ADVERTISEMENT

ಹುಲಸೂರ ರಸ್ತೆ ಸುಧಾರಣೆಗೆ ಆಗ್ರಹ

ಬಸವಕಲ್ಯಾಣದಲ್ಲಿ ಬಿಜೆಪಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 9:22 IST
Last Updated 26 ಮೇ 2018, 9:22 IST

ಬಸವಕಲ್ಯಾಣ: ಬಸವಕಲ್ಯಾಣ– ಹುಲಸೂರ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಶುಕ್ರವಾರ ಇಲ್ಲಿನ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಾಂತಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ ಮಾತನಾಡಿ, `ಹುಲಸೂರನ್ನು ನೂತನ ತಾಲ್ಲೂಕು ಕೇಂದ್ರವಾಗಿ ಮಾಡಿದ್ದರೂ ಅಲ್ಲಿಗೆ ಹೋಗುವ ರಸ್ತೆಗಳ ಸುಧಾರಣೆ ಆಗಿಲ್ಲ. ಬಸವಕಲ್ಯಾಣದಿಂದ ಅಲ್ಲಿವರೆಗೆ ಇರುವ 20 ಕಿ.ಮೀ ರಸ್ತೆಯಲ್ಲಿ ಕೆಲ ಸ್ಥಳಗಳಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಡಾಂಬರು ಹಾಳಾಗಿ ಜಲ್ಲಿಕಲ್ಲುಗಳು ಹರಡಿವೆ. ಹೀಗಾಗಿ ವಾಹನ ಸಂಚಾರಕ್ಕೆ ಕಷ್ಟ' ಎಂದು ಹೇಳಿದರು.

‘ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಎಕ್ಸರೇ ಆಪರೇಟರ್ ಇಲ್ಲ. ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರಿಲ್ಲ. ಮಹಿಳಾ ತಜ್ಞರಿಲ್ಲ. ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇರುವುದರಿಂದ ಚಿಕಿತ್ಸೆ ಸರಿಯಾಗಿ ದೊರಕುತ್ತಿಲ್ಲ. ಆದ್ದರಿಂದ ಮಹಾರಾಷ್ಟ್ರದ ನಿಲಂಗಾ, ಲಾತೂರ ಮತ್ತು ಉಮರ್ಗಾದಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತಿದೆ. ಈ ಕಾರಣ ಖಾಲಿ ಸ್ಥಾನಗಳನ್ನು ಶೀಘ್ರ ಭರ್ತಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಪಕ್ಷದ ನಗರ ಘಟಕದ ಅಧ್ಯಕ್ಷ ಶಿವಪುತ್ರ ಗೌರ ಮಾತನಾಡಿ, ರಸ್ತೆ ತಕ್ಷಣ ದುರುಸ್ತಿ ಕಾರ್ಯ ಕೈಗೊಳ್ಳಬೇಕು. ಇಲ್ಲದಿದ್ದರೆ ಹುಲಸೂರನಿಂದ ಹಾದುಹೋಗುವ ಭಾಲ್ಕಿ- ನಿಲಂಗಾ ರಸ್ತೆಯಲ್ಲಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ದೀಪಕ ಗಾಯಕವಾಡ, ಸ್ಲಂ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ದಿಗಂಬರ ಜಲ್ದೆ, ರವಿಸ್ವಾಮಿ, ರಮೇಶ ಧಬಾಲೆ, ರಾಮಲಿಂಗ ಸಾಗಾವೆ, ತುಕಾರಾಮ ಲಾಡೆ, ರಮೇಶ ಕಾಂಬಳೆ, ಲೋಕೇಶ ಹುಲಸೂರೆ, ಆನಂದ ಪಾಟೀಲ, ದತ್ತು ಶಿರಗಾಪುರ, ನಾಗೇಶ ಮೇತ್ರೆ, ಧನರಾಜ ಲಾಡೆ ಉಪಸ್ಥಿತರಿದ್ದರು.

**
ನೂತನ ತಾಲ್ಲೂಕು ಕೇಂದ್ರ ಹುಲಸೂರನಲ್ಲಿನ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಖಾಲಿ ಇರುವ ಕಾರಣ ರೋಗಿಗಳು ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ
- ಸೂರ್ಯಕಾಂತ ಚಿಲ್ಲಾಬಟ್ಟೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.