ADVERTISEMENT

ಆಹಾರ ಪದಾರ್ಥದಲ್ಲಿ ಹುಳುಗಳ ರಾಶಿ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:48 IST
Last Updated 19 ಜುಲೈ 2017, 10:48 IST
ಅರಕಲವಾಡಿ ಗ್ರಾಮದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯದ ಆಹಾರ ಪದಾರ್ಥಗಳನ್ನು ಗ್ರಾ.ಪಂ ಅಧ್ಯಕ್ಷ ಮಹದೇವಯ್ಯ ಹಾಗೂ ಮುಖಂಡರು ಈಚೆಗೆ ಪರಿಶೀಲಿಸಿದರು
ಅರಕಲವಾಡಿ ಗ್ರಾಮದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯದ ಆಹಾರ ಪದಾರ್ಥಗಳನ್ನು ಗ್ರಾ.ಪಂ ಅಧ್ಯಕ್ಷ ಮಹದೇವಯ್ಯ ಹಾಗೂ ಮುಖಂಡರು ಈಚೆಗೆ ಪರಿಶೀಲಿಸಿದರು   

ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ ಗ್ರಾಮದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯದ ಆಹಾರ ಧಾನ್ಯಗಳಲ್ಲಿ ಈಚೆಗೆ ಹುಳುಗಳ ರಾಶಿಯೇ ಕಂಡುಬಂದಿದೆ! ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ ಹಾಗೂ ಸಂಘಟನೆಯ ಮುಖಂಡರು ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ  ಅಕ್ಕಿ, ರಾಗಿ, ಗೋಧಿ ಸೇರಿದಂತೆ ಇತರೆ ಆಹಾರ ಪದಾರ್ಥದಲ್ಲಿ ಹುಳುಗಳ ರಾಶಿ ಕಂಡು ಬಂತು.

ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಗೆ ಹಾಸ್ಟೆಲ್‌ನಲ್ಲಿನ ಸಮಸ್ಯೆ ಕುರಿತು ದೂರು ಬಂದ ಕಾರಣ ಅಲ್ಲಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಹಾಸ್ಟೆಲ್‌ ಸಮಸ್ಯೆಗಳ ದರ್ಶನವಾಯಿತು.

ವಿದ್ಯಾರ್ಥಿಗಳಿಂದ ದೂರು: ಮೆನು ಪ್ರಕಾರ ಊಟ, ತಿಂಡಿ, ಕಾಫಿ, ಟೀ ವಿತರಿಸುತ್ತಿಲ್ಲ. ಹುಳುವಿರುವ ಅನ್ನ, ಉಪ್ಪಿಟ್ಟು, ನೀರಿನಂತೆ ಇರುವ ಸಂಬಾರು ನೀಡುತ್ತಾರೆ. ರಾಗಿಮುದ್ದೆ ನೀಡುತ್ತಿಲ್ಲ. ಮಜ್ಜಿಗೆ, ಹಾಲು, ಚಿಕನ್ ಸರಿಯಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ADVERTISEMENT

ಕೆಟ್ಟಿರುವ ಯುಪಿಎಸ್ ಸರಿಪಡಿಸಿಲ್ಲ, ಆಟದ ಮೈದಾನದಲ್ಲಿ ಗಿಡಗಂಟಿ ಬೆಳೆದಿದೆ. ಫಿಲ್ಟರ್ ನೀರು ಕೊಡುತ್ತಿಲ್ಲ. ಶೌಚಾಲಯದ ಕೊಠಡಿಗೆ ಬಲ್ಬ್‌ ಅಳವಡಿಸಿಲ್ಲ. ಹಾಸಿಗೆ, ಹೊದಿಕೆಗಳಿಲ್ಲ. ಕೊಠಡಿಗಳಿಗೆ ಚಿಲಕ ಹಾಕಿಲ್ಲ. ಸೊಳ್ಳೆಪರದೆ ಕೊಟ್ಟಿಲ್ಲ ಎಂದು ಹತ್ತಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಬಿಚ್ಚಿಟ್ಟರು.

ಸೋಮವಾರದಂದು ಬೆಳಿಗ್ಗಿನ ತಿಂಡಿ ನೀಡುತ್ತಿಲ್ಲ. ಶನಿವಾರ, ಭಾನುವಾರ ಅಡಿಗೆಯವರು ಇಲ್ಲ ಎಂದು ಬಲವಂತವಾಗಿ ಮನೆಗೆ ಕಳುಹಿಸುತ್ತಾರೆ. ಇದನ್ನು ಪ್ರಶ್ನಿಸಿದರೆ, ‘ನಿಮ್ಮನ್ನು ಹಾಸ್ಟೆಲ್‌ನಿಂದ ಹೊರಗೆ ಹಾಕಿಬಿಡುತ್ತೇವೆ’ ಎಂದು ಬೆದರಿಸುತ್ತಾರೆ ಎಂದು ಹೇಳಿಕೊಂಡರು.

ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಮಾತನಾಡಿ, ಹಾಸ್ಟೆಲ್‌ನಲ್ಲಿ 25 ವಿದ್ಯಾರ್ಥಿಗಳು ಇದ್ದಾರೆ. ತಿಂಗಳಿಗೆ 15 ಕೆ.ಜಿ ಚಿಕನ್ ಹಾಗೂ 150 ಲೀಟರ್ ಹಾಲು ಖರೀದಿಸಿರುವುದಾಗಿ ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ, ಆ ಪ್ರಕಾರವಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ವಿತರಿಸದೆ ಅವ್ಯವಹಾರ ನಡೆಸಿರುವ ವಾರ್ಡನ್ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್, ತಾಲ್ಲೂಕು ಅಧ್ಯಕ್ಷ ಜಿ.ಎಂ. ಶಂಕರ್, ಹೊರಗುತ್ತಿಗೆದಾರ ಕ್ಷೇಮಾಭಿವೃದ್ಧಿ  ಸಂಘದ ಅಧ್ಯಕ್ಷ ಎಸ್.ಪಿ. ಮಹೇಶ್ ಹಾಜರಿದ್ದರು.

* * 

ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ವಿತರಿಸದೆ ಅವ್ಯವಹಾರ ನಡೆಸಿರುವ ವಾರ್ಡನ್ ಮೇಲೆ ಕ್ರಮಕ್ಕೆ ಆಗ್ರಹಿಸಲಾಗುವುದು
ಮಹದೇವಯ್ಯ
ಅಧ್ಯಕ್ಷ, ಅರಕಲವಾಡಿ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.