ADVERTISEMENT

20ರಂದು ಬಿಜೆಪಿಯಿಂದ ಪ್ರತಿಭಟನಾ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:33 IST
Last Updated 15 ಮೇ 2017, 5:33 IST
ಭಾಲ್ಕಿ: ‘ತಾಲ್ಲೂಕಿನ ಮೂರು ಕೆರೆಗಳು ಒಡೆದು 8 ತಿಂಗಳು ಕಳೆದರೂ ಇದುವರೆಗೂ ದುರುಸ್ತಿ ಭಾಗ್ಯ ಕಂಡಿಲ್ಲ. ಕೆರೆಗಳಿಂದ ಬೆಳೆಹಾನಿ ಸಂಭವಿಸಿದ ರೈತರಿಗೆ ಪರಿಹಾರವೂ ಸಿಕ್ಕಿಲ್ಲ. ಅತ್ತ ಕಡೆ ಭೂಮಿ ಉಳುಮೆ ಮಾಡಲು ಸಾಧ್ಯವಾಗದೇ ರೈತರು ದಿಕ್ಕು ತೋಚದೆ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
 
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜುಗಳು ಕಳಪೆ ಮಟ್ಟದ್ದಾಗಿವೆ. ಈ ಹಿಂದೆ ನಾನು ಶಾಸಕನಿದ್ದ ಅವಧಿಯಲ್ಲಿ ಅಂದಾಜು ₹8 ಕೋಟಿ ವೆಚ್ಚದಲ್ಲಿ ಲಖಣಗಾಂವ ಬ್ರಿಜ್ ಕಂ. ಬ್ಯಾರೇಜ್ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ.
 
ಅಂದಾಜು ₹200 ಕೋಟಿ ವೆಚ್ಚದಲ್ಲಿ ನಾಲ್ಕು ಕಡೆಗಳಲ್ಲಿ ಬ್ರಿಜ್ ಕಂ. ಬ್ಯಾರೇಜುಗಳ ನಿರ್ಮಾಣಕ್ಕೆ 2005-06ರಲ್ಲಿ ಚಾಲನೆ ನೀಡಿ, ಶೇ 30-40ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ನಂತರ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಈಶ್ವರ ಖಂಡ್ರೆ ಅವರಿಂದ ಇದುವರೆಗೂ ಬ್ಯಾರೇಜುಗಳ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಆಪಾದಿಸಿದರು. 
 
‘ಬ್ಯಾರೇಜ್‌ ಗೇಟ್‌ಗಳಲ್ಲಿ ತಾಂತ್ರಿಕ ದೋಷ ಇರುವುದಾಗಿ ಸ್ವತಃ ಸಚಿವರು ಒಪ್ಪಿಕೊಂಡಿದ್ದಾರೆ. ಇದೀಗ ಮತ್ತೆ ಗೇಟುಗಳ ದುರಸ್ತಿಗೆ ಮುಂದಾಗಿರುವುದು ಹಾಸ್ಯಾಸ್ಪದ’ ಎಂದು ದೂರಿದರು.
 
‘ವಿವಿಧ ಕ್ಷೇತ್ರಗಳಲ್ಲಿ ಸಚಿವ ಖಂಡ್ರೆ ಅವರ ವೈಫಲ್ಯ ಖಂಡಿಸಿ ಮೇ 20ರಂದು ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಂಡಿದೆ. ಅದಕ್ಕೆ ಪೂರಕವಾಗಿ 16ರಂದು ಸಾಯಿಗಾಂವ, ಮಾಣಿಕೇಶ್ವರ, ಮೇಹಕರ್ ಹಾಗೂ 19ರಂದು ಚಂದಾಪೂರ್, ಬೀರಿ (ಬಿ) ಗ್ರಾಮಗಳಲ್ಲಿ ಜನಜಾಗೃತಿ ಸಭೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.
 
ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಮಾತನಾಡಿ,  ‘ಸಚಿವ ಖಂಡ್ರೆ ಕ್ಷೇತ್ರದ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ ಎಂಬುದು ದಾಖಲೆ ಸಮೇತ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
 
ಶಿವರಾಜ ಗಂದಗೆ, ಗೋವಿಂದರಾವ ಬಿರಾದಾರ, ದಿಗಂಬರರಾವ ಮಾನಕಾರಿ, ಸೂರಜ್‌ಸಿಂಗ್‌ ರಜಪೂತ್, ಚಂದ್ರಕಾಂತ ಪಾಟೀಲ, ರಾಹುಸಾಬ ಬಿರಾದಾರ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.