ADVERTISEMENT

ವಚನ ಸಾಹಿತ್ಯದ ಚಳವಳಿ ವಿಶ್ವಕ್ಕೆ ಮಾದರಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:27 IST
Last Updated 24 ಜನವರಿ 2018, 10:27 IST
ಬೀದರ್‌ನಲ್ಲಿ ಮಂಗಳವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಜರಗನಹಳ್ಳಿ ಶಿವಶಂಕರ ಮಾತನಾಡಿದರು
ಬೀದರ್‌ನಲ್ಲಿ ಮಂಗಳವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಜರಗನಹಳ್ಳಿ ಶಿವಶಂಕರ ಮಾತನಾಡಿದರು   

ಬೀದರ್‌: ‘ವಚನ ಸಾಹಿತ್ಯದ ಚಳವಳಿ ವಿಶ್ವಕ್ಕೆ ಮಾದರಿಯಾಗಿದೆ. ಅದು ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿತು. ವಲಸಿಗರಿಗೂ ಕನ್ನಡ ಭಾಷೆಯನ್ನು ಕಲಿಸಿತು’ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ ಹೇಳಿದರು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕನ್ನಡ ಭಾಷೆಯ ಉಳಿವಿಗಾಗಿ ರಾಜ್ಯ ಸರ್ಕಾರ ಕಡ್ಡಾಯವಾಗಿ ಕನ್ನಡದಲ್ಲಿ ವ್ಯವಹರಿಸುವಂತೆ ಆದೇಶ ಹೊರಡಿಸಬೇಕು’ ಎಂದರು.

‘14 ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡಕ್ಕೆ ಆರನೇ ಸ್ಥಾನ ಇದೆ. ಕನ್ನಡ ಭಾಷಾ ವಿಜ್ಞಾನಿಗಳು ಎರಡು ಸಾವಿರ ವರ್ಷಗಳ ಹಿಂದೆಯೇ ಸ್ವರ, ವ್ಯಂಜನಗಳ ಆಧಾರದ ಮೇಲೆ ಲಿಪಿಗಳನ್ನು ರೂಪಿಸಿದ್ದಾರೆ. ಭಾಷೆ ತಂತ್ರಜ್ಞಾನದಲ್ಲೂ ಬಳಕೆ ಆಗಬೇಕು. ಇದರಿಂದ ಭಾಷೆ ಹೆಚ್ಚು ಕಾಲ ಬಾಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಚೀನಾ ದಲ್ಲಿ ಚೈನಿ ಭಾಷೆಯಲ್ಲಿ ತಂತ್ರಜ್ಞಾನ ಬಳಕೆಯಲ್ಲಿದೆ. ನ್ಯಾನೊ ವಿಜ್ಞಾನಿ ಸಿಎನ್‌ಆರ್‌ ರಾವ್ ಅವರು ಕನ್ನಡದವರೇ ಆಗಿದ್ದರೂ ಇಂಗ್ಲಿಷ್‌ನಲ್ಲಿ ತಂತ್ರಜ್ಞಾನದ ವಿಶ್ಲೇಷಣೆ ಮಾಡಿದ್ದಾರೆ. ಕನ್ನಡದವರು ತಂತ್ರಜ್ಞಾನದ ಬಗೆಗೆ ಕನ್ನಡದಲ್ಲೇ ಬರೆದರೆ ಭಾಷೆ ಗಟ್ಟಿಗೊಳ್ಳಲು ಅನುಕೂಲವಾಗುತ್ತದೆ. ಕನ್ನಡ, ಅನ್ನದ ಭಾಷೆಯಾಗುತ್ತದೆ’ ಎಂದು ಹೇಳಿದರು.

‘ಕನ್ನಡ ಸಾಹಿತ್ಯವು ವ್ಯಕ್ತಿತ್ವ ರೂಪಿಸುವ ಕೆಲಸವನ್ನು ಮಾಡಬೇಕು. ಆದರೆ, ಇಂದು ದೃಶ್ಯ ಮಾಧ್ಯಮಗಳು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿವೆ. ಬಿಗ್‌ಬಾಸ್‌ ಕಾರ್ಯಕ್ರಮಗಳಿಂದ ಸಮಾಜಕ್ಕೆ ಏನೂ ಪ್ರಯೋಜನ ಆಗಲಾರದು. ಹುಚ್ಚ ವೆಂಕಟ ಹಾಗೂ ಪ್ರಥಮ್‌ ಅವರು ಸಮಾಜಕ್ಕೆ ಹೇಗೆ ಮಾದರಿಯಾಗಲು ಸಾಧ್ಯ’ ಎಂದು ಪ್ರಶ್ನಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ನಗರಸಭೆ ಸದಸ್ಯ ಧನರಾಜ ಹಂಗರಗಿ, ನವೀನ್‌ ಪಬ್ಲಿಕ್‌ ಸ್ಕೂಲ್‌ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಇದ್ದರು. ಜಗನ್ನಾಥ ಶಿವಯೋಗಿ ಸ್ವಾಗತಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು.

