ADVERTISEMENT

ಸ್ವಚ್ಛತೆಗೆ ಮಹಿಳೆಯರು ಕೈಜೋಡಿಸಿ

ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಸಂಸದ ಭಗವಂತ ಖೂಬಾ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 6:22 IST
Last Updated 9 ಮಾರ್ಚ್ 2017, 6:22 IST
ಸ್ವಚ್ಛತೆಗೆ ಮಹಿಳೆಯರು ಕೈಜೋಡಿಸಿ
ಸ್ವಚ್ಛತೆಗೆ ಮಹಿಳೆಯರು ಕೈಜೋಡಿಸಿ   
ಬೀದರ್: ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ಮಹಿಳೆಯರು ಕೈಜೋಡಿಸಬೇಕು ಎಂದು ಸಂಸದ ಭಗವಂತ ಖೂಬಾ ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ ಹಾಗೂ ಸ್ವಚ್ಛ ಭಾರತ ಮಿಷನ್‌ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಸ್ವಚ್ಛ ಶಕ್ತಿ ಸಪ್ತಾಹ’ ಶೀರ್ಷಿಕೆಯಡಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಿಸುವ ದಿಸೆಯಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕಿದೆ. ಸ್ವಚ್ಛತಾ ಕಾರ್ಯ ಮಹಿಳೆಯರಿಂದ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಬಾರಿ ಮಹಿಳಾ ದಿನವನ್ನು ‘ಸ್ವಚ್ಛ ಶಕ್ತಿ ಸಪ್ತಾಹ’ ಶೀರ್ಷಿಕೆಯಡಿ ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ತಿಳಿಸಿದರು.
 
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ 40 ಸಾವಿರ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ, 17 ಸಾವಿರ ಶೌಚಾಲಯಗಳನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸದ ಕಾರಣ ನಿಗದಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಮನೆ ಮನೆಗೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರ ಸಹಾಯಧನ ಒದಗಿಸುತ್ತಿದೆ. ಆದರೆ ಪಿಡಿಒಗಳು ಗ್ರಾಮಸ್ಥರಿಗೆ ಈ ಬಗ್ಗೆ ಸರಿಯಾಗಿ ತಿಳಿವಳಿಕೆ ನೀಡುತ್ತಿಲ್ಲ. ಶೌಚಾಲಯ ನಿರ್ಮಿಸಿಕೊಂಡವರಿಗೆ ಎರಡು ಅಥವಾ ಮೂರು ದಿನಗಳಲ್ಲಿ ಸಹಾಯಧನ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದರು.
 
ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಅಧಿಕಾರಿಗಳು ಅವುಗಳನ್ನು ಅರ್ಹರಿಗೆ ತಲುಪಿಸುವ ಮೂಲಕ  ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಪ್ರಗತಿಗೆ ನೆರವಾಗಬೇಕು ಎಂದರು.
 
ರಾಜ್ಯದ ನಾಲ್ಕು ಜಿಲ್ಲೆಗಳನ್ನು ಈಗಾಗಲೇ ಬಯಲು ಶೌಚಮುಕ್ತ ಜಿಲ್ಲೆಗಳನ್ನಾಗಿ ಘೋಷಣೆ ಮಾಡಲಾಗಿದೆ. ಬೀದರ್‌ ಜಿಲ್ಲೆಯನ್ನೂ  ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್‌. ಸೆಲ್ವಮಣಿ ತಿಳಿಸಿದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀತಲ್ ಚವ್ಹಾಣ್‌ ಉಪಸ್ಥಿತರಿದ್ದರು. ಔರಾದ್‌ ತಾಲ್ಲೂಕಿನ ಚಾಂದೋರಿ ಗ್ರಾಮ ಪಂಚಾಯಿತಿಯನ್ನು ಬಯಲು ಶೌಚಮುಕ್ತ ಗ್ರಾಮ ಪಂಚಾಯಿತಿಯಾಗಿ ಮಾಡಿದ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಶೀಲ ಅನುಭವ ಹಂಚಿಕೊಂಡರು.
 
ಕೌಠಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುವರ್ಣಾ ಪಾಟೀಲ, ಮಳಚಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಸುಬ್ಬಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯಿತ್ರಿದೇವಿ ಹೊಸಮನಿ, ಪರ್ತಾಪುರದ ಮೀನಾಬಾಯಿ, ಜನಾಬಾಯಿ ತಿಪ್ಪಣ್ಣ, ನಿಟ್ಟೂರಿನ ಅನುಸೂಯಾ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಸ್ವಚ್ಛ ಭಾರತ ಮಿಷನ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಗೌತಮ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. 
 
* ಗ್ರಾಮೀಣ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಬೇಕು. ನೈರ್ಮಲ್ಯ ಜಾಗೃತಿಯನ್ನು ತೀವ್ರಗೊಳಿಸಬೇಕು.
-ಭಗವಂತ ಖೂಬಾ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.