ADVERTISEMENT

ಸ್ಮಾರಕದ ದ್ವಾರದಲ್ಲಿ ಗಟಾರ ನಿರ್ಮಾಣ ಕಾರ್ಯಕ್ಕೆ ತಡೆ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 25 ಮೇ 2017, 6:41 IST
Last Updated 25 ಮೇ 2017, 6:41 IST
ಬೀದರ್‌ನ ದುಲ್ಹನ್‌ ದರ್ವಾಜಾದಲ್ಲಿ ನಿರ್ಮಿಸಲಾಗುತ್ತಿದ್ದ ಗಟಾರ ಕಾಮಗಾರಿಯನ್ನು ಪರಿಶೀಲಿಸಿದ ನಗರಸಭೆ ಆಯುಕ್ತ ನರಸಿಂಹಮೂರ್ತಿ
ಬೀದರ್‌ನ ದುಲ್ಹನ್‌ ದರ್ವಾಜಾದಲ್ಲಿ ನಿರ್ಮಿಸಲಾಗುತ್ತಿದ್ದ ಗಟಾರ ಕಾಮಗಾರಿಯನ್ನು ಪರಿಶೀಲಿಸಿದ ನಗರಸಭೆ ಆಯುಕ್ತ ನರಸಿಂಹಮೂರ್ತಿ   

ಬೀದರ್‌: ನಗರದ ದುಲ್ಹನ್‌ ದರ್ವಾಜಾದ ಬಳಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ನಿರ್ಮಿಸಲಾಗುತ್ತಿದ್ದ ಗಟಾರ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

‘ಪ್ರಜಾವಾಣಿ’ಯಲ್ಲಿ  ಬುಧವಾರ ‘ಸ್ಮಾರಕದ ದ್ವಾರದಲ್ಲೇ ಗಟಾರ ನಿರ್ಮಾಣ’ಶೀರ್ಷಿಕೆ ಅಡಿಯಲ್ಲಿ ಪ್ರಕಟವಾದ ಸುದ್ದಿಗೆ ಸ್ಪಂದಿಸಿ ಜಿಲ್ಲಾಧಿಕಾರಿಯವರು ನಗರಸಭೆಯ ಆಯುಕ್ತ ನರಸಿಂಹಮೂರ್ತಿ ಅವರನ್ನು ಸ್ಥಳಕ್ಕೆ ಕಳಿಸಿ ವಿವರವಾದ ಮಾಹಿತಿ ತರಿಸಿಕೊಂಡಿದ್ದಾರೆ. ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವುದು ಮನವರಿಕೆಯಾದ ಮೇಲೆ ಗಟಾರ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಆದೇಶ ನೀಡಿದ್ದಾರೆ.

ದುಲ್ಹನ್‌ ದರ್ವಾಜಾದ ಬಳಿ ರಸ್ತೆ ಮೇಲೆಯೇ ನೀರು ಹರಿಯುತ್ತಿದೆ. ನೀರು ಸರಾಗವಾಗಿ ಹರಿದು ಹೋಗುವಂತೆ ವೈಜ್ಞಾನಿಕವಾಗಿ ಗಟಾರ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ತಿಳಿಸಿದ್ದಾರೆ.

ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕಾಮಗಾರಿಗಳ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ತಕ್ಷಣ ಲೋಪವೆಸಗಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.