ಅಳವಡಿಸಿದ್ದಾರೆ. ಆದರೆ, ಜನರಿಗೆ ಅಗತ್ಯವಾದ ಕಡೆ ನಲ್ಲಿ ಕೂಡಿಸಿಲ್ಲ. ವಿಪರ್ಯಾಸ ಎಂದರೆ ಸದರಿ ಕೊಳವೆಯಲ್ಲಿ ತಿಂಗಳಲ್ಲಿ ಒಂದೆರಡು ಬಾರಿ ಮಾತ್ರ ನೀರು ಬರುತ್ತವೆ. ಇದರಿಂದ ಕೋಟ್ಯಂತರ ಖರ್ಚು ಮಾಡಿದರೂ ಜನರಿಗೆ ನೀರಿನ ಸಮಸ್ಯೆಯಿಂದ ಮುಕ್ತಿ ದೊರಕಿಲ್ಲ. ಆರಂಭದ ಬೇಸಿಗೆ ಕಳೆದು ಮಧ್ಯಕಾಲದ ಬೇಸಿಗೆ ಬಂದರೆ ಇಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತದೆ. ಆಗ ಜನ ಜಾನುವಾರು ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದೆ.  
 
600 ಮನೆಗಳಿರುವ ಭೂಂಯಾರ್‌(ಕೆ) ಗ್ರಾಮವು ಗ್ರಾ.ಪಂ. ಕೇಂದ್ರಸ್ಥಾನದಿಂದ 8 ಕಿ.ಮೀ ಅಂತರದಲ್ಲಿದೆ.  ಗ್ರಾಮದ ಹೊರ ವಲ ಯದಲ್ಲಿರುವ ಸಣ್ಣ ಕೆರೆ( ಗೋಕಟ್ಟಾ) 25 ಎಕರೆಗಿಂತಲೂ ವಿಸ್ತಾರವಾಗಿದ್ದು, ನವೀಕರಣಕ್ಕಾಗಿ ಕಾಯುತ್ತಿದೆ. ಕೆರೆಯಲ್ಲಿ ಹೂಳುತುಂಬಿದ್ದು ಹೂಳು ತೆಗೆದರೆ ಜಾನುವಾರುಗಳಿಗೆ ಅನುಕೂಲವಾಗುವ ಜತೆಗೆ ಅಂತರ್ಜಲ ವೃದ್ಧಿಗೂ ನೆರವಾಗು ತ್ತದೆ ಎನ್ನುತ್ತಾರೆ, ಗ್ರಾಮದ ಮುಖಂಡ ರಾದ ದೇವೇಂದ್ರಪ್ಪ ಡೊಂಗರಗಾಂವ್‌. 
 
ಖಾನಾಪುರದಿಂದ ಭೂಂಯಾ ರ್‌(ಕೆ) ವರೆಗೆ ರಸ್ತೆ ಕೆಟ್ಟು ಹೋಗಿದ್ದು, ಕಲಬುರ್ಗಿಯಿಂದ ಐನಾಪುರ ವಾಯಾ ಭೂಂಯಾರ (ಕೆ) ಮಾರ್ಗವಾಗಿ ಸಾರಿಗೆ ಸೌಲಭ್ಯ ಬೇಕು. ಗ್ರಾಮದಲ್ಲಿ ಬಹುತೇಕ ಕಡೆಗಳಲ್ಲಿ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾ ಗಿದೆ ಆದರೆ ಚರಂಡಿ ಸಮರ್ಪಕವಾಗಿಲ್ಲ. ಇರುವ ಚರಂಡಿ ಯಲ್ಲೂ ಕಲ್ಲು ಮಣ್ಣು ತುಂಬಿದ್ದು ಮನೆಗಳ ಬಚ್ಚಲು ನೀರು ರಸ್ತೆ ಮೇಲೆ ಹರಿಯುವುದು ಮಾಮೂಲಾಗಿದೆ. ನಾವು ಸಮಸ್ಯೆಗಳ ಬಗ್ಗೆ ಗ್ರಾ.ಪಂ. ಸದಸ್ಯರಿಗೆ ತಿಳಿಸಿದರೆ ಅವರು ಸ್ಪಂದಿಸುತ್ತಿಲ್ಲ. ನಿತ್ಯ ರಚ್ಚೆ ನೀರಲ್ಲಿಯೇ ಓಡಾಡುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯ ನಿವಾಸಿಗಳಾದ ಮಹಾದೇವಿ ಬಿರಾದಾರ ಮತ್ತು ಜಗದೇವಿ ಉಮೇಶ ತಿಳಿಸಿದರು.
 
