ADVERTISEMENT

ರಾಜಕೀಯ ಅಧಿಕಾರ ಪಡೆಯಲು ಒಗ್ಗಟ್ಟಾಗಿ

10 ದಿನದ ಧಮ್ಮ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ: ಭಂತೆ ಧಮ್ಮನಾಗ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 7:59 IST
Last Updated 15 ಜನವರಿ 2018, 7:59 IST
ಬೀದರ್‌ನಲ್ಲಿ ಈಚೆಗೆ ನಡೆದ ಧಮ್ಮ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಬಸವಕಲ್ಯಾಣದ ಭಂತೆ ಧಮ್ಮನಾಗ ಮಾತನಾಡಿದರು
ಬೀದರ್‌ನಲ್ಲಿ ಈಚೆಗೆ ನಡೆದ ಧಮ್ಮ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಬಸವಕಲ್ಯಾಣದ ಭಂತೆ ಧಮ್ಮನಾಗ ಮಾತನಾಡಿದರು   

ಬೀದರ್‌: ‘ದಲಿತ ಸಮುದಾಯದವರು ರಾಜಕೀಯ ಅಧಿಕಾರ ಪಡೆಯಲು ಒಗ್ಗಟ್ಟಾಗಬೇಕು’ ಎಂದು ಬಸವಕಲ್ಯಾಣದ ಭಂತೆ ಧಮ್ಮನಾಗ ತಿಳಿಸಿದರು.

ಭಾರತೀಯ ಭೌದ್ಧ ಮಹಾಸಭಾ ಜಿಲ್ಲಾ ಮತ್ತು ತಾಲ್ಲೂಕು ಘಟಕ ಹಾಗೂ ಸಮತಾ ಸೈನಿಕ ದಳ ಬೀದರ್‌ ಶಾಖೆ ಆಶ್ರಯದಲ್ಲಿ ನಗರದ ಜನವಾಡ ರಸ್ತೆಯಲ್ಲಿರುವ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ 10 ದಿನದ ಧಮ್ಮ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭೀಮಾಕೋರೆಗಾಂವ್‌ 200ನೇ ವರ್ಷದ ವಿಜಯೋತ್ಸವ ಆಚರಣೆ ವೇಳೆ ನಡೆದ ಹಲ್ಲೆಯನ್ನು ಖಂಡಿಸಿ ದಲಿತರೆಲ್ಲರೂ ಒಂದಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿಯೂ ಎಲ್ಲರೂ ಒಂದಾಗಿ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಜಕೀಯ ಅಧಿಕಾರ ಪಡೆಯಬೇಕು’ ಎಂದು ಸಲಹೆ ಮಾಡಿದರು.

ADVERTISEMENT

‘ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನೊಳಗೊಂಡ ದಲಿತ ಸಂಘಟನೆಗಳು ಸರಿಯಾಗಿಯೇ ಇವೆ. ಆದರೆ, ಆ ಸಂಘಟನೆಗಳನ್ನು ನಡೆಸಿಕೊಂಡು ಹೋಗುವವರು ಪ್ರಾಮಾಣಿಕವಾಗಿ ಇಲ್ಲದ ಕಾರಣ ಅವುಗಳು ಅಂಬೇಡ್ಕರ್‌ ಅವರ ತತ್ವಗಳಂತೆ ಹೋರಾಟ ನಡೆಸದೆ ಹಾಳಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ದಲಿತ ಸಂಘಟನೆಗಳು ಕೇವಲ ಅಂಬೇಡ್ಕರ ಅವರು ಪ್ರತಿಪಾದಿಸಿರುವ ತತ್ವಗಳ ಅಡಿಯಲ್ಲಿ ಮಾತ್ರ ಹೋರಾಟ ನಡೆಸಬೇಕಾದ ಅಗತ್ಯವಿದೆ’ ಎಂದರು.

‘ತಾವು ಅಂಬೇಡ್ಕರ್‌ವಾದಿಗಳು ಎಂದು ಹೇಳಿಕೊಳ್ಳುತ್ತಿರುವ ಬಹುತೇಕರು ಇನ್ನೂ ಮೌಢ್ಯಾಚರಣೆ ಯಲ್ಲಿ ಮುಂದುವರೆಯುತ್ತಿದ್ದಾರೆ. ದಲಿತರು ಯಾವುದೇ ಕಾರಣಕ್ಕೂ ಮೌಢ್ಯ ಆಚರಣೆ ಮಾಡಬಾರದು. ವೈಜ್ಞಾನಿಕ ತಳಹದಿಯ ಮೇಲಿರುವ ಬುದ್ಧ ಸಂಸ್ಕೃತಿಯನ್ನು ಪಾಲನೆ ಮಾಡುವ ಮೂಲಕ ಆಚರಣೆಗೆ ತರಬೇಕು’ ಎಂದು ತಿಳಿಸಿದರು.

ಆಣದೂರ ವೈಶಾಲಿನಗರದ ಭಂತೆ ಜ್ಞಾನಸಾಗರ ಸಾನ್ನಿಧ್ಯ ವಹಿಸಿದ್ದರು. ಭಂತೆ ಧಮ್ಮಕೀರ್ತಿ, ಪ್ರಮುಖರಾದ ರಾಜಪ್ಪ ಗೂನಳ್ಳಿ, ಭೀಮಶಾ ನಾಟೀಕರ್ ಇದ್ದರು. ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಾಬು ಆಣದೂರ ನಿರೂಪಿಸಿದರು. ಭೀಮರಾಜ ಕಲಾ ಪರಿಷತ್‌ ತಂಡದವರು ಭೀಮಗೀತೆಗಳು ಹಾಡಿದರು.

ಬುದ್ಧ ಧಮ್ಮದಲ್ಲಿ ನೀತಿಗೆ ಪ್ರಾಧಾನ್ಯ: ಬುದ್ಧ ಧಮ್ಮದಲ್ಲಿ ನೀತಿಗೆ ಪ್ರಾಧಾನ್ಯವಿದೆ ಎಂದು ಮುಂಬೈನ ಭಂತೆ ಮೇಧಾಂಕರ್ ತಿಳಿಸಿದರು.

ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ  ನಡೆದ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೌದ್ಧ ಧಮ್ಮದಲ್ಲಿ ಕೊಲೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವುದು, ಮದ್ಯ ಸೇವನೆ ಮಾಡುವುದರಿಂದ ದೂರವಿರಬೇಕು’ ಎಂದರು.

‘ದಯೆ, ದಾನ, ಸಚ್ಚಾರಿತ್ರ್ಯ, ಸತ್ಯ , ಜಾಗರೂಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಳ್ಳೆಯ ಉದ್ದೇಶದಿಂದ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡ ಬುದ್ಧ ಮತ್ತು ಅಂಬೇಡ್ಕರ್ ಅವರಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು. ಆಣದೂರ ವೈಶಾಲಿನಗರದ ಭಂತೆ ಸಂಘಪಾಲ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.