ADVERTISEMENT

ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:36 IST
Last Updated 9 ನವೆಂಬರ್ 2017, 5:36 IST

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜೇನುಗೂಡು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಆರೋಗ್ಯ ಕೇಂದ್ರದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

‘ಮಲೆ ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 21 ಹಳ್ಳಿಗಳಿದ್ದು, 18,000 ಜನಸಂಖ್ಯೆ ಇದೆ. ಈ ಭಾಗದಲ್ಲಿ ಇದೊಂದೆ ಆಸ್ಪತ್ರೆ ಇದ್ದು ಅದನ್ನು ಮೇಲ್ದರ್ಜೆಗೇರಿಸಬೇಕು’ ಎಂದು ಒತ್ತಾಯಿಸಿದರು.

30 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಿ, ಲೈಂಗಿಕ ತಜ್ಞೆ ಸೇರಿದಂತ ಮೂವರು ವೈದ್ಯರನ್ನು, ಸ್ಕ್ಯಾನಿಂಗ್‌ ಸೌಲಭ್ಯ, ಸೂಕ್ತ ಪ್ರಯೋಗಾಲಯವನ್ನು ಸ್ಥಾಪಿಸಿ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಅಲ್ಲದೇ, ಆಗಾಗ್ಗೆ ಆರೋಗ್ಯ ಶಿಬಿರಗಳನ್ನೂ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ಮಲೆ ಮಹದೇಶ್ವರ ಬೆಟ್ಟ ಹೊರತು ಪಡಿಸಿ ಕಾಡಂಚಿನಲ್ಲಿರುವ ಗ್ರಾಮಗಳನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಗ್ರಾಮಗಳಿಗೆ ಮಕ್ಕಳು, ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಲು ಯಾವ ವೈದ್ಯರು ಈ ವರೆಗೂ ಬಂದಿಲ್ಲ. ಯಾವುದೇ ಆರೋಗ್ಯ ಸೇವೆಯನ್ನೂ ನೀಡುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳೂ ಕಾಳಜಿ ವಹಿಸುತ್ತಿಲ್ಲ’ ಎಂದು ತೊಳಸಿಕೆರೆ ಗ್ರಾಮದ ಸುಂದ್ರಮ್ಮ, ಮಾದೇವಿ ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಇತ್ತೀಚೆಗೆ ಇಲ್ಲಿಗೆ ನಿಯೋಜನೆಗೊಂಡಿದ್ದು, ಇಲ್ಲಿನ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿಲ್ಲ. ಈ ಎಲ್ಲ ವಿಷಯಗಳ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಯ ಗಮನಕ್ಕೆ ತಂದು ಇನ್ನೊಬ್ಬ ವೈದ್ಯರನ್ನು ನೇಮಿಸಲು ಪ್ರಯತ್ನಿಸುತ್ತೇನೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗೋಪಾಲ್ ತಿಳಿಸಿದರು.

‘ಕನಿಷ್ಠ ಒಂದು ಲಕ್ಷ ಜನಸಂಖ್ಯೆ ಇದ್ದಲ್ಲಿ ಮಾತ್ರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಸಾಧ್ಯ. ಈ ವರೆಗೂ ಇಲ್ಲಿನ ಆಸ್ಪತ್ರೆಗೆ ತಿಂಗಳಿಗೆ ₹ 1 ಲಕ್ಷ ಮೌಲ್ಯದ ಔಷಧವನ್ನು ಪೂರೈಸಲಾಗುತ್ತಿತ್ತು. ಮುಂದೆ ₹7 ಲಕ್ಷ ಮೌಲ್ಯದ ಔಷಧವನ್ನು ಪೂರೈಸುವಂತೆ ವರದಿ ಸಲ್ಲಿಸಲಾಗಿದೆ’ ಎಂದ ಅವರು ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.