ADVERTISEMENT

‘ಸಮಾನತೆ ತತ್ವ ಪ್ರತಿಪಾದಿಸಿದ ಶರಣರು’

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 9:14 IST
Last Updated 24 ಜನವರಿ 2017, 9:14 IST
‘ಸಮಾನತೆ ತತ್ವ ಪ್ರತಿಪಾದಿಸಿದ ಶರಣರು’
‘ಸಮಾನತೆ ತತ್ವ ಪ್ರತಿಪಾದಿಸಿದ ಶರಣರು’   

ಜನವಾಡ:  ‘ಜಾತಿ, ವರ್ಗ, ಲಿಂಗ ಭೇದ ಹೋಗಲಾಡಿಸಲು ಶ್ರಮಿಸಿದ್ದ ಶರಣರು ಸಮಾನತೆಯ ತತ್ವವನ್ನು ಪ್ರತಿಪಾದಿಸಿದ್ದರು’ ಎಂದು ಶಾಸಕ ಅಶೋಕ ಖೇಣಿ ಹೇಳಿದರು.

ಬೀದರ್ ತಾಲ್ಲೂಕಿನ ಕಪಲಾಪುರ (ಎ) ಗ್ರಾಮದಲ್ಲಿ ಶರಣ ತತ್ವ ಪ್ರಸಾರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಕ ಮಹಾದೇವಿ ಅವರ ಮೂರ್ತಿ ಹಾಗೂ ಡಾ. ಚನ್ನಬಸವ ಪಟ್ಟದ್ದೇವರ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು. ‘ಅಕ್ಕನ ವಚನಗಳು ಇಂದಿನ ಸಮಾಜಕ್ಕೆ ಹೆಚ್ಚು ಅವಶ್ಯಕವಾಗಿವೆ. ನಾವೆಲ್ಲರು ಅವರ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ರೈತರು ದೇಶದ ಬೆನ್ನೆಲುಬು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರಸ್ತುತ ಯಾರೊಬ್ಬರೂ ರೈತರ ಬಗೆಗೆ ಚಿಂತಿಸುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಬೆವರು ಸುರಿಸಿ ಬೆಳೆದ ಕಡಲೆ, ತೊಗರಿ ಬೆಳೆಯ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ನಿರಾಕಾರ ಪರಮಾತ್ಮನನ್ನು ಸಾಕಾರಗೊಳಿಸಿದ ಕೀರ್ತಿ ಅಕ್ಕಮಹಾದೇವಿ ಅವರಿಗೆ ಸಲ್ಲುತ್ತದೆ ಎಂದು ಸಮ್ಮುಖ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಹೇಳಿದರು.

ಬಸವಣ್ಣನವರಿಂದಾಗಿ ಕಲ್ಯಾಣಕ್ಕೆ ಬಂದ ಅಕ್ಕ ಬಹುದೊಡ್ಡ ಪರಿವರ್ತನೆ ಮಾಡಿದ್ದರು. ಅಕ್ಕನ ಆದರ್ಶ ವ್ಯಕ್ತಿತ್ವಕ್ಕೆ ಅವರ ವಚನಗಳೇ ಸಾಕ್ಷಿ ಎಂದು ತಿಳಿಸಿದರು. ರೈತರು ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ ಸಮಚಿತ್ತದ ಜೀವನ ನಡೆಸಬೇಕು ಎಂದು ಸಸಿಗೆ ನೀರೆರೆಯುವ ಮೂಲಕ ‘ರೈತರ ನಡೆ ಆತ್ಮಸ್ಥೈರ್ಯದ ಕಡೆ ಗೋಷ್ಠಿಯನ್ನು ಉದ್ಘಾಟಿಸಿದ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಎಂತಹುದೇ ಸಂದರ್ಭ ಎದುರಾದರೂ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಹೋರಾಟ ನಡೆಸಿ ಯಶ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬಸವತತ್ವ ಪ್ರಚಾರಕ ಸಿದ್ರಾಮಪ್ಪ ಕಪಲಾಪುರ ಮಾತನಾಡಿದರು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಆದಿನಾಥ ಹೀರಾ, ಕಂಟೆಪ್ಪ ಸಾವಳಗಿ ದಂಪತಿಯನ್ನು ಸನ್ಮಾನಿಸಲಾಯಿತು. ಕಪಲಾಪುರ, ಅತಿವಾಳ, ಆಣದೂರು, ಬಕ್ಕಚೌಡಿ, ಬೀದರ್, ನೌಬಾದ್, ಚೊಂಡಿ, ಚೌಳಿಯ 51 ಆದರ್ಶ ದಂಪತಿಗಳನ್ನು ಗೌರವಿಸಲಾಯಿತು.

ಬಸವ ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಾಗಭೂಷಣ ಕಮಠಾಣೆ, ಶಕುಂತಲಾ ವಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ಬಿರಾದಾರ, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಹಣಮಂತರಾವ್ ಬಿರಾದಾರ ಉಪಸ್ಥಿತರಿದ್ದರು.

ಯುವ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಹಣಮಂತರಾವ್ ಮೈಲಾರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.