ಫೆಬ್ರುವರಿಯಲ್ಲಿ ಕನ್ನಡ ಭವನಕ್ಕೆ ಅಡಿಗಲ್ಲು

ಬೀದರ್: ‘ಫೆಬ್ರುವರಿ ಮೊದಲ ವಾರದಲ್ಲಿ ಜಿಲ್ಲಾ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು) ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಹೇಳಿದರು. ‘ಭವನಕ್ಕೆ ಅಡಿಗಲ್ಲು ಹಾಕಿದ ಆರು ತಿಂಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಗಣರಾಜ್ಯೋತ್ಸವದ ದಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯನ್ನು ನೀಡಲಿದ್ದಾರೆ’ ಎಂದು ತಿಳಿಸಿದರು.

‘ಕನ್ನಡದ ಕಾರ್ಯಕ್ರಮ ಹೃದಯಕ್ಕೆ ಹತ್ತಿರವಾಗಿರುತ್ತದೆ. ಆದರೆ, ಬೀದರ್‌ನಲ್ಲಿ ಕನ್ನಡಕ್ಕಿಂತ ಹೆಚ್ಚು ಹಿಂದಿ ಬಳಕೆ ಇದೆ. ಗಡಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ ಕನ್ನಡ ಅನುಷ್ಠಾನ ಸಮಿತಿ ರಚಿಸಲು ಉದ್ದೇಶಿಸಲಾಗಿದೆ. ಸಂಘ, ಸಂಸ್ಥೆಗಳು ಹಾಗೂ ಸಾಹಿತಿಗಳು ಕನ್ನಡದ ಅಭಿವೃದ್ಧಿಗಾಗಿ ಸಲಹೆ ಸೂಚನೆಗಳನ್ನು ನೀಡಬೇಕು’ ಎಂದು ಮನವಿ ಮಾಡಿದರು.

‘ಕನ್ನಡದ ಕಾರ್ಯಕ್ರಮ ರಚನಾತ್ಮಕ ಫಲಿತಾಂಶ ನೀಡಬೇಕು. ಕನ್ನಡದ ಕಾರ್ಯಕ್ರಮ ಅಂದರೆ ಕೇವಲ ವಚನಗಳಿಗೆ ಸೀಮಿತವಾಗಬಾರದು. ಇನ್ನುಳಿದ ಪ್ರಮುಖ ಅಂಶಗಳಿಗೂ ಆದ್ಯತೆ ಇರಬೇಕು’ ಎಂದು ತಿಳಿಸಿದರು.

ಕನ್ನಡ ಭವನದ ನೀಲನಕ್ಷೆ ಸಿದ್ಧ

‘ಜಿಲ್ಲಾ ಆಡಳಿತವು ಬೀದರ್‌ನ ಗುರುದ್ವಾರ ಸಮೀಪ ಕನ್ನಡ ಭವನಕ್ಕೆ ಒಂದು ಎಕರೆ ಜಾಗ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ. ಆದರೆ, ಈಗಾಗಲೇ ₹ 7 ಕೋಟಿ ವೆಚ್ಚದ ಭವನ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

‘ಭವನದಲ್ಲಿ ಪ್ರತಿಯೊಬ್ಬ ಕನ್ನಡಿಗನ ಪಾಲ್ಗೊಳ್ಳುವಿಕೆ ಇರಬೇಕು ಎನ್ನುವುದು ನನ್ನ ಆಶಯ. ಈಗಾಗಲೇ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ₹ 25 ಸಾವಿರ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಭವನ ನಿರ್ಮಾಣಕ್ಕೆ ಜೋಳಿಗೆ ಹಿಡಿಯಲು ಸಿದ್ಧ ಎಂದು ಹಿಂದೆಯೇ ಹೇಳಿದ್ದೇನೆ. ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಒಂದು ವರ್ಷದ ಅವಧಿಯಲ್ಲಿ ಭವನ ನಿರ್ಮಿಸುವ ಉದ್ದೇಶ ನಮ್ಮದಾಗಿದೆ’ ಎಂದರು.

‘ಕನ್ನಡದ ಕಾರ್ಯಕ್ರಮ ನಡೆಸಲು ನಗರದಲ್ಲಿ ಇವತ್ತಿಗೂ ಒಂದು ಜಾಗ ಇಲ್ಲ. ಜಿಲ್ಲಾಧಿಕಾರಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಒಂದು ಜಾಗ ಕೊಡುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದಲೂ ಹಣ ಒದಗಿಸಿಕೊಡಲು ಸಾಧ್ಯವಿರುವ ಪ್ರಯತ್ನ ಮಾಡಲಾಗುವುದು’ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.