ADVERTISEMENT

ಆನ್‌ಲೈನ್‌ ದೂರು: ಪ್ರಚಾರಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:08 IST
Last Updated 21 ಮೇ 2017, 10:08 IST
ಆನ್‌ಲೈನ್‌ ದೂರು: ಪ್ರಚಾರಕ್ಕೆ ಆದ್ಯತೆ
ಆನ್‌ಲೈನ್‌ ದೂರು: ಪ್ರಚಾರಕ್ಕೆ ಆದ್ಯತೆ   

ಚಾಮರಾಜನಗರ: ಜನರ ಸುರಕ್ಷತೆ ಮತ್ತು ದೂರುಗಳನ್ನು ಸ್ವೀಕರಿಸಲು ಆರಂಭಿಸಿರುವ ನಾಗರಿಕ ಕೇಂದ್ರಿತ ಪೋರ್ಟಲ್‌ಗೆ ಜಿಲ್ಲೆಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಅದರ ಮತ್ತಷ್ಟು ಪ್ರಚಾರಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಮುಂದಾಗಿದೆ.

ಸಾರ್ವಜನಿಕರು ಆನ್‌ಲೈನ್ ಮೂಲಕವೇ ದೂರುಗಳನ್ನು ಸಲ್ಲಿಸಲು ಸಾಧ್ಯವಾಗುವಂತೆ ಈ ಪೋರ್ಟಲ್‌ ಆರಂಭಿಸಲಾಗಿದೆ. ದೂರು ನೀಡಲು ಪೊಲೀಸ್‌ ಠಾಣೆಗೆ ಹೋಗಲು ಹಿಂದೇಟು ಹಾಕುವವರು ಮತ್ತು ಠಾಣೆಗಳಲ್ಲಿ ದೂರು ಸ್ವೀಕರಿಸಲು ನಿರಾಕರಣೆಗೆ ಒಳಗಾದವರು ನೇರವಾಗಿ ಆನ್‌ಲೈನ್‌ ಮೂಲಕ ದೂರು ನೀಡಬಹುದು. ಈ ಸಂದರ್ಭಗಳಲ್ಲಿ ಪೊಲೀಸರೇ ನೇರವಾಗಿ ದೂರುದಾರರನ್ನು ಸಂಪರ್ಕಿಸಿ ಉಳಿದ ಮಾಹಿತಿ ಕಲೆಹಾಕುತ್ತಾರೆ. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಆನ್‌ಲೈನ್‌ ಮೂಲಕ ದೂರು ಸಲ್ಲಿಸಲು ಬಯಸುವವರು ಮೊದಲು ಪೊಲೀಸ್‌ ಸೇವಾ ಕೇಂದ್ರದ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಬೇಕು. ಅದರಲ್ಲಿ ತಮ್ಮ ವಿಳಾಸ, ಮೊಬೈಲ್‌ ಸಂಖ್ಯೆ, ಗುರುತಿನ ಕಾರ್ಡ್‌ ಸಂಖ್ಯೆ ಮುಂತಾದ ಮಾಹಿತಿಗಳನ್ನು ದಾಖಲಿಸಬೇಕು. ಲಾಗಿನ್ ಪಾಸ್‌ವರ್ಡ್‌ ಅಲ್ಲದೆ, ಎರಡು ಹಂತದ ಭದ್ರತಾ ಪ್ರಶ್ನೆಗಳೂ ಇರುತ್ತದೆ. ಹೀಗಾಗಿ ಆನ್‌ಲೈನ್‌ ಖಾತೆಗೆ ಬೇರೆಯವರು ಪ್ರವೇಶಿಸುವುದು ಸುಲಭವಲ್ಲ.

