ADVERTISEMENT

ಇಳೆಗಿಳಿಯದ ಮಳೆ; ವನ್ಯಜೀವಿಗಳಿಗಿಲ್ಲ ಜೀವಜಲದ ನೆಲೆ

ನಾ.ಮಂಜುನಾಥ ಸ್ವಾಮಿ
Published 23 ಜೂನ್ 2013, 4:45 IST
Last Updated 23 ಜೂನ್ 2013, 4:45 IST

ಯಳಂದೂರು: ಬಿಆರ್‌ಟಿ ಗಿರಿಧಾಮದ ಇಳೆ ತಣಿಸದ ಮಳೆ ತುಂತುರು ಹನಿಯ ಲೀಲೆಯಲ್ಲೇ ಕಳೆದು ಹೋಗುವ ಭಯ ಹುಟ್ಟಿಸಿದೆ. ಎಲ್ಲೆಡೆ ಸುರಿಯುವ ವರ್ಷಧಾರೆ ಇಲ್ಲಿನ ನೆಲವನ್ನು ಇನ್ನೂ ತಂಪಾಗಿಸಿಲ್ಲ. ಕೆರೆಕಟ್ಟೆ ತುಂಬದೆ ಜನ, ಜಾನುವಾರು ನೈರುತ್ಯ ಮಾನ್ಸೂನ್ ಮಳೆಯ ನಿರೀಕ್ಷೆಯಲ್ಲಿದೆ.

ವನ್ಯಜೀವಿಗಳ ಜಲಕ್ರೀಡೆಗೆ ಜೀವತುಂಬುವ ಅನೇಕ ಊಟೆಗಳಲ್ಲಿ ನೀರಿನ ಬುಗ್ಗೆ ಈ ಭಾರಿ ಚಿಮ್ಮಿಲ್ಲ. ವನ್ಯಧಾಮದ ಸಣ್ಣಪುಟ್ಟ ಜಲಾಶಯಗಳಲ್ಲಿ ನೀರಿನ ಒರತೆ ಕಾಣದೆ ಆನೆ ಹಾಗೂ ಪಕ್ಷಿಸಂಕುಲ ನಿಂತ ನೀರನ್ನೆ ಬಳಸುವಂತೆ ಆಗಿದೆ.

