ADVERTISEMENT

9 ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೊ ಚಿತ್ರೀಕರಣ

ಜಿಲ್ಲೆಯಲ್ಲಿ 21,823 ವಿದ್ಯಾರ್ಥಿಗಳು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಚಂದ್ರಕಾಂತ ಮಸಾನಿ
Published 9 ಮಾರ್ಚ್ 2017, 6:17 IST
Last Updated 9 ಮಾರ್ಚ್ 2017, 6:17 IST
ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಡ್ಡಾಯಗೊಳಿಸಿದ್ದರೂ ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ  ಒಂದು, ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಇನ್ನೊಂದು ನಿಯಮ ಅನುಸರಿಸಲಾಗಿದೆ. 
 
ಜಿಲ್ಲೆಯ 33 ಪರೀಕ್ಷಾ ಕೇಂದ್ರಗಳ ಪೈಕಿ  ಖಾಸಗಿ ಕಾಲೇಜುಗಳ 24  ಕೇಂದ್ರಗಳಲ್ಲಿ ಮಾತ್ರ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ.  ಸರ್ಕಾರಿ ಕಾಲೇಜುಗಳ 9 ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಸಾಧ್ಯವಾಗದ ಕಾರಣ  ಕೊನೆಯ ಹಂತದಲ್ಲಿ ಅಧಿಕಾರಿಗಳು ಪರೀಕ್ಷಾ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ.
 
ಮಾರ್ಚ್‌ 9ರಿಂದ 27ರ ವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿವೆ. ಕಲಾ ವಿಭಾಗದ 8,410, ವಾಣಿಜ್ಯ ವಿಭಾಗದ 3,569 ಹಾಗೂ ವಿಜ್ಞಾನ ವಿಭಾಗದ 9,844 ವಿದ್ಯಾರ್ಥಿಗಳು ಸೇರಿ ಒಟ್ಟು 21,823 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 
 
33 ಪರೀಕ್ಷಾ ಕೇಂದ್ರಗಳ ಪೈಕಿ 16 ಖಾಸಗಿ ಅನುದಾನಿತ ಕಾಲೇಜುಗಳ ಹಾಗೂ 8 ಅನುದಾನರಹಿತ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಸರ್ಕಾರ ಪ್ರತ್ಯೇಕ ಹಣ ಬಿಡುಗಡೆ ಮಾಡದ ಕಾರಣ ಸರ್ಕಾರಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ಕ್ಯಾಮೆರಾ ಅಳವಡಿಸಿಲ್ಲ.
 
ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗಾಗಿಯೇ ರಾಜ್ಯ ಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದಿರುವ ಮಾಹಿತಿ ಇದೆ. ಕ್ಯಾಮೆರಾ ಅಳವಡಿಸುವುದು ವಿಳಂಬವಾಗಲಿರುವ ಕಾರಣ ಪರೀಕ್ಷಾ ಪ್ರಕ್ರಿಯೆ ವಿಡಿಯೊ ಚಿತ್ರೀಕರಣ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಜಿಲ್ಲಾ ಆಡಳಿತವು ಒಪ್ಪಿಗೆ ಸೂಚಿಸಿದೆ ಎನ್ನುತ್ತಾರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಶಿವರಾಜ್‌ ಪಾಟೀಲ.
 
ಸರ್ಕಾರಿ ಕಾಲೇಜಿನ ಪರೀಕ್ಷಾ ಕೇಂದ್ರವೊಂದರಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕನಿಷ್ಠ ₹2.8 ಲಕ್ಷ ಅಗತ್ಯವಿದೆ. 9 ಪರೀಕ್ಷಾ ಕೇಂದ್ರಗಳಿಗೆ ಕನಿಷ್ಠ ₹18ರಿಂದ 20 ಲಕ್ಷ ಬೇಕು. ತುರ್ತಾಗಿ ಕ್ಯಾಮೆರಾ  ಅಳವಡಿಸಲು ಸಾಧ್ಯವಾಗದ ಕಾರಣ  ಸರ್ಕಾರಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಸ್ಕಾಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳುತ್ತಾರೆ ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ್‌.
 
ಬಿಗಿ ಭದ್ರತೆ: ಜಿಲ್ಲಾ ಖಜಾನೆ ಕಚೇರಿಯಲ್ಲಿರುವ ಸ್ಟ್ರಾಂಗ್‌ ರೂಮ್‌ಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಸ್ಟ್ರಾಂಗ್ ರೂಮ್‌ನಲ್ಲಿ ಸಿ.ಸಿ.ಟಿ.ವಿ  ಕ್ಯಾಮೆರಾ ಅಳವಡಿಸಿ ಬೆಂಗಳೂರಿನಿಂದ ನಿಗಾ ಇಡಲಾಗಿದೆ. ಸ್ಟ್ರಾಂಗ್‌ ರೂಮ್‌ ಬಳಿ ಬೇರೆ ಸಿಬ್ಬಂದಿ ಕಂಡು ಬಂದರೆ ಅಲ್ಲಿಂದಲೇ ತಕ್ಷಣ ದೂರವಾಣಿ ಕರೆ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
 
ಸೂಕ್ತ ಪೊಲೀಸ್ ಭದ್ರತೆಯಲ್ಲಿ ಪ್ರತ್ಯೇಕವಾಗಿ ಮೂರು ಸೆಟ್‌ ಪ್ರಶ್ನೆಪತ್ರಿಕೆಗಳು ಜಿಲ್ಲೆಗೆ ಬಂದಿವೆ. ಸ್ಟ್ರಾಂಗ್‌ರೂಮ್‌ನಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ಅಧಿಕಾರಿಗಳಿಗೆ ರಕ್ಷಣೆ ಒದಗಿಸಲು ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು  ಒದಗಿಸಲಾಗಿದೆ.
 
ಜಿಲ್ಲಾ ಖಜಾನೆ ಕಚೇರಿಯಿಂದಲೇ ತಾಲ್ಲೂಕು ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ರವಾನೆಯಾಗಲಿವೆ. ಇದಕ್ಕೆ ಎಂಟು ಮಾರ್ಗ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳ ಬಯೋಮೆಟ್ರಿಕ್‌ ಸಹ ಪಡೆಯಲಾಗಿದೆ. ಬೀದರ್‌ ತಾಲ್ಲೂಕಿನಲ್ಲಿ 13, ಭಾಲ್ಕಿಯಲ್ಲಿ 5, ಔರಾದ್‌ನಲ್ಲಿ 3, ಹುಮನಾಬಾದ್‌ನಲ್ಲಿ 7 ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ 5 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.  
 
* ಸರ್ಕಾರಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿ ತುರ್ತಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಸಾಧ್ಯವಾಗಿಲ್ಲ. ವಿಡಿಯೊ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ.
ಎಚ್‌.ಆರ್. ಮಹಾದೇವ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.