ADVERTISEMENT

ಸುಲ್ತಾನಬಾದವಾಡಿಯಲ್ಲಿ ಸಮಸ್ಯೆಗಳ ಸರಿಮಳೆ

ಶಶಿಕಾಂತ ಭಗೋಜಿ
Published 24 ಜನವರಿ 2017, 9:15 IST
Last Updated 24 ಜನವರಿ 2017, 9:15 IST
ಸುಲ್ತಾನಬಾದವಾಡಿಯಲ್ಲಿ ಸಮಸ್ಯೆಗಳ ಸರಿಮಳೆ
ಸುಲ್ತಾನಬಾದವಾಡಿಯಲ್ಲಿ ಸಮಸ್ಯೆಗಳ ಸರಿಮಳೆ   

ಹುಮನಾಬಾದ್: ನಿತ್ಯ ನೂರಾರು ಪ್ರವಾಸಿಗರು, ಕೃಷಿಕರು,  ಸಂಚರಿಸುವ ಇತಿಹಾಸ ಹಿನ್ನೆಲೆಯುಳ್ಳ ಸುಲ್ತಾನಬಾದವಾಡಿ ಮೂಲಸೌಕರ್ಯದ ಸಮಸ್ಯೆಯನ್ನು ಎದುರಿಸುತ್ತಿದೆ. ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಗ್ರಾಮ ಪಂಚಾಯಿತಿ ಧೋರಣೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಸುಲ್ತಾನಬಾದವಾಡಿ ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು. ಕುಮಾಚಿಂಚೋಳಿ, ಮುಗನೂರ  ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆಗಳಿದ್ದರೂ ಚರಂಡಿ ಸೌಲಭ್ಯವಿಲ್ಲ. ಇರುವ ಒಂದೆರಡು ಚರಂಡಿಗಳಿದ್ದರೂ ಅವುಗಳ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಅವಶ್ಯವಿರುವ ಆಸ್ಪತ್ರೆ ಮತ್ತು ಪಶುಚಿಕಿತ್ಸಾಲಯ ಸೌಲಭ್ಯವಿಲ್ಲದೇ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ.

250ಕ್ಕೂ ಮಕ್ಕಳ ದಾಖಲಾತಿ ಹೊಂದಿರುವ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬಿದ್ದಿದೆ. ಅಲ್ಲದೇ ಅಗತ್ಯ ಬಸ್‌ ಸೌಲಭ್ಯವಿಲ್ಲದ ಕಾರಣ ಹುಮನಾಬಾದ್‌ – ಭಾಲ್ಕಿ ಪಟ್ಟಣಗಳಿಗೆ ತೆರಳುವ ಕಾಲೇಜು ಓದಲು ಹೋಗುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

‘ಸುಲ್ತಾನಬಾದವಾಡಿ ಹಾಗೂ ಖಟಕಚಿಂಚೋಳಿ ಕ್ರಾಸ್‌ ಬಳಿ ಬಸ್ ನಿಲ್ದಾಣ ನಿರ್ಮಿಸಬೇಕು.  ಖಟಕಚಿಂಚೋಳಿ  ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಕಾಲೇಜು ವಿದ್ಯಾರ್ಥಿ ಪೂಜಾ  ಅಳಲು ತೋಡಿಕೊಂಡರು. 

ಗ್ರಾಮ ಪಂಚಾಯಿತಿ ವತಿಯಿಂದ ಇಂದಿರಾ ಆವಾಸ ಯೋಜನೆಯ ಅಡಿ ಬಂದ 43 ಮನೆಗಳ ಅರ್ಹರ ಪಟ್ಟಿ ಕಳಿಸಿದರೂ ರದ್ದಾಗಿವೆ. ಅಧಿಕಾರಿಗಳು ಅದನ್ನು ಗಂಭೀರ ಪರಿಗಣಿಸಿ, ರದ್ದಾದ ಮನೆಗಳನ್ನುಕೊಡಿಸಬೇಕು.

ಗ್ರಾಮದಲ್ಲಿ 50ಕ್ಕೂ ಅಧಿಕ ಮಂದಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೂ ಫಲಾನುಭವಿಗಳಿಗೆ ಈವರೆಗೂ ಚೆಕ್‌ ವಿತರಿಸಿಲ್ಲ. ಉದ್ಯೋಗ ಖಾತರಿ ಕಾರ್ಮಿಕರಿಗೂ ಕೂಲಿ ಪಾವತಿಸಿಲ್ಲ. ಇದರಿಂದ ನಿತ್ಯ ಕೆಲಸಗಳಿಗೆ ತೊಂದರೆ ಆಗುತ್ತಿದೆ. ಪಂಚಾಯಿತಿಗೆ ಕಾಯಂ ಪಿಡಿಒ ನೇಮಿಸುವಂತೆ  ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮದ ಬಸಯ್ಯಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.