ADVERTISEMENT

25ಕ್ಕೂ ಹೆಚ್ಚು ವಾಂತಿಬೇಧಿ ಪ್ರಕರಣ

ಹುಮನಾಬಾದ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:15 IST
Last Updated 19 ಏಪ್ರಿಲ್ 2017, 4:15 IST
ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಅತಿಯಾದ ಬಿಸಿಲು, ಸ್ವಚ್ಛತೆ ಕೊರತೆ ಮತ್ತು ಅಶುದ್ಧ ನೀರು ಸೇವನೆಯಿಂದ ಪೂರೈಕೆ ಏಪ್ರಿಲ್‌ 10ರಿಂದ ಈವರೆಗೆ 20ಕ್ಕೂ ಹೆಚ್ಚು ವಾಂತಿ ಬೇಧಿ ಪ್ರಕರಣ ಪತ್ತೆಯಾಗಿದ್ದು, ಅನಾರೋಗ್ಯಪೀಡಿತರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಪಟ್ಟಣದ ಕುಪ್ಫರ್‌ತೋಡ್‌ ಮೊಹಲ್ಲಾ, ವಾಂಜ್ರಿ ಬಡಾವಣೆ, ಜೋಷಿಗಲ್ಲಿ, ಶಿವಚಂದ್ರ ಕಾಲೋನಿ, ಕಲ್ಲೂರ, ಹಣಕುಣಿ, ಮಾಣಿಕನಗರ, ಬೋರಂಪಳ್ಳಿ, ನಂದಗಾಂವ್‌, ಹಳ್ಳಿಖೇಡ(ಕೆ), ಮನ್ನಾಎಖ್ಖೆಳ್ಳಿ, ಚಿಟಗುಪ್ಪ, ಹಳ್ಳಿಖೇಡ(ಬಿ), ಗಡವಂತಿ, ಕಪ್ಪರಗಾಂವ ಗ್ರಾಮಸ್ಥರು ವಾಂತಿಬೇಧಿ ಕಾರಣ ತಾಲ್ಲೂಕು ಕೇಂದ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 
‘ರಾತ್ರಿ ಬೇಧಿ ಆರಂಭಗೊಂಡು ತೀವ್ರ ನಿತ್ರಾಣರಾಗಿ ಇಂದು ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದು ಗಡವಂತಿ ಗ್ರಾಮದ ನಾಗೇಶ್ವರಿ, ಗುಂಡಪ್ಪ, ಕಪ್ಪರಗಾಂವ ಗ್ರಾಮದ ಅಕ್ಷತಾ, ಹುಮನಾಬಾದ್ ಜನತಾನಗರದ ಸಾಗರ್‌ ಪಾಲಕರು ತಿಳಿಸಿದರು. ವಾಂತಿಬೇಧಿ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಕಲ್ಲೂರ ಗ್ರಾಮದ ಭೀಮಾಬಾಯಿ, ಸೇಡೋಳ್‌ ಗ್ರಾಮದ ಸರಸ್ವತಿ ದಾಖಲಾಗಿದ್ದಾರೆ. 
 
ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ನೀರು ಪೂರೈಸುವ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದೇ ಇರುವುದು, ಓಣಿಗಳಲ್ಲಿರುವ ಚರಂಡಿ ಸ್ವಚ್ಛಗೊಳಿಸದೇ ಇರುವುದು, ಶುದ್ಧ ನೀರಿನಿಂದ ಆಹಾರ ಪದಾರ್ಥ ಸ್ವಚ್ಛಗೊಳಿಸದೇ ಸೇವಿಸುವುದು ಇತ್ಯಾದಿ ಕಾರಣ ವಾಂತಿಬೇಧಿ ಪ್ರಕರಣ ಸಂಭವಿಸುತ್ತವೆ.
 
ಕಾರಣ ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಗೆ ಒಳಪಡುವ ಸಂಬಂಧಪಟ್ಟ ಅಧಿಕಾರಿಗಳು ರೋಗ ಗಂಭೀರ ಸ್ವರೂಪ ಪಡೆದ ನಂತರ ಪರದಾಡದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಲ್ಲಿ ಆರಂಭಿಕ ಹಂತದಲ್ಲಿಯೇ ರೋಗ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಗವಾಗುತ್ತದೆ ಈ ನಿಟ್ಟಿನಲ್ಲಿ ಕಂದಾಯ ಮತ್ತು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ದಂದಿಗೆ ಗ್ರಾಮಸ್ಥರು ರೋಗಮುಕ್ತ ಗ್ರಾಮಗಳಾಗಿಸಲು ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಿ, ಸಹಕರಿಸಬೇಕು ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ.ಅವಿನಾಶ ಎಖ್ಖೇಳ್ಳಿಕರ್‌ ತಿಳಿಸಿದರು. 
 
ಕಟ್ಟುನಿಟ್ಟಿನ ಆದೇಶ:ತಾಲ್ಲೂಕು ಕೇಂದ್ರ ಒಳಗೊಂಡಂತೆ ಗ್ರಾಮೀಣ ಪ್ರದೇಶ ಗಳಲ್ಲಿ ವಾಂತಿ ಬೇಧಿ ಒಳಗೊಂಡಂತೆ ಯಾವುದೇ ಕಾಯಿಲೆ ಬಾರದಿರುವಂತೆ ನೀರು ಪೂರೈಕೆ ಪೈಪ್‌ ಒಡೆದಲ್ಲಿ ತಕ್ಷಣ ದುರುಸ್ತಿಗೊಳಿಸಬೇಕು.
 
ಚರಂಡಿ ತ್ಯಾಜ್ಯ ತಕ್ಷಣ ವಿಲೆವಾರಿಗೊಳಿಸುವುದು, ತೆರೆದ ಬಾವಿಗೆ  ಬ್ಲೀಚಿಂಗ್‌ ಪುಡಿ ಸಿಂಪರಿಸಲು ಈಚೆಗೆ ಕರೆದ ಸಭೆಯಲ್ಲಿ ಪಿಡಿಒ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಆದೇಶ ನಿರ್ಲಕ್ಷಿಸಿದಲ್ಲಿ ಮುಂದಿನ ಆಗುಹೋಗುಗಳಿಗೆ ಅವರನ್ನೇ ಹೊಣೆ ಮಾಡುವುದಾಗಿಯೂ ಎಚ್ಚರಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಡಾ.ಗೋವಿಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.