ADVERTISEMENT

ನೋಂದಣಿ ಮಾಡಿಸಿಕೊಂಡ ನಾಗರಿಕರು ಕಳವು ಪ್ರಕರಣದಿಂದ ಹಿಡಿದು ಯಾವುದೇ ರೀತಿಯ ದೂರನ್ನು ವೆಬ್‌ಸೈಟ್‌ ಮೂಲಕ ದಾಖಲಿಸಬಹುದು. ದೂರುದಾರರು ಪೊಲೀಸ್‌ ಠಾಣೆಗೆ ತೆರಳುವ ಪ್ರಮೇಯವೇ ಇರುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್‌ ಆರ್‌. ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದಂತಹ ಸಂದರ್ಭಗಳಲ್ಲಿಯೂ ಅದರ ವಿರುದ್ಧ ಆನ್‌ಲೈನ್‌ನಲ್ಲಿ ದೂರು ನೀಡಬಹುದು. ಆನ್‌ಲೈನ್‌ ದೂರುಗಳಿಗಾಗಿಯೇ ಪೊಲೀಸ್‌ ಸೇವಾ ಘಟಕ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ವಿವರಿಸಿದರು.

ಮನೆಯೂ ಭದ್ರ: ಕೆಲವೊಮ್ಮೆ ಮನೆಯವರೆಲ್ಲರೂ ಬೀಗ ಹಾಕಿಕೊಂಡು ಹೊರಹೋಗುವ ಸನ್ನಿವೇಶಗಳು ಬರುತ್ತವೆ. ಬೀಗ ಹಾಕಿದ ಮನೆಗಳನ್ನು ಕಳ್ಳರು ಹೆಚ್ಚಾಗಿ ಆಯ್ಕೆಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಮನೆಯವರು ಆತಂಕ ಪಡುವ ಅಗತ್ಯವಿರುವುದಿಲ್ಲ. ತಾವು ಎಷ್ಟು ದಿನದವರೆಗೆ ಮನೆಯಲ್ಲಿ ಇರುವುದಿಲ್ಲ ಎಂಬ ಮಾಹಿತಿಯನ್ನು ನೀಡಿದರೆ ಸಾಕು. ಪೊಲೀಸರು ಅವರ ಮನೆ ಸಮೀಪ ರಾತ್ರಿ ಹೆಚ್ಚು ಸಮಯ ಗಸ್ತು ತಿರುಗುತ್ತಾರೆ ಎಂದು ಅವರು ತಿಳಿಸಿದರು.

ಜನರು ನೀಡುವ ದೂರು ನೇರವಾಗಿ ಕೇಂದ್ರ ಸರ್ವರ್‌ಗೆ ಹೋಗುತ್ತದೆ. ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಬರುತ್ತದೆ. ಅದು ಯಾವ ಠಾಣೆಗೆ ಸಂಬಂಧಿಸಿದ್ದು ಎಂದು ಮಾಹಿತಿ ಕಲೆಹಾಕಿ ಆ ಠಾಣೆಗೆ ಸೂಚನೆ ನೀಡಲಾಗುತ್ತದೆ ಎಂದು ವಿವರಿಸಿದರು.

ಇಪ್ಪತ್ತು ದೂರು: ನಾಗರಿಕ ಕೇಂದ್ರಿತ ಪೋರ್ಟಲ್ ಆರಂಭಗೊಂಡು ಮೂರು ನಾಲ್ಕು ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುಮಾರು 20 ದೂರುಗಳು ದಾಖಲಾಗಿವೆ. ಇದು ಇನ್ನೂ ವ್ಯಾಪಕವಾಗಿ ಪ್ರಚಾರವಾಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ. ಜನರ ಮೊಬೈಲ್‌ಗಳಿಗೆ ಧ್ವನಿ ಸಂದೇಶ ಮತ್ತು ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಕುಲದೀಪ್‌ಕುಮಾರ್‌ ತಿಳಿಸಿದರು.

* * 

ಆನ್‌ಲೈನ್‌ ಮೂಲಕವೂ   ದೂರು ನೀಡಬಹುದು. ಅದು ಸ್ವಯಂಚಾಲಿತವಾಗಿ ನಮ್ಮ ಬಳಿ ಬರುತ್ತದೆ. ದೂರುದಾರರನ್ನು ನಾವೇ ಸಂಪರ್ಕಿಸಿ ಮಾಹಿತಿ ಪಡೆಯುತ್ತೇವೆ
ಕುಲದೀಪ್‌ಕುಮಾರ್‌ ಆರ್‌. ಜೈನ್
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.