ADVERTISEMENT

ಆಸ್ಪತ್ರೆ ಕಟ್ಟಡ ಶಿಥಿಲ: ಪರಿಶೀಲನೆ

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಅಧ್ಯಕ್ಷ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 10:34 IST
Last Updated 5 ಡಿಸೆಂಬರ್ 2016, 10:34 IST

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ  ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ. ಹಾಗಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಎಸ್. ಬಸವರಾಜು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ.ಸದಾ ಶಿವಮೂರ್ತಿ ಇತ್ತೀಚೆಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿದರು.

2002ರಲ್ಲಿ ಈ ಕಟ್ಟಡ ನಿರ್ಮಿಸ ಲಾಗಿದೆ. ನೆಲ ಹಾಗೂ ಗೋಡೆಗಳು ಬಿರುಕುಬಿಟ್ಟಿವೆ. ಹಾಗಾಗಿ, ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕರ್ತವ್ಯನಿರತ ವೈದ್ಯಾಧಿಕಾರಿ ಡಾ.ಗೋವಿಂದ ಅವ ರಿಂದ ಆರೋಗ್ಯ ಕೇಂದ್ರಕ್ಕೆ ಬರುತ್ತಿರುವ ರೋಗಿಗಳ ಬಗ್ಗೆ ಮಾಹಿತಿ ಪಡೆದು ಕೊಂಡರು. 

ಅಧ್ಯಕ್ಷ ರಾಮಚಂದ್ರ ಮಾತನಾಡಿ, ಕಟ್ಟಡ ನಿರ್ಮಾಣದ ವೇಳೆ ಗುತ್ತಿಗೆ ದಾರರು ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ವೈಜ್ಞಾನಿಕವಾಗಿ ಕಟ್ಟಡದ ವಿನ್ಯಾಸ ಮಾಡಿಲ್ಲ. ಸೂಕ್ತ ರೀತಿಯಲ್ಲಿ ಕಾಮಗಾರಿಯ ನಿರ್ವಹಣೆ ಮಾಡದಿರುವ ಪರಿಣಾಮ ಕಟ್ಟಡ ಶಿಥಿಲಗೊಂಡಿದೆ ಎಂದರು.

ವೆಂಕಟಯ್ಯನಛತ್ರದ ಆಸ್ಪತ್ರೆ ಸುಸಜ್ಜಿತವಾಗಿದೆ. ಎಲ್ಲ ರೀತಿಯ ಚಿಕಿತ್ಸೆ ದೊರೆಯುತ್ತಿದೆ. ವೈದ್ಯರು ಮತ್ತು ಸಿಬ್ಬಂದಿ ಗ್ರಾಮೀಣರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧಿ ನೀಡಬೇಕು ಎಂದು ಸೂಚಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆಬಾವಿ ಕೊರೆಯಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್. ಬಸವರಾಜು, ಗ್ರಾಮ ಪಂಚಾ ಯಿತಿ ಅಧ್ಯಕ್ಷ ಶಮಿತ್‌ಕುಮಾರ್, ಉಪಾಧ್ಯಕ್ಷ ಸಿದ್ದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.