ತಾಲ್ಲೂಕಿನಲ್ಲಿ ಜನವರಿ- ಮಾರ್ಚ್ ನಡುವೆ ಶುಷ್ಕ ವಾತಾವರಣ ಇರುತ್ತದೆ. ಏಪ್ರಿಲ್- ಮೇ ಬೇಸಿಗೆ ಕಾಲ. ಜೂನ್- ಅಕ್ಟೋಬರ್ ನಡುವೆ ಮಳೆ ಸುರಿಯುತ್ತದೆ. ಆದರೆ, ಬಿಆರ್‌ಟಿ ಪರಿಸರದಲ್ಲಿ ಸಾಪೇಕ್ಷ ತೇವಾಂಶ ಹೆಚ್ಚು ಇರುತ್ತದೆ. ಇಲ್ಲಿನ ಬೆಟ್ಟಗಳು ಗ್ರಾನೈಟ್ ಶಿಲೆಗಳಿಂದ ಸಮೃದ್ಧವಾಗಿವೆ. ಮಣ್ಣಿನಲ್ಲಿ ಲ್ಯಾಟರೈಟ್ ಅಂಶವೂ ಹೇರಳವಾಗಿದೆ. ಮೆಕ್ಕಲು ಮಣ್ಣು ಸಂಗ್ರಹ ಸಹಜವಾಗಿಯೇ ಹೆಚ್ಚಿದೆ. ಇಲ್ಲಿರುವ 30ಕ್ಕೂ ಹೆಚ್ಚು ಪುಟ್ಟ ಕೆರೆ, ಮಳೆಸೋನೆಯಲ್ಲಿ ಹರಿಯುವ ಹೊಳೆಗಳು ವರ್ಷಪೂರ್ತಿ ಅಂತರ್ಜಲವನ್ನು ತುಂಬಿಸುತ್ತವೆ. ಆದರೆ, ಮೂರು ವರ್ಷಗಳಿಂದ ಬೀಳದ ವರ್ಷಧಾರೆ ಜಲ ಮರುಪೂರಣಗೊಳಿಸಿಲ್ಲ. ಇದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಏಪ್ರಿಲ್ 50.5, ಮೇ 55.4, ಜೂನ್ 10.9 ಮಿ.ಮೀಟರ್ ಮಳೆ ಸುರಿದಿದೆ. ಇದೇ ವೇಳೆ, ಬಿಳಿಗಿರಿರಂಗನಬೆಟ್ಟದ 540 ಚ.ಕಿ.ಮೀಟರ್ ವ್ಯಾಪ್ತಿಯಲ್ಲಿ, ಏಪ್ರಿಲ್‌ನಲ್ಲಿ 47.2, ಮೇ 25.9, ಜೂನ್ 6.1ಮಿ.ಮೀಟರ್ ದಾಖಲಾಗಿದೆ ಎಂದು ಮಳೆ ಅಂಕಿ ಅಂಶ ತಿಳಿಸುತ್ತದೆ. ಇಲ್ಲಿನ ಸರಾಸರಿ ಮಳೆ ಪ್ರಮಾಣ 100-150ಸೆಂ.ಮೀ. ನಡುವೆ ಇದೆ. ಹೊನಮೇಟಿಯಲ್ಲಿ 250 ಸೆಂ.ಮೀ. ಮಳೆ ಬೀಳುವುದೂ ಇದೆ. ಗುಂಡಾಲ, ಸುವರ್ಣಾವತಿ ದೊಡ್ಡಜಲಾಶಯಗಳು, ಚಿಕ್ಕದಾದ ಬೆಳ್ಳಟ್ಟ ಹಾಗೂ ಕೃಷ್ಣಯನ ಕಟ್ಟೆಗಳಲ್ಲೂ ಅಲ್ಪ ಪ್ರಮಾಣದ ನೀರು ಉಳಿಸಿಕೊಂಡಿದೆ.

ನಿಸರ್ಗಧಾಮದಲ್ಲಿ ನೂರಾರು ಕಿರುತೊರೆಗಳಿವೆ. ಸಟ್ಟರುಕೆರೆ, ನವಿಲುಕಟ್ಟೆ, ನೀರ‌್ಗೆರೆ, ತೆಂಕೆರೆ, ಕುಪುಟಿಕೆರೆ, ತೋಬಿನಕಟ್ಟೆ, ಗೊಟ್ಟಿಗೆರೆ, ಸೇಗೆಬೆಟ್ಟಕೆರೆ, ಮರಿಮಾವುಕೆರೆ, ಮರಳುಕಾರೆ, ಕಟ್ಟೆಬಾವಿಕೆರೆ, ಆನೆವಾಯಿಕೆರೆ, ಅಲುಗಲಿ, ಬಿಜಿಕೆರೆ, ಜೂಮನಕೆರೆ, ಗೊತ್ತಿಗೆರೆ, ಕಮ್ಮಾರಕಡವು, ಬಸವನಕೆರೆಗಳಲ್ಲಿ ಮಳೆನೀರು ಸಂಪೂರ್ಣ ತುಂಬಿಸಿಲ್ಲ. ಕಳೆದ 2 ತಿಂಗಳಿಂದ ಬೀಳುವ ಸೋನೆಮಳೆಗೆ ಬನ ಹಸಿರುಟ್ಟಿದೆ. ಆದರೆ ಸಣ್ಣ ಝರಿಗಳು, ಕಿರು ಹೊಂಡಗಳು ತುಂಬದ ಕಾರಣ ಇಲ್ಲಿನ ಕಾನನದಲ್ಲಿ ಜೀವಸಂಕುಲಕ್ಕೆ ಬೇಕಾದ ಜೈವಿಕ ಸಿದ್ಧತೆಗಳು ನಡೆದಿಲ್ಲ.

