ADVERTISEMENT

‘ಹಿಂದುಳಿದವರ ಪ್ರಗತಿಗೆ ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:32 IST
Last Updated 22 ಮೇ 2017, 6:32 IST

ಚಿಟಗುಪ್ಪ: ‘ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರ ಸಮಗ್ರ ಪ್ರಗತಿಗಾಗಿ ಎಲ್ಲರೂ ನಿರಂತರವಾಗಿ ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್ ಹೇಳಿದರು.

ಇಲ್ಲಿನ ಬೋರಾಳ ಗ್ರಾಮದಲ್ಲಿ ನಮ್ರತಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ಮಿಸುತ್ತಿರುವ 300 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಕಾರ್ಯ ಕೈಗೊಂಡಿರುವ ಡಾ. ಪಾಂಡುರಂಗ್ ಕಿರಣ ಅವರ ಮಹತ್ವದ ಕಾರ್ಯ ಸಮಾಜಕ್ಕೆ ಮಾದರಿ ಆಗಿದೆ’ ಎಂದು ನುಡಿದರು.

ADVERTISEMENT

ಆರ್‌ಬಿಐ ನಿದೇರ್ಶಕ ಡಾ.ಪಾಂಡುರಂಗ್ ಕಿರಣ ಮಾತನಾಡಿ, ‘ಗ್ರಾಮೀಣ ಭಾಗದ ನಾಗರಿಕರಿಗೆ ಗಂಭೀರ ಸ್ವರೂಪದ ಕಾಯಿಲೆಗಳು ಬಂದಾಗ ಮಹಾರಾಷ್ಟ್ರದ ಉಮರ್ಗಾ, ಸೊಲ್ಲಾಪುರ, ತೆಲಂಗಾಣದ ಹೈದರಾಬಾದ್ ನಗರಗಳಿಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಕಷ್ಟವಾಗುತ್ತಿದ್ದು, ಹೀಗಾಗಿ ಎಲ್ಲರಿಗೂ ಅನುಕೂಲ ಆಗುವಂತೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕಡಿಮೆ ಹಣದಲ್ಲಿ ಉತ್ತಮ ಚಿಕಿತ್ಸೆ ಕಲ್ಪಿಸುವ ಮೂಲ ಉದ್ದೇಶದಿಂದ ಈ ಆಸ್ಪತ್ರೆಯ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.

ಗ್ರಾಮೀಣ ಭಾಗದ ನಾಗರಿಕರ ಚಿಕಿತ್ಸೆಗೆ  ಆಸ್ಪತ್ರೆ  ನಿರ್ಮಾಣವಾದ ನಂತರ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸರ್ಕಾರದ ಎಲ್ಲ ಯೋಜನೆಗಳು ಸದ್ಬಳಕೆ ಮಾಡಿಕೊಂಡು ನಾಗರಿಕರಿಗೆ ಅವುಗಳ ಸೌಲಭ್ಯ ಪ್ರಮಾಣಿಕವಾಗಿ ಕಲ್ಪಿಸುವ ಕೆಲಸ ಮಾಡಲಾಗುತ್ತದೆ’ ಎಂದು ಹೇಳಿದರು.

ಬೆಂಗಳೂರಿನ ಡಾ. ಎಸ್.ಎಂ.ಜಂಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ನಮ್ರತಾ ಕಿರಣ, ಗೌರವಾಧ್ಯಕ್ಷ ತಿಪ್ಪಣ್ಣ ಕಿರಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಪಾವತಿ ಕಾಂಬ್ಳೆ, ಪಿಡಿಒ ವಿಜಯಕುಮಾರ್, ಗಣ್ಯರಾದ ತಾಜೋದ್ದೀನ್, ಪ್ರಾಚಾರ್ಯ ಆನಂದ ಕುಮಾರ್, ಆಡಳಿತಾಧಿಕಾರಿ ಎಸ್.ಎನ್.ಮೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.