ಗ್ರಾಮದ ಉತ್ತರ ದಿಕ್ಕಿನಲ್ಲಿ ಎತ್ತರದ ಗುಡ್ಡದ ಮೇಲೆ ಸರ್ಕಾರಿ ಹಿರಿಯ ಪ್ರಾಥ ಮಿಕ ಹಾಗೂ ಪ್ರೌಢಶಾಲೆ ಪೂರ್ವಾಭಿ ಮುಖವಾಗಿವೆ. ಇದಕ್ಕೆ ಹೋಗಲು ಸೂಕ್ತ ರಸ್ತೆಯಿಲ್ಲ. ಗುಡ್ಡವನ್ನು ಹತ್ತಲು ಹಾಗೂ ಇಳಿಯಲು ಮಕ್ಕಳು ನಿತ್ಯ ಸಾಹಸ ಮಾಡುವಂತಿದೆ.
 
ಬೈಸಿಕಲ್‌ ಗುಡ್ಡದ ಮೇಲೆ ಹೋಗು ವುದಿಲ್ಲ. ಅವುಗಳನ್ನು ತೆಗೆದುಕೊಂಡು ಹೋಗಬೇಕಾದರೆ ಇಳಿದು ತಳ್ಳಿಕೊಂಡು ಸಾಗಬೇಕು. ಬೈಕ್‌ ಗುಡ್ಡ ಹತ್ತುತ್ತೇವೆ. ಆದರೆ, ಸ್ವಲ್ಪ ಯಾಮಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜತೆಗೆ ಸರ್ಕಾರಿ ಪ್ರೌಢಶಾಲೆಗೆ ಆವರಣ ಗೋಡೆಯಿಲ್ಲ. ಗ್ರಾಮದ ಜನರಿ ಶಾಲೆಯ ಅಕ್ಕಪಕ್ಕದಲ್ಲಿ ತಿಪ್ಪೆಗಳನ್ನು ಹಾಕಿಕೊಂಡು ಶಾಲೆಯ ಜಾಗ ಅತಿಕ್ರಮಣ ಮಾಡುತ್ತಿದ್ದಾರೆ. ಶಿಕ್ಷಕರು, ಮಕ್ಕಳು ನೆಟ್ಟ ಗಿಡಗಳನ್ನು ಕಡಿದು ತಿಪ್ಪೆ ಹಾಕುತ್ತಿದ್ದಾರೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 
 
ಶಾಲೆಗೆ ಹೋಗುವ ರಸ್ತೆ ನಿರ್ಮಾಣ ಅತಿ ಅಗತ್ಯವಾಗಿದೆ. ಸರ್ಕಾರ ಶಾಲೆಗೆ ಕಟ್ಟಡ ನಿರ್ಮಿಸಿದೆ ಆದರೆ ರಸ್ತೆ ನಿರ್ಮಿಸದೆ ಹೋದರೆ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುವಂತಿದೆ. ಹೀಗಾಗಿ ಅಂಬೇಡ್ಕರ್‌ ವೃತ್ತದಿಂದ ಉಭಯ ಶಾಲೆಗಳಿಗೆ ಹೋಗಲು ಸಮರ್ಪಕ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ ನಿರ್ಮಿಸಬೇಕಾಗಿದೆ.
 
ಚಂದನಕೇರಾ ಬಹುಗ್ರಾಮ ಕುಡಿವ ನೀರಿನ ಯೋಜನೆಯಿಂದ ಭೂಂಯಾರ್‌(ಕೆ) ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಆದರೆ, ಗ್ರಾಮದಲ್ಲಿ 200 ಮೀಟರ್‌ ಕೊಳವೆ ಅಳವಡಿ ಸುವುದು ಬಾಕಿ ಇದೆ. ಎಲ್ಲಿ ತೊಂದರೆ ಇದೆಯೋ ಅದನ್ನು ಗುರುತಿಸಿ ಪರಿಹ ರಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನು ತ್ತಾರೆ, ಗ್ರಾಮೀಣ ನೀರು ಪೂರೈಕೆ ಯೋಜನೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ ಶಿವಾಜಿ ಡೋಣೆ. 
–ಜಗನ್ನಾಥ ಡಿ. ಶೇರಿಕಾರ
 
* ಕುಡಿಯುವ ನೀರು, ಒಳಚರಂಡಿ ಹಾಗೂ ಸಾರಿಗೆ ಸೌಲಭ್ಯ ಮತ್ತು ಮಹಿಳೆಯರಿಗೆ ಶೌಚಾಲಯ ನಿರ್ಮಾಣ ಆಗಬೇಕು. ಆಗಮಾತ್ರ ಗ್ರಾಮದಲ್ಲಿ ಬದಲಾವಣೆ ಗೋಚರವಾಗಲಿದೆ.
ದೇವೇಂದ್ರಪ್ಪ ಡೊಂಗರಗಾಂವ್‌, ಹಿರಿಯ ಮುಖಂಡ
 
* ಊರಿನ ತುಂಬಾ ಬೇಕಾ ಬಿಟ್ಟಿಯಾಗಿ ಕೊಳವೆಗಳ ಅಳವಡಿಸಿದ್ದಾರೆ. ಆದರೆ, ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.
ಶರಣಪ್ಪ ಬಿರಾದಾರ, ಗ್ರಾಮದ ನಿವಾಸಿ
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.