ಕೆರೆ ಕಟ್ಟೆ ತುಂಬಿದರೆ ಜೀಬಜಂತುಗಳಿಗೆ ನೀರು
`ಸೋಮರಸನಕೆರೆ ಸಂಪೂರ್ಣ ಬತ್ತಿದೆ. ಹಸಿರುಪಾಚಿ ಕಟ್ಟಿದೆ. ಇನ್ನಿತರ ಕಟ್ಟೆಗಳಲ್ಲಿ ಸಂಗ್ರಹವಾಗಿರುವ ನೀರು ವನ್ಯಮೃಗಗಳ ದಾಹ ನೀಗಿಸುವಷ್ಟು ಹರಿದು ಬಂದಿಲ್ಲ. ಇರುವ ಸ್ವಲ್ಪ ನೀರಲ್ಲಿ ಚಲ್ಲಾಟವಾಡುವ ಆನೆಗಳು ಅಲ್ಲಿ ಲದ್ದಿ ಹಾಕುವುದರಿಂದ ಮತ್ತಷ್ಟು ಕಲುಷಿತವಾಗುತ್ತಿದೆ. ಮಳೆ ಸುರಿದು ಎಲ್ಲ ಕೆರೆಕಟ್ಟೆ ತುಂಬಿದರೆ ಮಾತ್ರ ಎಲ್ಲ ಜೀವಜಂತುಗಳಿಗೂ ನೀರು ಲಭ್ಯವಾಗುತ್ತದೆ'
-ಜಡೇಸ್ವಾಮಿ. ಏಟ್ರೀ ಕ್ಷೇತ್ರತಜ್ಞ

`ಬಿಆರ್‌ಟಿ ರಕ್ಷಿತಾರಣ್ಯದಲ್ಲಿ ಸಾವಿರಕ್ಕೂ ಹೆಚ್ಚು ಸಸ್ಯ ಪ್ರಬೇಧಗಳಿವೆ. ಮರ, ಪೊದೆ, ಮೂಲಿಕೆ, ಆರ್ಕಿಡ್, ಬಳ್ಳಿಗಳ ಸಂಕುಲಗಳಿವೆ. ಮಳೆ ಕೊರತೆಯಿಂದ ಇವುಗಳ ಲಭ್ಯತೆಯೂ ಕಡಿಮೆಯಾಗುತ್ತವೆ. ಆನೆ ದಿನಕ್ಕೆ 100-150ಕಿಲೋಗೂ ಹೆಚ್ಚು ಸಸ್ಯವರ್ಗದಿಂದ ಹಸಿವು ನೀಗಿಸಿಕೊಳ್ಳುತ್ತವೆ. 40-60 ಗ್ಯಾಲನ್ ನೀರಿನ ಲಭ್ಯವೂ ಇವುಗಳಿಗೆ ಬೇಕು. ಜಲಕ್ರೀಡೆಗಾಗಿ ನೂರಾರು ಕಿ.ಮೀ ತನ್ನದೇ ಕಾರಿಡಾರಿನಲ್ಲಿ ವಲಸೆ ಹೋಗುವುದು ಇದೆ. ಇತ್ತೀಚಿಗೆ ಕಾಡಿನ ಕೆರೆಗಳಿಗೆ ನೀರು ತುಂಬಿಸುವ ಕಾಯಕವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಮಳೆ ಸುರಿದರೆ ಮಾತ್ರ ಜೀವವೈವಿಧ್ಯ ಅರಳುತ್ತದೆ'.
-ಪರಮೇಶ್,
ಬಿಆರ್‌ಟಿ ಆನೆಕಾರಿಡಾರ್ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.