ADVERTISEMENT

ಅಂಬೇಡ್ಕರ್‌: ಮಾನವೀಯ ಮೌಲ್ಯಗಳ ಪ್ರತೀಕ

ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:46 IST
Last Updated 17 ಏಪ್ರಿಲ್ 2017, 7:46 IST
ಚಾಮರಾಜನಗರ: ‘ಅಂಬೇಡ್ಕರ್ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣವಂತರಾಗುವ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜೆಎಸ್ಎಸ್ ಬಾಲಕರ ಪ್ರೌಢಶಾಲೆಯ ಶಿಕ್ಷಕ ಎಚ್‌.ಬಿ. ರಾಜೇಂದ್ರ ಹೇಳಿದರು.
 
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಅಂಬೇಡ್ಕರ್ ಅವರು ದೇಶದ ಮಹಾನ್ ಮಾನವತಾವಾದಿ. ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಅಸಮಾತೆಗಳ ವಿರುದ್ಧ ಸಂಘಟಿತವಾಗಿ ಹೋರಾಡಿದರು. ದೇಶದ ಅಭಿವೃದ್ಧಿಗೆ ಪೂರಕವಾದ ಸಂವಿಧಾನ ರಚಿಸಿ ಕೊಡುಗೆಯಾಗಿ ನೀಡಿದರು ಎಂದು ತಿಳಿಸಿದರು.
 
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ವಿನಯ್ ಮಾತನಾಡಿ, ಅಂಬೇಡ್ಕರ್ ಅವರ ತತ್ವಾದರ್ಶಗಳು ಜಗತ್ತಿನ ಉತ್ತಮ ಮೌಲ್ಯಗಳಾಗಿವೆ. ಅವರ ಜಯಂತಿಯನ್ನು ಸಮಾಜದ ಎಲ್ಲ ವರ್ಗದ ಜನರು ಒಗ್ಗೂಡಿ ಆಚರಿಸಬೇಕು ಎಂದರು.
 
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷ ಗಣೇಶ್‌ ದಿಕ್ಷೀತ್, ಗೌರವ ಕಾರ್ಯದರ್ಶಿ ಜಿ. ರಾಚಪ್ಪ, ಗೌರವ ಕೋಶಾಧ್ಯಕ್ಷ ಎಸ್. ನಿರಂಜನ್‌ಕುಮಾರ್‌ ಹಾಜರಿದ್ದರು.
 
ಭಾವಚಿತ್ರಕ್ಕೆ ಪೂಜೆ ಮಲೆಮಹದೇಶ್ವರ ಬೆಟ್ಟ:  ಡಾ.ಬಿ.ಆರ್. ಅಂಬೇಡ್ಕರ್‌ ಅವರ  ಜಯಂತಿ ನಿಮಿತ್ತ ಇಲ್ಲಿಯ ಜನತಾ ಕಾಲೊನಿ ಗ್ರಾಮದಲ್ಲಿ  ಭಾನುವಾರ ಅಂಬೇಡ್ಕರ್‌ ಭಾವಚಿತ್ರದ ಜೊತೆಗೆ ಬಸವೇಶ್ವರರ ಭಾವಚಿತ್ರಕ್ಕೂ ಯುವಕರು ಪೂಜೆ ಸಲ್ಲಿಸಿದರು.
 
ಅಂಬೇಡ್ಕರ್, ಗೌತಮ ಬುದ್ಧ ಹಾಗೂ ಬಸವೇಶ್ವರರ ಭಾವಚಿತ್ರವನ್ನಿಟ್ಟು ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಪೂಜೆ ನೆರವೇರಿಸಿದರು. 
ಈ ಸಂದರ್ಭದಲ್ಲಿ ಯುವಕರ ಸಂಘದ ಅಧ್ಯಕ್ಷ ಕೃಷ್ಣ ಅವರು ಅಂಬೇಡ್ಕರ್‌ ಅವರ ಜೀವನದ ಬಗ್ಗೆ ಸೇರಿದ್ದ ಜನಸಮೂಹಕ್ಕೆ ಸಮಗ್ರ ಮಾಹಿತಿ ನೀಡಿದರು.
 
ಸಂವಿಧಾನಶಿಲ್ಪಿ  ಸ್ಮರಣೆ
ಚಾಮರಾಜನಗರ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ದೇಶದ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಹೇಳಿದರು.
 
ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬಂದಿಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್‌ ಅವರ  ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
 
ಅಂಬೇಡ್ಕರ್ ಅವರು ವಿದ್ಯಾರ್ಥಿ ಜೀವನದಲ್ಲಿ ಹಲವು ಸಂಕಷ್ಟ ಎದುರಿಸಿದ್ದಾರೆ. ಆದರೆ, ಅವೆಲ್ಲವನ್ನೂ ಮೆಟ್ಟಿ ನಿಂತು ದೇಶದಲ್ಲಿ ಬಹುದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಅವರ ಜೀವನ ಎಲ್ಲರಿಗೂ ಆದರ್ಶವಾಗಬೇಕು ಎಂದರು.
 
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುರಾಂ ಸರ್ವೇಗಾರ ಮಾತನಾಡಿ, ಅಂಬೇಡ್ಕರ್‌ ಅವರ ಜಯಂತಿಯನ್ನು    ಸಮಾಜದ ಎಲ್ಲ ಸಮುದಾಯದ        ಜನರು ಒಗ್ಗೂಡಿ ಆಚರಿಸಬೇಕು. ಅವರು ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ಮೂಲಕ ಅವರ ತತ್ವ, ಸಿದ್ಧಾಂತವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
 
ಕಾರ್ಯಕ್ರಮದಲ್ಲಿ ಡಾ.ನವೀನ್‌ ಚಂದ್ರ, ಡಾ.ಮಹೇಶ್, ಡಾ.ಮಹೇಶ್ವರ್, ಡಾ. ಶ್ರೀನಿವಾಸಮೂರ್ತಿ, ಆರ್ಎಂಒ ಡಾ.ಭಾಗೀರತಿ, ಸಿಬ್ಬಂದಿಯಾದ ಕುಮಾರ್, ಎಲ್. ಮಹದೇವ್, ಮರಿಚಂದ್ರಬಾಬು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.