ADVERTISEMENT

ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 9:29 IST
Last Updated 23 ಜನವರಿ 2018, 9:29 IST
ಪ್ರಥಮ ತಾಲ್ಲೂಕು ಮಟ್ಟದ ಜಾನಪದ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಮಹಿಳೆಯರು
ಪ್ರಥಮ ತಾಲ್ಲೂಕು ಮಟ್ಟದ ಜಾನಪದ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಮಹಿಳೆಯರು   

ಮಲನಗರ: ‘ಆಧುನೀಕರಣ ಹಾಗೂ ಜಾಗತೀಕರಣಗಳ ವೇಗದ ಬದುಕಿನಲ್ಲಿ ತಮ್ಮತನ ಕಳೆದುಕೊಳ್ಳುತ್ತಿರುವ ಸಮಾ ಜಕ್ಕೆ, ಹಿಂದಿನ ಜನರ ಸಾತ್ವಿಕ ಬದುಕಿನ ಪರಿಚಯ ಹಾಗೂ ಸಂಸ್ಕೃತಿಯ ಅರಿವು ಮೂಡಿಸಲು ಜಾನಪದ ಸಾಹಿತ್ಯದ ಅಧ್ಯಯನ ಅಗತ್ಯವಾಗಿದೆ’ ಎಂದು ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಶಾಖಾ ಮಠದಲ್ಲಿ ಸೋಮವಾರ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ, ಪ್ರಸನ್ನ ಕಲೆ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಸಂತಪೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಥಮ ಜಾನಪದ ಮಹಿಳಾ ಸಮ್ಮೇಳನದಲ್ಲಿ ಮಾತನಾಡಿದರು.

‘ಸ್ಥಳೀಯ ಜಾನಪದ ಕಲಾವಿದರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡುವ ಕಾರ್ಯ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬರಬೇಕಿದೆ. ಗ್ರಾಮೀಣ ಜನರು ಜನಪದ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಜಾನಪದದ ಕಲಾ ಪ್ರಕಾರಗಳು ನಶಿಸಿ ಹೋಗದಂತೆ, ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದರು.

ADVERTISEMENT

ಸಮ್ಮೇಳನದ ವೈಭವ ಹೆಚ್ಚಿಸಿದ ಮೆರವಣಿಗೆ

ಕಮಲನಗರ: ಪಟ್ಟಣದಲ್ಲಿ ಸೋಮವಾರ ನಡೆದ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಪಾರ್ವತಿಬಾಯಿ ಪಾಟೀಲ ಅವರ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ಸಮ್ಮೇಳನದ ವೈಭವ ಹೆಚ್ಚಿಸಿದವು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಮೆರವಣಿಗೆಯಲ್ಲಿ ಸ್ಥಳೀಯ ಹಾಗೂ ಅಂತರರಾಜ್ಯ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ಜನಮನ ರಂಜಿಸಿದವು.

ಸಾಂಸ್ಕೃತಿಕ ಶ್ರೀಮಂತಿಕ ಹಾಗೂ ಜಾನಪದದ ವೈಭವಕ್ಕೆ ಮೆರವಣಿಗೆ ಸಾಕ್ಷಿಯಾಯಿತು. ವಿವಿಧೆಡೆಯಿಂದ ಸುಮಾರು 20ಕ್ಕೂ ಹೆಚ್ಚು ಕಲಾ ತಂಡಗಳು ಆಕರ್ಷಕ ಪ್ರದರ್ಶನ ನೀಡಿದವು.

ನೀಲಾಂಬಿಕಾ ಕಲಾ ತಂಡದಿಂದ ಸಾಂಪ್ರದಾಯಿಕ ಹಾಡುಗಳು, ನಿಂಗಮ್ಮ ನಾಗೂರ್‌ ತಂಡದಿಂದ ಕೋಲಾಟ, ರಮಾಬಾಯಿ ನಾಗಮಾರಪಳ್ಳಿ ತಂಡದಿಂದ ಜೋಗುಳ ಪದ, ಅಕ್ಕನ ಬಳಗದಿಂದ ಭಜನೆ, ಮಸ್ಕಲ್‌ ತಾಂಡಾ ತಂಡದಿಂದ ಲಂಬಾಣಿ ನೃತ್ಯ, ಮುಧೋಳ್ ನೀಲಾಂಬಿಕಾ ತಂಡದಿಂದ ಕುಟ್ಟುವ ಬೀಸುವ ಹಾಡುಗಳು, ಚಿಕ್ಲಿ ಕಮಲಮ್ಮ ತಂಡದಿಂದ ಹಲಗೆ ವಾದನ, ಜೋಜನಾ ಇಂದ್ರಮ್ಮ ತಂಡದಿಂದ ಮೊಹರಂ ಹಾಡುಗಳು, ಬಸನಾಳ್‌ ತಂಡದಿಂದ ಚಕ್ರಿ ಭಜನೆ, ಮುರ್ಕಿ ತಂಡದಿಂದ ಸೋಬಾನೆ ಹಾಡುಗಳು, ಹೊರಂಡಿ ತಂಡದಿಂದ ಬುಲಾಯಿ ಹಾಡುಗಳು ಹೀಗೆ ವಿವಿಧ ಕಲಾ ತಂಡಗಳು ಮೆರವಣಿಗೆಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದವು.

ಅಲ್ಲಮಪ್ರಭು ವೃತ್ತದಿಂದ ಆರಂಭವಾದ ಮೆರವಣಿಗೆ, ಬಸವೇಶ್ವರ ವೃತ್ತ, ಗ್ರಾಂ ಪಂಚಾಯಿತಿ ಹಾಗೂ ಪ್ರಮುಖ ರಸ್ತೆಗಳ ಮೂಲಕ ಸಾಗಿ ಹಿರೇಮಠ ಶಾಖಾ ಮಠದ ಆವರಣ ತಲುಪಿತು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ ಅವರು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸೂರ್ಯಕಾಂತ ಶಿವಣಕರ್‌, ಶಾಂತಕುಮಾರ ಬಿರಾದಾರ್‌, ಪ್ರಕಾಶ ಮಾನಕರಿ, ಬಸವರಾಜ ಶಿವಣಕರ್‌ ರಾಜಕುಮಾರ ಬಿರಾದಾರ್‌, ನೀಲಕಂಠರಾವ್‌ ಕಾಂಬಳೆ, ಬಸವರಾಜ ಪಾಟೀಲ, ಸಾಹಿತಿ ಬಾ.ನಾ.ಸೊಲ್ಲಾಪುರೆ ಇದ್ದರು.

* * 

ಜನಪದ ಕಲೆ, ಸಾಹಿತ್ಯದ ಬೆಳವಣಿಗೆಗೆ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡಬೇಕು.
– ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.