ADVERTISEMENT

ಹೆಚ್ಚುತ್ತಿರುವ ಬಿಸಿಲು: ನೀರಿನ ಸಮಸ್ಯೆ

ಭಾಲ್ಕಿ ತಾಲ್ಲೂಕಿನಲ್ಲಿ ದುರಸ್ತಿಯಾಗದ ಕೆರೆಕಟ್ಟೆಗಳು; ಬತ್ತಿದ ಜಲಮೂಲ

ಬಸವರಾಜ ಎಸ್.ಪ್ರಭಾ
Published 7 ಮಾರ್ಚ್ 2017, 6:02 IST
Last Updated 7 ಮಾರ್ಚ್ 2017, 6:02 IST
ಭಾಲ್ಕಿ: ದಿನದಿಂದ ದಿನಕ್ಕೆ ಬಿಸಿಲು ಪ್ರಖರತೆ ಸೂಸುತ್ತಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೆರೆ ಕಟ್ಟೆಗಳು ತುಂಬಿದ್ದು, ಸುಲಭವಾಗಿ ಕುಡಿಯುವ ನೀರು ಲಭ್ಯವಾಗಿದೆ. ಆದರೆ ಈಗ ತಾಲ್ಲೂಕಿನ ವಿವಿಧೆಡೆ ನೀರಿನ ಸಮಸ್ಯೆ ನಿಧಾನವಾಗಿ ಕಾಣಿಸಿ ಕೊಳ್ಳತೊಡಗಿದೆ.
 
ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಅಂಬೇಸಾಂಗವಿ, ಹುಪಳಾ, ಕಳಸದಾಳ ಕೆರೆ ಒಡೆದು ನೂರಾರು ಎಕರೆ ಜಮೀನು ಹಾಳಾಗಿದೆ. ಕೆರೆಗಳಲ್ಲಿ ಒಂದು ಹನಿಯೂ ನೀರಿಲ್ಲ. ಏಪ್ರಿಲ್‌, ಮೇ ತಿಂಗಳಿನಲ್ಲಿ  ಕೆರೆ ಅಕ್ಕಪಕ್ಕದ ಗ್ರಾಮಗಳಲ್ಲಿ ನೀರಿನ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
 
ಕಡಿಮೆ ಅಂತರ್ಜಲ ಮಟ್ಟದ ಕಾರಣ ಗ್ರಾಮದಲ್ಲಿ ಇರುವ ಎರಡು ಕೊಳವೆ ಬಾವಿಗಳಿಂದ ಕಡಿಮೆ ಪ್ರಮಾಣದ ನೀರು ಬರುತ್ತಿದ್ದು,  ನೀರು ಸಾಕಾಗುತ್ತಿಲ್ಲ. ಹೊಸ ಕೊಳವೆ ಬಾವಿ ಕೊರೆಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಹಾಗಾಗಿ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ  ಗಂಭೀರವಾದರೆ, ನೀರಿಗಾಗಿ ಹೊಲಗಳಿಗೆ ಅಲೆಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಚಪ್ಪಾ ಗೌಡಗಾಂವ ನಿವಾಸಿ ಮಹಾದೇವ ಸಜ್ಜನ್‌.
 
ಸದ್ಯ ಗ್ರಾಮದ ಕೆರೆಯಲ್ಲಿ ನೀರು ಇರುವುದರಿಂದ ಬಳಕೆಯ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕುಡಿಯುವ ನೀರಿಗಾಗಿ ನಿತ್ಯ ಹೊಲಗಳಿಗೆ ಅಲೆಯುವುದು ತಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ತೇಗಂಪುರ ನಿವಾಸಿ ದತ್ತು ಪಾಟೀಲ. ಗ್ರಾಮದಲ್ಲಿರುವ ನಾಲ್ಕು ಕೊಳವೆ ಬಾವಿಗಳ ಆಳ ಹೆಚ್ಚಿಸಿ, ಮೋಟಾರ್‌ ವ್ಯವಸ್ಥೆ ಮಾಡಿದರೆ. ನಮ್ಮ ಸಮಸ್ಯೆ ಬಗೆ ಹರಿಯುತ್ತದೆ. ಇಲ್ಲವಾದರೆ ಸಂಕಷ್ಟ ತಪ್ಪಿದಲ್ಲ ಎನ್ನುತ್ತಾರೆ ಅವರು.
 
ತಾಲ್ಲೂಕಿನ ಕಳಸದಾಳ, ಹುಪಳಾ, ಅಂಬೇಸಾಂಗವಿ ಕೆರೆಗಳು ಅತಿವೃಷ್ಟಿಯಿಂದ ಒಡೆದು ಆರು ತಿಂಗಳು ಕಳೆದರೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ದೂರುತ್ತಾರೆ.
 
ಕೆರೆ ಕಟ್ಟೆಗಳು ಒಡೆದಿರುವ ಮಾಹಿತಿ ಇದ್ದರೂ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಣೆಗೆ ಪೂರ್ವ ಸಿದ್ದತಾ ಸಭೆ ನಡೆಸಿಲ್ಲ. ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಪಟ್ಟಿಯನ್ನೂ ಸಿದ್ಧಪಡಿಸಿಲ್ಲ. 
 
ಎಲ್ಲೆಡೆ ಅಂತರ್ಜಲಮಟ್ಟ ಹೆಚ್ಚಿರುವುದರಿಂದ ಈ ಸಲ ಅಷ್ಟೊಂದು ತಲೆ ಕೆಡಿಸಿಕೊಳ್ಳುವಷ್ಟು ಸಮಸ್ಯೆ ಇಲ್ಲ. ತೇಗಂಪುರ, ರಾಚಪ್ಪಾ ಗೌಡಗಾಂವ ಗ್ರಾಮಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ನಾನೂ ಭೇಟಿ ನೀಡಿದ್ದೇನೆ. ಶೀಘ್ರ ಸಭೆ ನಡೆಸಿ ಸಮಸ್ಯೆ ಉದ್ಭವಿಸಬಹುದಾದ ಹಳ್ಳಿಗಳ ಪಟ್ಟಿ ಮಾಡಿ, ಟಾಸ್ಕ್‌ ಪೋರ್ಸ್‌ ಸಮಿತಿ ರಚಿಸಿ ಸಮಸ್ಯೆ ಬಗೆ ಹರಿಸುತ್ತೇವೆ. ಅನುದಾನ ಕೊರತೆ ಇಲ್ಲ ಎನ್ನುತ್ತಾರೆ ತಹಶೀಲ್ದಾರ್‌ ಮನೋಹರ ಸ್ವಾಮಿ. 
 
* ಕಳೆದ ಬೇಸಿಗೆ ಹಾಗೆಯೇ ಕುಡಿಯುವ ನೀರಿಗಾಗಿ ನಿತ್ಯ 2 ಕಿ.ಮೀ ಅಲೆದಾಟ ನಡೆಸಿದ್ದೇವೆ. ಸಂಬಂಧಿತರು ಸಮಸ್ಯೆ ಪರಿಹರಿಸಲು ಮುಂದಾಗಬೇಕು.
ದತ್ತು ಪಾಟೀಲ, ತೇಗಂಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.