ADVERTISEMENT

ಹದಗೆಟ್ಟ ಬೀದರ್– ಔರಾದ್ ರಸ್ತೆ

ನ್ಯಾಯಾಧೀಶರ ಮಾತಿಗೂ ಸಿಗದ ಅಧಿಕಾರಿಗಳ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2016, 8:22 IST
Last Updated 15 ಡಿಸೆಂಬರ್ 2016, 8:22 IST

ಔರಾದ್: ಬೀದರ್– ಔರಾದ್ ನಡುವಿನ ರಾಜ್ಯ ಹೆದ್ದಾರಿ ಗುಂಡಿ ಮುಚ್ಚುವ ಕಾಮಗಾರಿ ವಿಳಂಬದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆರು ತಿಂಗಳಿನಿಂದ ಈ ರಸ್ತೆ ಹಾಳಾದರೂ ಸಂಬಂಧಿತರು ಗಂಭೀರ­ವಾಗಿ ಪರಿಗಣಿಸಿಲ್ಲ. ಇದು ಜನರನ್ನು ಕೆರಳಿಸಿದೆ. ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಆದರೆ ಸಂಬಂಧಪಟ್ಟವರು ಮೌನ ವಹಿಸಿದ್ದಾರೆ.

ಈಚೆಗೆ ಔರಾದ್ ಉಪಕಾರಾಗೃಹಕ್ಕೆ ಭೇಟಿ ನೀಡಿದ ಜಿಲ್ಲಾ ನ್ಯಾಯಾಧೀಶ ಸಂಜುಕುಮಾರ ಹಂಚಾಟೆ ಅವರು, ಇಂತಹ ಕೆಟ್ಟ ರಸ್ತೆ ಮೇಲೆ ಜನ ಹೇಗೆ ಓಡಾಡುತ್ತಾರೆ. ಜನರಲ್ಲಿ ಎಲ್ಲಿಯ ತನಕ ಸಹಿಸಿಕೊಳ್ಳುವ ಪ್ರವೃತ್ತಿ ಇರುತ್ತದೊ ಪರಿಸ್ಥಿತಿ ಹೀಗೆ ಮುಂದುವರಿಯುತ್ತದೆ. ಕಾನೂನು ಸೇವಾ ಪ್ರಾಧಿಕಾರ ಕೂಡ ಜನರ ಸಮಸ್ಯೆ ಪರಿಹರಿಸಲು ಸರ್ಕಾರದ ಗಮನ ಸೆಳೆಯುತ್ತಿದೆ. ಆದರೂ ಪರಿಣಾಮಕಾರಿ ಕೆಲಸ ಆಗುತ್ತಿಲ್ಲ ಎಂದು ಅವರು ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಾಳಾದ ರಸ್ತೆ ವಿಷಯದಲ್ಲಿ ಯಾರಾದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಸಂಬಂಧಿತರು ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ರಸ್ತೆ ಹಾಳಾಗಿರುವುದರಿಂದ ಬೀದರ್– ಔರಾದ್ ನಡುವಿನ ಪ್ರಯಾಣ 1 ಗಂಟೆ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸಂಕಟದಲ್ಲಿದ್ದಾರೆ.

‘ಎರಡು ತಿಂಗಳಿನಿಂದ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದ್ದರೂ ಇನ್ನೂ ಪೂರ್ಣ ಆಗಿಲ್ಲ. ಬೀದರ್ ಮತ್ತು ಔರಾದ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧೆಡೆ ದೊಡ್ಡ ದೊಡ್ಡ ಗುಂಡಿ­ಗಳು ಬಿದ್ದು ಪ್ರಯಾಣಿಕರು ನರಕ­ಯಾತನೆ ಅನುಭವಿಸಬೇಕಾಗಿದೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಾಳಜಿ ಇಲ್ಲವಾಗಿದೆ ಎಂದು ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ದೂರಿದ್ದಾರೆ.

ಈಚೆಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಪ್ರಭು ಚವಾಣ್ ಅವರು ಈ ಹದಗೆಟ್ಟ ರಸ್ತೆ ಪ್ರಸ್ತಾಪಿಸಿದಾಗ, ಕೇಂದ್ರ ಸರ್ಕಾರ ಈ ರಸ್ತೆ ಮೇಲ್ದರ್ಜೇಗೇರಿಸಲು ಅನುಮೋದನೆ ನೀಡಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವರು ಉತ್ತರ ನೀಡಿದ್ದರು. ಕೇಂದ್ರ ಸರ್ಕಾರ ಅನುದಾನ ನೀಡಿ ದೊಡ್ಡ ರಸ್ತೆ ಆಗುವ ತನಕ ಜನ ಹೀಗೆ ನಿತ್ಯ ನರಕಯಾತನೆ ಅನುಭವಿಸಬೇಕೇ ಎಂದು ಶಾಸಕರು ಪ್ರಶ್ನಿಸಿದರು.

ರಾಜ್ಯದ ಎಲ್ಲ ಪ್ರಮುಖ ರಸ್ತೆ ದುರಸ್ತಿ ಮಾಡಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಆದರೂ ದುರಸ್ತಿ ಕಾರ್ಯ ವಿಳಂಬವಾಗುವುದನ್ನು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.